Advertisement

ಪುನೀತ್ ರಾಯಭಾರದ ‘ಚೆಲುವ ಚಾಮರಾಜನಗರ’ವಿಡಿಯೋ ಬಿಡುಗಡೆ

06:45 PM Nov 13, 2020 | mahesh |

ಚಾಮರಾಜನಗರ: ಜಿಲ್ಲೆಯ ಪ್ರವಾಸಿ ತಾಣಗಳು, ಧಾರ್ಮಿಕ ಕೇಂದ್ರಗಳು ಮತ್ತು ಜನಪದ ಸಂಸ್ಕೃತಿಯನ್ನು ಒಳಗೊಂಡಂತೆ ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಜಿಲ್ಲಾಡಳಿತ ಸಿದ್ದಪಡಿಸಿರುವ, ನಟ ಪುನೀತ್ ರಾಜ್‌ಕುಮಾರ್ ರಾಯಭಾರಿಯಾಗಿರುವ ಚೆಲುವ ಚಾಮರಾಜನಗರ ಶೀರ್ಷಿಕೆಯ ವೀಡಿಯೋವನ್ನು ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್‌ಕುಮಾರ್ ನಗರದಲ್ಲಿ ಶುಕ್ರವಾರ ಲೋಕಾರ್ಪಣೆ ಮಾಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ 4 ನಿಮಿಷ 19 ಸೆಕೆಂಡುಗಳ ವೀಡಿಯೋವನ್ನು ಬಿಡುಗಡೆ ಮಾಡಿದರು. ಪ್ರವಾಸಿ ಉತ್ತೇಜನಕ್ಕಾಗಿ ತಯಾರಿಸಲಾಗಿರುವ ವಿಡಿಯೋದಲ್ಲಿ ಸಂದೇಶ ನೀಡಿರುವ ಜಿಲ್ಲೆಯ ರಾಯಭಾರಿಯಾಗಿರುವ ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್ ಅವರು ವರ್ಚುವೆಲ್ ಮೂಲಕ ವೀಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ಕುಮಾರ್ ಮಾತನಾಡಿ ನಮ್ಮ ಹೆಮ್ಮೆಯ ಜಿಲ್ಲಾ ರಾಯಭಾರಿ ಪುನೀತ್ ರಾಜ್ ಕುಮಾರ್ ಅವರು ತಮ್ಮ ಬಿಡುವಿಲ್ಲದ ಚಿತ್ರೀಕರಣ ಸಮಯದಲ್ಲೂ ಬಿಡುವು ಮಾಡಿಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತೋಷವಾಗಿದೆ. ಚಾಮರಾಜನಗರ ಜಿಲ್ಲೆಯು ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಹೋಗಲಾಡಿಸಲು ನಾವೆಲ್ಲರೂ ಸಂಕಲ್ಪ ಮಾಡಬೇಕು. ಚಾಮರಾಜನಗರ ಜಿಲ್ಲೆ ಪ್ರಾಕೃತಿಕವಾಗಿ ಶ್ರೀಮಂತ ಜಿಲ್ಲೆ. ಇಲ್ಲಿನ ಪ್ರವಾಸೋದ್ಯಮಕ್ಕೆ ಹೆಚ್ಚು ಪ್ರಚಾರ ನೀಡಬೇಕು ಎಂದರು.

ಜಿಲ್ಲೆಯ ಯಾವುದೇ ಅಭಿವೃದ್ದಿ ಕಾರ್ಯಕ್ಕೆ ಸಹಕರಿಸುವುದಾಗಿ ಹೇಳಿರುವ ಪುನೀತ್ ಅವರಿಗೆ ವಿಶೇಷವಾದ ಧನ್ಯವಾದಗಳನ್ನು ತಿಳಿಸಿದರು. ಜಿಲ್ಲಾಡಳಿತ ಪ್ರವಾಸೋದ್ಯಮ ಕುರಿತು ಉತ್ತಮ ವೀಡಿಯೋ ಬಿಡುಗಡೆ ಮಾಡಿದೆ ಇದನ್ನು ನೋಡಿದವರಿಗೆ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಬೇಕೆಂಬ ಭಾವನೆ ಬರುವಷ್ಟು ಸೊಗಸಾಗಿ ಚಿತ್ರೀಕರಿಸಲಾಗಿದೆ ಎಂದು ಸಚಿವರು ಪ್ರಶಂಸಿಸಿದರು.

