Advertisement

ಬಿಜೆಪಿ ವಿಜಯೋತ್ಸವ ವೇಳೆ ಬಣ್ಣದಲ್ಲಿ ರಾಸಾಯನಿಕ ಬೆರಕೆ

05:13 AM Jun 01, 2019 | Team Udayavani |

ಬ್ಯಾಡಗಿ: ವಿಜಯೋತ್ಸವ ಸಂದರ್ಭದಲ್ಲಿ ಬಣ್ಣದಲ್ಲಿ (ಗುಲಾಲ) ರಾಸಾಯನಿಕ ಬೆರೆಸಿ ಎರಚಿದ ಕಾರಣ ಬಿಜೆಪಿಯ 15ಕ್ಕೂ ಹೆಚ್ಚು ಕಾರ್ಯಕರ್ತರು ಅಸ್ವಸ್ಥರಾದ ಘಟನೆ ಶುಕ್ರವಾರ ಮಧ್ಯಾಹ್ನ 3 ಘಂಟೆ ಸುಮಾರಿಗೆ ನಡೆದಿದೆ. ಶುಕ್ರವಾರ ಬೆಳಗ್ಗೆ ಪುರಸಭೆ ಫಲಿತಾಂಶ ಪ್ರಕಟವಾಗಿದ್ದು ಬಿಜೆಪಿ ಸ್ಪಷ್ಟ ಬಹುಮತ ಪಡೆದಿತ್ತು. ಇದೇ ಖುಷಿಯಲ್ಲಿ ವಿಜಯೋತ್ಸವ ಆಚರಿಸುತ್ತ ಸಾಗಿದ ಬಿಜೆಪಿ ಕಾರ್ಯಕರ್ತರು ಹರ್ಷದಿಂದ ಬಣ್ಣದಲ್ಲಿ ಮಿಂದೆದ್ದರು.

Advertisement

16ನೇ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿ ಸುಭಾಷ ಮಾಳಗಿ ಜಯಗಳಿಸಿದ್ದು ವಿಜಯೋತ್ಸವ ಆಚರಿಸುವ ವೇಳೆಯಲ್ಲಿ ಪರಸ್ಪರ ಬಣ್ಣ ಎರಚಿಕೊಂಡಿದ್ದಾರೆ. ಇದೇ ಸಮಯದಲ್ಲಿಯೇ ಅವಘಡ ಸಂಭವಿಸಿದ್ದು ಇದ್ದಕ್ಕಿದ್ದಂತೆ ಮೈ ಉರಿಯಲು ಆರಂಭಿಸಿದೆ. ಸುಮಾರು 15ಕ್ಕೂ ಹೆಚ್ಚು ಕಾರ್ಯಕರ್ತರು ಅಸ್ವಸ್ಥರಾಗಿದ್ದು ಅವರನ್ನು ತಾಲೂಕಾಸ್ಪತ್ರೆ ದಾಖಲು ಮಾಡಲಾಯಿತು.

ಕಾರ್ಯಕರ್ತರ ನರಳಾಟ: ನರಳಾಡುತ್ತಲೇ ತಾಲೂಕಾಸ್ಪತ್ರೆಗೆ ದಾಖಲಾದ ಪುರುಷ/ಮಹಿಳಾ ಕಾರ್ಯಕರ್ತರು ಬಣ್ಣದಿಂದ ಉಂಟಾದ ಉರಿ ತಾಳಲಾರದೇ ಗೋಳಾಡುತ್ತಿದ್ದರು. ಕಾರ್ಯಕರ್ತರ ಮುಖ, ಕುತ್ತಿಗೆ, ತಲೆ, ಮೈಮೇಲೆಲ್ಲ ಸುಟ್ಟ ಗಾಯಗಳಾಗಿದ್ದು, ವೈದ್ಯರು ಚಿಕಿತ್ಸೆ ನೀಡಿದ್ದಾರೆ. ತಾಲೂಕಾಸ್ಪತ್ರೆಗೆ ಭೇಟಿ ನೀಡಿದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹಾಗೂ ಮಾಜಿ ಶಾಸಕ ಸುರೇಶಗೌಡ ಪಾಟೀಲ ಹಾಗೂ ಇನ್ನಿತರರು ಆರೋಗ್ಯ ವಿಚಾರಿಸಿದರು.

ಘಟನೆ ದುರುದ್ದೇಶಪೂರ್ವಕವೇ ಅಥವಾ ಬಣ್ಣದಲ್ಲಿರುವ ಲೋಪದೋಷವೇ ಎಂಬುದರ ಬಗ್ಗೆ ಮಾಹಿತಿ ಪಡೆದು ವರದಿ ನೀಡುವಂತೆ ರಕ್ಷಣಾ ಇಲಾಖೆ ಹಾಗೂ ವೈದ್ಯಾ ಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ದುರುದ್ದೇಶಪೂರ್ವಕವೇ ಆಗಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಪೊಲೀಸ್‌ ಸಿಬ್ಬಂದಿಗೆ ತಿಳಿಸಿದ್ದೇನೆ.
-ವಿರೂಪಾಕ್ಷಪ್ಪ ಬಳ್ಳಾರಿ, ಶಾಸಕ

ಬಣ್ಣದಲ್ಲಿ ಖಾರದಪುಡಿ ಬೆರೆಸಿ ಎರಚಿದರೆ ಈ ರೀತಿ ಮೈಯೆಲ್ಲ ಉರಿ ಉಂಟಾಗಬಹುದು. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಎರಚಿದ ಬಣ್ಣದ ಸ್ಯಾಂಪಲ್‌ ದೊರೆತಲ್ಲಿ ಲ್ಯಾಬ್‌ಗ ಕಳಿಸಿ ಪರೀಕ್ಷೆ ನಡೆಸಲಾಗುವುದು, ಬಳಿಕ ನಿಜಾಂಶ ಹೊರಬೀಳಲಿದೆ.
-ಡಾ. ಪುಟ್ಟರಾಜ, ತಾಲೂಕಾಸ್ಪತ್ರೆ ವೈದ್ಯಾಧಿಕಾರಿ

Advertisement

ಇದೊಂದು ಆತಂಕಕಾರಿ ಘಟನೆ. ರಾಜಕೀಯದಲ್ಲಿ ಸೋಲು ಗೆಲವು ಸಹಜ ಆದರೆ ಇದನ್ನೇ ಮುಂದಿಟ್ಟುಕೊಂಡು ಉದ್ದೇಶಪೂರ್ವಕವಾಗಿ ಬಣ್ಣದಲ್ಲಿ ಖಾರದ ಪುಡಿ ಬೆರೆಸಿ ಎರೆಚಿರಬಹುದು ಎಂಬುದನ್ನು ತಳ್ಳಿ ಹಾಕುವಂತಿಲ್ಲ. ಒಂದು ವೇಳೆ ಇದು ನಿಜವೇ ಆಗಿದ್ದಲ್ಲಿ ಅಂತವರ ಮೇಲೆ ಕಾನೂನು ರೀತಿ ಕ್ರಮವಾಗಬೇಕು.
-ಸುರೇಶಗೌಡ ಪಾಟೀಲ, ಮಾಜಿ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next