Advertisement

ರಾಸಾಯನಿಕ ಮುಕ್ತ ಕೃಷಿ: ಸಮೃದ್ಧ ಬೆಳೆ ಬೆಳೆದ ಶಾನಾಡಿ ರಾಮಚಂದ್ರ ಭಟ್‌

10:30 AM Dec 22, 2019 | mahesh |

ಹೆಸರು: ರಾಮಚಂದ್ರ ಭಟ್‌ ಶಾನಾಡಿ
ಏನೇನು ಕೃಷಿ: ಕಬ್ಬು, ಅಡಿಕೆ, ತೆಂಗು
ಎಷ್ಟು ವರ್ಷ: 30
ಕೃಷಿ ಪ್ರದೇಶ: 12 ಎಕರೆ
ಸಂಪರ್ಕ: 9448914872

Advertisement

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರ ಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ತೆಕ್ಕಟ್ಟೆ: ಮೂವತ್ತು ವರ್ಷಗಳಿಂದ ಸಾವಯವ ಕೃಷಿ ನಂಬಿ ಯಶಸ್ವಿಯಾಗಿರುವ ಕುಂದಾಪುರ ತಾಲೂಕಿನ ಪ್ರಗತಿಪರ ಸಾವಯವ ಕೃಷಿಕ ಕೆದೂರು ಶಾನಾಡಿ ರಾಮಚಂದ್ರ ಭಟ್‌ ಅವರು 7ನೇ ತರಗತಿ ಶಿಕ್ಷಣ ಪಡೆದು, ಪರಂಪರಾಗತವಾಗಿ ಬಂದ ಜಮೀನಿನಲ್ಲಿ ರಾಸಾಯನಿಕ ಮುಕ್ತ ಹಟ್ಟಿಗೊಬ್ಬರ ಬಳಸಿ ಭತ್ತದ ಬೆಳೆಯಲ್ಲಿ ಉತ್ತಮ ಫಸಲು ಪಡೆದು ಉಡುಪಿ ಜಿಲ್ಲೆಗೆ ಮಾದರಿಯಾಗಿದ್ದಾರೆ.

ಬದಲಾದ ಕಾಲಮಾನದಲ್ಲಿ ಕೃಷಿ ಚಟುವಟಿಕೆ ಕಡಿಮೆ ಯಾಗುತ್ತಿರುವ ಈ ಸಂದರ್ಭದಲ್ಲಿ ಶಾನಾಡಿ ರಾಮಚಂದ್ರ ಭಟ್‌ ಅವರು ಕೃಷಿ ಹಾಗೂ ಹೈನುಗಾರಿಕೆಯನ್ನೇ ಮೂಲವಾಗಿರಿಸಿಕೊಂಡು ತಮ್ಮ ಮನೆಯ ಎದುರಿನ ತೋಟದಲ್ಲಿ ಅಡಿಕೆ, ತೆಂಗು, ಮಾವು, ಹಲಸು, ಕಾಳುಮೆಣಸು, ಗೇರು, ತರಕಾರಿ ಸಹಿತ ವಿವಿಧ ಬೆಳೆ ಬೆಳೆದಿದ್ದಾರೆ. ಸುಮಾರು 12 ಎಕರೆ ಕೃಷಿ ಭೂಮಿಯಲ್ಲಿ ಭತ್ತ ಹಾಗೂ ಕಬ್ಬು ಬೆಳೆದಿದ್ದಾರೆ. ಸುಮಾರು 3 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ.

ಆಲೆಮನೆ
ಗ್ರಾಮಕ್ಕೆ ಹರಿದು ಬಂದ ವಾರಾಹಿ ನೀರನ್ನು ಬಳಸಿಕೊಂಡು ಸಮೃದ್ಧ ಕಬ್ಬು ಬೆಳೆಯುವ ಜತೆಗೆ ಸುಮಾರು 6 ಲಕ್ಷ ರೂ.ವರೆಗೆ ವ್ಯಯಿಸಿ ಸ್ಥಳೀಯ ಕೃಷಿಕ ಉಮಾನಾಥ ಶೆಟ್ಟಿ ಅವರ ಜತೆಗೂಡಿ ಇತ್ತೀಚೆಗೆ ಗ್ರಾಮೀಣ ಭಾಗದಲ್ಲಿ ಮರೆಯಾಗುತ್ತಿರುವ ಕಬ್ಬಿನ ಆಲೆಮನೆಗೆ (ಬೆಲ್ಲದ ಗಾಣ) ಮರುಜೀವ ತುಂಬುವ ಕೈಂಕರ್ಯದಲ್ಲಿ ತೊಡಗಿದ್ದಾರೆ.

