ಮುಂಬಯಿ: ಚೆಂಬೂರು ಕರ್ನಾಟಕ ಸಂಘದ ಸಂಚಾಲಕತ್ವದ ಚೆಂಬೂರು ಕರ್ನಾಟಕ ಹೈಸ್ಕೂಲ್, ಜೂನಿಯರ್ ಕಾಲೇಜು, ರಾತ್ರಿ ಕಾಲೇಜು ಹಾಗೂ ಕಾನೂನು ಪದವಿ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಡಿ. 21ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಕೆ. ಸಿದ್ಧರಾಮಪ್ಪ ಅವರು ಮಾತನಾಡಿ, ಚೆಂಬೂರು ಕರ್ನಾಟಕ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆಯನ್ನು ಕಂಡು ಸಂತೋಷವಾಗುತ್ತಿದೆ. ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದಾಗ ಮಾತ್ರ ಅವರು ಸರ್ವತೋಮುಖ ಅಭಿವೃದ್ಧಿಯಾಗುತ್ತಾದೆ. ನಾನೂ ಕೂಡ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಯಾಗಿದ್ದು, ಆದ್ದರಿಂದ ಭಾಷೆಯ ಬಗ್ಗೆ ಕೀಳರಿಮೆ ಬೇಡ. ಶ್ರದ್ಧೆ, ಏಕಾಗ್ರತೆ, ಸತತ ಪ್ರಯತ್ನದಿಂದ ಯಾವುದೇ ಸಾಧನೆಯನ್ನು ಮಾಡಲು ಸಾಧ್ಯವಿದೆ. ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಂಸ್ಕಾರವಂತರಾಗಿ ಬೆಳೆಯಬೇಕು ಎಂದರು.
ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷ ನ್ಯಾಯವಾದಿ ಎಚ್. ಕೆ. ಸುಧಾಕರ ಅರಾಟೆ ಅವರು ಮಾತನಾಡಿ, ಚೆಂಬೂರು ಕರ್ನಾಟಕ ಸಂಘವು ಒಂದು ಉತ್ತಮ ಶೈಕ್ಷಣಿಕ ಸಂಸ್ಥೆಯಾಗಿದ್ದು, ಮಧ್ಯಮ ವರ್ಗದ ಮಕ್ಕಳಿಗೆ ಗುಣಮಟ್ಟದ ಉಚಿತ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಕಾನೂನು ಪದವಿ ಕಾಲೇಜು ಮತ್ತು ರಾತ್ರಿ ಪದವಿ ಕಾಲೇಜನ್ನು ಪ್ರಾರಂಭಿಸಿದ ಬಗ್ಗೆ ನಮಗೆ ಹೆಮ್ಮೆಯಿದೆ. ಕಾನೂನು ಕಾಲೇಜಿನ ವಿದ್ಯಾರ್ಥಿಗಳ ಮಹತ್ತರ ಸಾಧನೆಗಳನ್ನು ನೋಡಿದಾಗ ಸಂತೋಷವಾಗುತ್ತಿದೆ. ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುವುದರೊಂದಿಗೆ ಸಂಸ್ಕೃತಿ, ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಂಡು ಆದರ್ಶಪ್ರಾಯ ರಾಗಿ ಬಾಳಬೇಕು. ಶಿಕ್ಷಕರು ಮತ್ತು ಪಾಲಕರು ಮಕ್ಕಳ ಅಭಿರುಚಿಯನ್ನು ಅರಿತುಕೊಂಡು ಅವರನ್ನು ಬೆಳೆಸಬೇಕು ಎಂದು ನುಡಿದು ಶುಭಹಾರೈಸಿದರು.