ಚಾಮರಾಜನಗರ ಮುಂದಿನ ದಿನಗಳಲ್ಲಿ ಒಳ್ಳೆಯ ಕಾರಣಕ್ಕಾಗಿ ಸುದ್ದಿಯಲ್ಲಿರಬೇಕು. ಈಗಾಗಲೇ ಕೋವಿಡ್ ಎದುರಿಸಿದ ರೀತಿಯಲ್ಲಿ ಇಡೀ ದೇಶಕ್ಕೆ ಚಾಮರಾಜನಗರ ಜಿಲ್ಲೆ ಒಳ್ಳೆಯ ಹೆಸರು ಪಡೆದಿತ್ತು. ಪ್ರವಾಸೋದ್ಯಮವನ್ನ ಬಿಂಬಿಸಿ ಹೆಚ್ಚು ಪ್ರವಾಸಿಗರನ್ನು ಕರೆತರಬೇಕಿದೆ. ಪ್ರವಾಸೋದ್ಯಮದಿಂದ ನಮ್ಮ ಜಿಲ್ಲೆಯ ಒಟ್ಟು ಆರ್ಥಿಕ ಸ್ಥಿತಿ ಹೆಚ್ಚಾಗುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯೋನ್ಮುಖರಾಗೋಣ ಎಂದು ಸಚಿವರು ತಿಳಿಸಿದರು.

Advertisement

ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಮಾತನಾಡಿ, ಪುನೀತ್ ರಾಜ್‌ಕುಮಾರ್ ಅವರು ಪ್ರವಾಸೋದ್ಯಮಕ್ಕೆ ಪವರ್ ಫುಲ್ ಸಂದೇಶ ನೀಡುವ ಮೂಲಕ ಬಹಳ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ವರನಟ ಡಾ.ರಾಜ್‌ಕುಮಾರ್ ರವರ ಸುಪುತ್ರ ಪುನೀತ್ ಅವರು ವೀಡಿಯೋ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು ತವರು ಜಿಲ್ಲೆಗೆ ನೀಡಿರುವ ದೀಪಾವಳಿ ಕೊಡುಗೆಯಾಗಿದೆ. ಬಿಡುವಿಲ್ಲದ ಸಮಯದಲ್ಲೂ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಪುನೀತ್ ಅವರ ಹೃದಯ ವಂತಿಕೆಗೆ ಸಾಕ್ಷಿಯಾಗಿದೆ. ಇದರಿಂದ ಜಿಲ್ಲೆಯ ಪ್ರವಾಸೋದ್ಯಮದ ಬೆಳವಣಿಗೆಗೆ ಸಹಾಯವಾಗಲಿದೆ ಎಂದು ತಿಳಿಸಿದರು.

ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಆರ್. ನರೇಂದ್ರ, ಎನ್. ಮಹೇಶ್, ಸಿ.ಎಸ್. ನಿರಂಜನ್ ಕುಮಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ.ಅಶ್ವಿನಿ, ಉಪಾಧ್ಯಕ್ಷೆ ಶಶಿಕಲಾ, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನಮ್ಮೂರಿನ ರಾಯಭಾರಿಯಾಗಿರುವುದು ಹೆಮ್ಮೆ: ಪುನೀತ್ ರಾಜ್‌ಕುಮಾರ್
ವರ್ಚುವೆಲ್ ಮೂಲಕ ಭಾಗವಹಿಸಿ ಮಾತನಾಡಿದ ಪುನೀತ್ ರಾಜ್‌ಕುಮಾರ್ ಮಾತನಾಡಿ, ಚಾಮರಾಜನಗರ ಜಿಲ್ಲೆಯ ರಾಯಭಾರಿಯಾಗಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ. ಪ್ರವಾಸೋದ್ಯಮ ಉತ್ತೇಜನದ ವೀಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ನನಗೆ ಬಹಳ ಸಂತೋಷವಾಗಿದೆ. ನಮ್ಮ ತಂದೆಯ ಹುಟ್ಟೂರಾಗಿರುವ ಚಾಮರಾಜನಗರದ ಬಗ್ಗೆ ತಿಳಿದುಕೊಳ್ಳಲು ನಾನು ಸಹ ಉತ್ಸುಕನಾಗಿದ್ದೇನೆ ಎಂದರು. ನಮ್ಮ ಜ್ಲಿಲೆಯ ಸೌಂದರ್ಯವನ್ನು ಹೊರಗಿನ ಜನರಿಗೆ ತಲುಪಿಸಬೇಕು. ಒಮ್ಮೆ ಈ ಜಿಲ್ಲೆಗೆ ಭೇಟಿ ನೀಡಬೇಕೆಂದು ಅವರಿಗೆ ಅನಿಸುವಂತೆ ಮಾಡಬೇಕು. ಜಿಲ್ಲೆಯ ಅಭಿವೃದ್ದಿ ಕಾರ್ಯಕ್ಕಾಗಿ ನಾನು ಯಾವಾಗಲು ಸಿದ್ದನಿದ್ದೇನೆ. ಜಿಲ್ಲೆ, ರಾಜ್ಯ, ದೇಶ ಚೆನ್ನಾಗಿ ಬೆಳೆಯಲಿ ಎಂದು ಹಾರೈಸುತ್ತೇನೆ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next