Advertisement

ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಅದ್ಧೂರಿ ಅಂಗಮಣಿ ಉತ್ಸವ

12:47 PM Jan 17, 2021 | Team Udayavani |

ಮೇಲುಕೋಟೆ: ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಅಂಗಮಣಿ ಉತ್ಸವ ಮತ್ತು ಸಂಕ್ರಾಂತಿ ಮಹೋತ್ಸವ ವೈಭವದಿಂದ ನೆರವೇರಿತು. ಶ್ರೀದೇವಿ ಭೂದೇವಿಗೆ ತವರು ಮನೆಯಾದ ಸಜ್ಜೆಹಟ್ಟಿ ಮಂಟಪದಲ್ಲಿ ಅಂಗಮಣಿ ಉತ್ಸವ ಪ್ರಯುಕ್ತ ಮಡಿಲು ತುಂಬುವ ಸಂಪ್ರದಾಯ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಅಂಗಮಣಿ ಉತ್ಸವದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಭಾಗವಹಿಸಿದ್ದರು.

Advertisement

ದರ್ಶನಕ್ಕೆ ಅವಕಾಶ: ಭವ್ಯವಾಗಿ ಅಲಂಕಾರಗೊಂಡ ಚೆಲುವನಾರಾಯಣ ಸ್ವಾಮಿಯ ಅರಸಿಯರಾದ ಶ್ರೀದೇವಿ-ಭೂದೇವಿ ಅಮ್ಮನವರಿಗೆ ಅತ್ಯಮೂಲ್ಯ ಹಣ್ಣುಗಳಿಂದ ಮಡಿಲು ತುಂಬಿ ಮಹಾಮಂಗಳಾರತಿ ನೆರವೇರಿಸಲಾಯಿತು. ಕರ್ನಾಟಕದ ವಿವಿಧ
ಭಾಗಗಳಲ್ಲಿ ಬೆಳೆದ 50ಕ್ಕೂ ಹೆಚ್ಚು ರೀತಿಯ ಹಣ್ಣು ಸಂಗ್ರಹಿಸಿ, ನೂರಾರು ತಟ್ಟೆಗಳಲ್ಲಿ ಸಜ್ಜೆ ಹಟ್ಟಿ ಮಂಟಪದಲ್ಲಿ ಜೋಡಿಸಿಟ್ಟು ಭಕ್ತರು ದರ್ಶನ ಮಾಡಲು ಅವಕಾಶ ನೀಡಲಾಗಿತ್ತು. ತಂಡೋಪತಂಡವಾಗಿ ಆಗಮಿಸಿದ ಭಕ್ತರು, ಸಜ್ಜೆಹಟ್ಟಿ ಮನೆ, ಕರಗಂ ಮನೆಯಲ್ಲಿರಿಸಿದ್ದ ತಟ್ಟೆಗಳ ಸೋಬಗನ್ನು ಕಣ್ತುಂಬಿಕೊಂಡರು. ದೇವಿಯರ ಅಂಗಮಣಿ ಉತ್ಸವ ಆರಂಭವಾಗಿ ತವರುಮನೆ
ಮಂಟಪಕ್ಕೆ ಭವ್ಯ ಮೆರವಣಿಗೆಯೊಂದಿಗೆ ತಲುಪಿತು.

ಇದನ್ನೂ ಓದಿ:ಮಮತೆಯ ಮಡಿಲು ಅನ್ನದಾಸೋಹದಲ್ಲಿ ಊಟ ವಿತರಿಸಿದ ಶಾಸಕ ಶ್ರೀನಿವಾಸ್‌

ದೇವಿಯರನ್ನು ನಡೆಮುಡಿ ಹಾಸಿ ಬರಮಾಡಿಕೊಂಡ ನಂತರ ಅನೂಚಾನ ಸಂಪ್ರದಾಯದಂತೆ ಸಜ್ಜೆಹಟ್ಟಿ ಗುರುಗಳಾದ ತಿರುನಾರಾಯಣ ಅಯ್ಯಂಗಾರ್‌, ವಸಂತ ಮತ್ತು ಕರಗಂರಾಮಪ್ರಿಯ ದಂಪತಿ ದೇವಿಯರಿಗೆ ಮಡಿಲು ಶಾಸ್ತ್ರ ಪೂರೈಸಿದರು.
ದೇವಿಯರು ತವರು ಮನೆಯಿಂದ ಬರುವುದು ತಡವಾದಾಗ ಕೋಪಗೊಂಡ ಚೆಲುವರಾಯ ಕುದುರೆ ವಾಹನದಲ್ಲಿ ಹೊರನಡೆದು ಮೂರು ಮೊಲಗಳು ಅಡ್ಡಬಂದಾಗ ವಾಪಸ್ಸು ಮರಳಿದನೆಂಬ ಸಂಪ್ರದಾಯವಿದ್ದು, ದಾರಿಯ ನಡುವೆ ಮೂರು ಮೊಲಗಳನ್ನು ಸ್ವಾಮಿಯ ಉತ್ಸವಕ್ಕೆ ಅಡ್ಡಲಾಗಿ ಬಿಟ್ಟ ನಂತರ ಕುದುರೆ ವಾಹನೋತ್ಸವ ದೇವಾಲಯಕ್ಕೆ ಮತ್ತೆ ತಲುಪುವುದರೊಂದಿಗೆ ಅಂಗಮಣಿ ಉತ್ಸವ ಮುಕ್ತಾಯವಾಯಿತು.

ರಸ್ತೆ ರಿಪೇರಿ ಕಾರಣ ಆಹೋಬಲ ಮಠದ ಸಮೀಪ ಕುದುರೆ ವಾಹನೋತ್ಸವ ಮೊಟಕುಗೊಳಿಸಿ, ಎಡಗೈ ಬಲಗೈನವರಿಗೆ ವಿಶೇಷ ಪಾರಂಪರಿಕ ಮರ್ಯಾದೆ ಸಲ್ಲಿಸಲಾಯಿತು. ದೇವಿಯರಿಗೆ ಅರ್ಪಿಸಿದ ಹಣ್ಣು, ತರಕಾರಿಗಳಿಂದ ಕದಂಬ ಮತ್ತು ರಸಾಯನ ತಯಾರಿಸಿ ಶನಿವಾರ ಭಕ್ತರಿಗೆ ನೀಡಲಾಯಿತು. ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಮಂಗಳಮ್ಮ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.