ಪೂರ್ವ ಮಾಧ್ಯಮಿಕ ಶಾಲೆಯ ವರದಿಯನ್ನು ಮಧುಮಿತಾ ಬಿಸ್ವಾಸ್, ಪ್ರಾಥಮಿಕ ಶಾಲೆಯ ವರದಿಯನ್ನು ವಿನೀತಾ ಖೀರ್ ಮತ್ತು ಮಾಧ್ಯಮಿಕ ಹಾಗೂ ಜೂನಿಯರ್ ಕಾಲೇಜಿನ ಶಾಲಾ ವರದಿಯನ್ನು ಮುಖ್ಯ ಶಿಕ್ಷಕಿ ಮನ್‌ಜಿàತ್ ಕೌರ್ ಅವರು ವಾಚಿಸಿದರು. ಜೂನಿಯರ್ ಕಾಲೇಜಿನ ಶಿಕ್ಷಕಿ ಶೀತಲ್ ಅಮಿತ್ ಅವರು ವಂದಿಸಿದರು.
ಶಿಕ್ಷಕಿ ಜಾಹ್ನವಿ ಪ್ರಭು ಮತ್ತು ನಿಶಾ ವಿಶ್ವಕರ್ಮ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳಾದ ವೈಭವ್, ಶರಣ್ ಶೆಟ್ಟಿ ಹಾಗೂ ತಹರೀಮ್ ಖಾನ್ ಅವರು ಸಭಾ ಕಾರ್ಯಕ್ರಮವನ್ನು ನಿರ್ವಹಿಸಿದರು. ವೇದಿಕೆಯಲ್ಲಿ ಚೆಂಬೂರು ಕರ್ನಾಟಕ ಸಂಘದ ಉಪಾಧ್ಯಕ್ಷ ಪ್ರಭಾಕರ ಬೋಳಾರ್, ಗೌರವ ಪ್ರಧಾನ ಕಾರ್ಯದರ್ಶಿ ದೇವದಾಸ್ ಶೆಟ್ಟಿಗಾರ್, ಗೌರವ ಕೋಶಾಧಿಕಾರಿ ಟಿ. ಆರ್. ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ವಿನೀತಾ ಖೀರ್, ಮಾಧ್ಯಮಿಕ ಶಾಲಾ ಮುಖ್ಯ ಶಿಕ್ಷಕಿ ಮನ್‌ಜಿàತ್ ಕೌರ್ ಶೈನಿ, ರಾತ್ರಿ ಪದವಿ ಕಾಲೇಜಿನ ಮುಖ್ಯಸ್ಥೆ ಸತ್ಯಭಾಮಾ ನಾಡರ್ ಅವರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಚೆಂಬೂರು ಕರ್ನಾಟಕ ಹೈಸ್ಕೂಲ್, ಜೂನಿಯರ್ ಕಾಲೇಜು, ರಾತ್ರಿ ಕಾಲೇಜು ಹಾಗೂ ಕಾನೂನು ಪದವಿ ಕಾಲೇಜಿನ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಸೇರಿದಂತೆ ವಿವಿಧ ಮನೋರಂಜನ ಕಾರ್ಯಕ್ರಮಗಳು ನಡೆದವು.
ಚೆಂಬೂರು ಕರ್ನಾಟಕ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿ ತಿಯ ಸದಸ್ಯರು, ತುಳು- ಕನ್ನಡಿಗರು, ಶಿಕ್ಷಣ ಪ್ರೇಮಿಗಳು, ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪಾಲಕ- ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಅತಿಥಿ-ಗಣ್ಯರುಗಳನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಚೆಂಬೂರು ಕರ್ನಾಟಕ ಹೈಸ್ಕೂಲ್, ಜೂನಿಯರ್ ಕಾಲೇಜು, ರಾತ್ರಿ ಕಾಲೇಜು, ಕಾನೂನು ಪದವಿ ಕಾಲೇಜಿನ ಮುಖ್ಯಸ್ಥರು, ಶಿಕ್ಷಕರು, ಶಿಕ್ಷಕೇತರ ಸಿಬಂದಿ, ವಿದ್ಯಾರ್ಥಿಗಳು ಸಹಕರಿಸಿದರು.