Advertisement

ವಿಶೇಷ ಗೇರು ತಳಿ ಸಂರಕ್ಷಣೆ
ಮೂಲ ಆವಿಷ್ಕಾರಗೊಂಡಿರುವ ವಿಶೇಷ ಗೇರು ತಳಿಯನ್ನು ನೆಟ್ಟು ಶಾನಾಡಿ ಅವರು ಯಶಸ್ವಿಯಾಗಿದ್ದು, ಪುತ್ತೂರು ಗೇರು ಸಂಶೋಧನಾ ಕೇಂದ್ರದ ಅಧ್ಯಯನ ತಂಡ ಆಗಮಿಸಿ ಪ್ರಶಂಸೆ ವ್ಯಕ್ತಪಡಿಸಿದೆೆ. ಈ ಗೇರುತೋಟದ ಅಧ್ಯಯನಕ್ಕೆ ಕಾಂಬೋಡಿಯಾದ ರೈತರು ಬಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಶಸ್ತಿ – ಸಮ್ಮಾನ
61 ವರ್ಷ ವಯಸ್ಸಿನ ಕೃಷಿಕ ಶಾನಾಡಿ ರಾಮಚಂದ್ರ ಭಟ್‌ ಅವರನ್ನು 2010 ರಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದೆ. 2013-14ರಲ್ಲಿ ಉಡುಪಿ ಜಿಲ್ಲಾ ಸಮಗ್ರ ಕೃಷಿ ಪ್ರಶಸ್ತಿ ಸಂದಿದೆ. ಜತೆಗೆ ಅವರು ಹಾಲು ಹಾಕುವ ಸೊಸೈಟಿಯಲ್ಲಿ ನಿರಂತರವಾಗಿ ಪ್ರಥಮ ಸ್ಥಾನ ಗಳಿಸುತ್ತಿದ್ದಾರೆ.

ಅಂತರಗಂಗೆ ಕಾಟಕ್ಕೆ ಪರಿಹಾರ
ಗ್ರಾಮದಲ್ಲಿ ಮಳೆಗಾಲದಲ್ಲಿ ತಲೆದೋರುವ ಅಂತರಗಂಗೆ ಸಮಸ್ಯೆಗೆ ಪರಿಹಾರ ಕಲ್ಪಿಸಲು ಅಧ್ಯಯನ ತಂಡವೊಂದು 10 ವರ್ಷಗಳ ಹಿಂದೆ ಆಗಮಿಸಿದಾಗ ಅವರ ಎದುರಿನಲ್ಲಿಯೇ ಅನುಭವಿ ಶಾನಾಡಿ ರಾಮಚಂದ್ರ ಭಟ್‌ ಅವರು ಅಂತರಗಂಗೆಯನ್ನು ಗೊಬ್ಬರವನ್ನಾಗಿಸಿ ಬಳಕೆ ಮಾಡಬಹುದು ಎಂದು ಹೇಳಿದರು. ಆದರೆ ಅಲ್ಲೇ ಇದ್ದ ಸ್ಥಳೀಯ ರೈತರೊಬ್ಬರು ಇವರನ್ನು ಅಪಹಾಸ್ಯ ಮಾಡಿದರು. ಆದರೆ ಛಲ ಬಿಡದ ಶಾನಾಡಿ ಅವರು ಈ ಪ್ರಯೋಗದಲ್ಲಿ ಯಶ ಕಂಡಿದ್ದು, ಇತರ ರೈತರಿಗೂ ಮಾದರಿಯಾಗಿದ್ದಾರೆ.

ಸಾವಯವ ಕೃಷಿ
ಸಾವಯವ ಗೊಬ್ಬರ, ಜೀವಾಮೃತ ಬಳಸಿಕೊಂಡು, ಭೂಮಿಯ ಫಲವತ್ತತೆಯನ್ನು ಕಾಯ್ದುಕೊಂಡು ಸುಮಾರು ಮೂವತ್ತು ವರ್ಷಗಳಿಂದಲೂ ಸಾವಯವ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಯಶಸ್ಸು ಕಂಡಿದ್ದೇನೆ. ಅಲ್ಲದೆ ನಮ್ಮ ಮನೆಯಲ್ಲಿ ಮಳೆನೀರು ಕೊಯ್ಲು ಸೇರಿದಂತೆ ತೋಟದಲ್ಲಿಯೇ ನೀರಿಂಗಿಸುವ ಕಾರ್ಯವನ್ನು ಮಾಡುತ್ತಿದ್ದು, ಕೃಷಿ ಕಾರ್ಯಗಳಿಗೆ ಅನುಕೂಲವಾಗಿದೆ. ಹಾಗೆಯೇ ಇತ್ತೀಚೆಗೆ ಆಲೆಮನೆಯನ್ನು ಮರುಸ್ಥಾಪಿಸಿದ್ದು, ಖುಷಿ ನೀಡಿದ್ದು, ರಾಸಾಯನಿಕ ಮುಕ್ತ ಬೆಲ್ಲವನ್ನು ತಯಾರಿಸಬೇಕು ಎನ್ನುವುದೇ ನಮ್ಮ ಮೂಲ ಉದ್ದೇಶವಾಗಿದೆ. ಪಟ್ಟಣ ಪಂಚಾಯತ್‌ನ ಹಸಿ ತ್ಯಾಜ್ಯವನ್ನು ಸಂಸ್ಕರಿಸಿ ಅಧ್ಯಯನಶೀಲವಾಗಿ ಕಾಂಪೋಸ್ಟ್‌ ಗೊಬ್ಬರ ತಯಾರಿಕೆಯನ್ನೂ ಮಾಡುತ್ತಿದ್ದೇವೆ.
-ಶಾನಾಡಿ , ರಾಮಚಂದ್ರ ಭಟ್‌ ಸಾಧಕ ಪ್ರಗತಿಪರ ಸಾವಯವ ಕೃಷಿಕರು.

ಟಿ. ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next