ಪ್ರಕೃತಿ ಎಂದೆಂದೂ ಕುತೂಹಲಕಾರಿ. ಕಾಡು ಕಂಡರೆ ಮನುಷ್ಯನಿಗೆ ಭಯ, ಬೆರಗು. ಮನುಷ್ಯನೆಂದರೆ ವನ್ಯಮೃಗಗಳಿಗೆ ದಿಗಿಲು. ಆದರೆ, ಕಾಡುಪ್ರಾಣಿಗಳೂ ಆಗಾಗ ಮನುಷ್ಯನ ಜೊತೆ ಸಹಬಾಳ್ವೆಯಿಂದ ಬಾಳುವುದಿದೆ. ಇದು ಅಂಥದ್ದೇ ಕಥೆ. ಪಂಜರವಿಲ್ಲದೆಯೂ ಮನುಷ್ಯರ ಸಾಂಗತ್ಯ ಬೆಳೆಸಿದ ಗಿಳಿಯ ಕಥೆ!
ಪರಿಸರದ ಮಡಿಲಲ್ಲಿರುವ 78 ಮನೆಗಳ ಪುಟ್ಟ ಊರು ಧರ್ಮಸ್ಥಳದ ಬಳಿಯ ನಡುಗುಡ್ಡೆ. ಏಳು ತಿಂಗಳಿಂದ ಇಲ್ಲಿಯ ನಿವಾಸಿಗಳಿಗೆ ಗಿಳಿಯ ಗೆಳೆತನದ ಯೋಗ ಒದಗಿದೆ. ಇಲ್ಲಿನ ನಿವಾಸಿ ಚೆಲುವಮ್ಮನ ಮನೆಯ ಬಳಿ ಪುಟ್ಟ ಗಿಳಿಮರಿಯೊಂದು ಹಾರಿಬಂತು. ಕುತೂಹಲದಿಂದ ಚೆಲುವಮ್ಮ ಗಿಳಿಯತ್ತ ಕೈಚಾಚಿದಳು. ಆವತ್ತಿನಿಂದ ಗಿಳಿ ಕುಟುಂಬದ ಸದಸ್ಯನೇ ಆಗಿಹೋಯ್ತು. ವಠಾರದ ಜನರ ಪ್ರೀತಿಯನ್ನೂ ಗಳಿಸಿತು.
ಅದೇ ವಠಾರದ ಹುಡುಗಿ ಚೈತ್ರಾ. ಚೆಲುವಮ್ಮನ ಗಿಳಿರಾಮ, ಚೈತ್ರಾಳ ಜೊತೆಗೂ ಸಖ್ಯ ಬೆಳೆಸಿತು. ಈಗ ಇಬ್ಬರದೂ ಒಟ್ಟಿಗೆ ಆಟ ಪಾಠ. ಚೈತ್ರಾ ಇಲ್ಲದಿದ್ದರೆ ಗಿಳಿರಾಮ ಏನನ್ನೋ ಕಳೆದುಕೊಂಡವನಂತೆ ವರ್ತಿಸುತ್ತದೆ. ಬರೆಯುವಾಗ ಪೆನ್ನು ಕಚ್ಚುತ್ತದೆ. ಆಕೆಯ ತಲೆ ಮೇಲೆ ಏರಿ ಕೂರುತ್ತದೆ. ಸಾಕುಪ್ರಾಣಿಗಳಿಲ್ಲದ ಚೈತ್ರಾಳ ಮನೆಗೆ ಈ ಗಿಳಿ ಹೊಸ ಜೀವ ತಂದಿದೆ.
ಚೆಲುವಮ್ಮನ ಮಗ ಮಂಜುಷಾ ಆಟೋ ಚಾಲನೆ ಮಾಡುತ್ತಾರೆ. ಅವರ ಆಟೋದ ಶಬ್ದ ಕೇಳಿದ ತಕ್ಷಣ ಗಿಳಿ ಎಲ್ಲಿದ್ದರೂ ಹಾರಿ ಬಂದು ಆಟೋದ ಮೇಲೆ ಕೂರುತ್ತದೆ. ವಠಾರದ ಜನರೆಲ್ಲ ಗಿಳಿರಾಮನಿಗೆ ಆಹಾರ ನೀಡಿ ಸಂಭ್ರಮಿಸುತ್ತಾರೆ. ಈಗ ಅಕ್ಕಪಕ್ಕದ ನಾಲ್ಕೈದು ಮನೆಗೂ ಗಿಳಿರಾಮ ಭೇಟಿ ನೀಡುತ್ತಾನೆ. ಅವನಿಲ್ಲದಿದ್ದರೆ ದಿನ ಅಪೂರ್ಣ ಅನಿಸುತ್ತದೆ ಎನ್ನುವಷ್ಟು ಹಚ್ಚಿಕೊಂಡಿದ್ದಾರೆ ಆ ಕಾಡ ಹಕ್ಕಿಯನ್ನು. ಪ್ರಕೃತಿ ಮತ್ತು ಮನುಷ್ಯನ ಸಹಬಾಳ್ವೆ ಹೀಗೇ ಉಳಿಯಲಿ.
– ಗುರು ಗಣೇಶ್ ಭಟ್, ಡಬ್ಲುಳಿ