Advertisement
ಬೆಟ್ಟಂಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಚೆಲ್ಯಡ್ಕ ಮುಳುಗು ಸೇತುವೆ ನದಿಯ ತಳದಿಂದ ಕೇವಲ ಐದಾರು ಅಡಿಗಳಷ್ಟು ಎತ್ತರವಿದ್ದು, ಮಳೆಗಾಲದ ಸಂದರ್ಭದಲ್ಲಿ ಆಗಾಗ ಮುಳುಗಡೆಯಾಗುವುದರಿಂದ ಸಂಚಾರ ಸ್ಥಗಿತಗೊಳ್ಳುತ್ತದೆ. ಸೇತುವೆ ಇಕ್ಕೆಲಗಳಲ್ಲಿ ತಡೆಗೋಡೆ ಇಲ್ಲದಿದ್ದರೂ ಈವರೆಗೆ ಅದೃಷ್ಟವಶಾತ್ ಜೀವಹಾನಿ ಸಂಭವಿಸಿಲ್ಲ.ಸೇತುವೆ ಮುಳು ಗಡೆಯಾದರೆ ಗುಮ್ಮಟ ಗದ್ದೆ, ಅಜ್ಜಿಕಲ್ಲು, ಚಿಲ್ಮೆತ್ತಾರು, ಬಳೇರಿ ಅಸುಪಾಸಿನ ಜನತೆ ಸಂಪರ್ಕ ಕಳೆದುಕೊಳ್ಳುತ್ತಾರೆ.
ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ರಸ್ತೆ ಅಭಿವೃದ್ಧಿ ಹಾಗೂ ಸೇತುವೆ ನಿರ್ಮಾಣಕ್ಕೆ 1.50 ಕೋಟಿ ರೂ. ವೆಚ್ಚದ ಕಾಮಗಾರಿಯ ಪ್ರಸ್ತಾವನೆಯನ್ನು ನಬಾರ್ಡ್ ಮೂಲಕ ಸರಕಾರಕ್ಕೆ ಸಲ್ಲಿಸಿದ್ದಾರೆ. ಆದರೆ ನೀತಿಸಂಹಿತೆ ಹಿನ್ನೆಲೆಯಲ್ಲಿ ಈ ಬೇಸಗೆಯಲ್ಲಿ ಮಂಜೂರಾತಿ ಪ್ರಕ್ರಿಯೆ ನಡೆಯದೇ ಇರುವುದರಿಂದ ಸರಕಾರ ಮಟ್ಟದಿಂದ ಅನುಮೋದನೆಗೆ ಬಾಕಿಯಿದೆ.
Related Articles
ಸುಮಾರು 45 ವರ್ಷಗಳ ಹಿಂದೆ ಚೆಲ್ಯಡ್ಕ ಎನ್ನುವಲ್ಲಿ ನಿರ್ಮಾಣ ಮಾಡಿರುವ ಸೇತುವೆ ಈಗ ಶಿಥಿಲಾವಸ್ಥೆಗೆ ತಲುಪಿ, ಕುಸಿಯುವ ಭೀತಿಯಲ್ಲಿದೆ. ಸೇತುವೆ ಆಧಾರ ಸ್ತಂಭದ ಕಗ್ಗಲ್ಲು ಕೆಳಭಾಗದಲ್ಲಿ ಕಳಚಿ ಹೋಗಿದೆ. ಸ್ತಂಭಕ್ಕೆ ಆಳವಡಿಸಿದ ಕಬ್ಬಿಣದ ರಾಡ್‌ಗಳು ನೇತಾಡುತ್ತಿವೆ. ಕಗ್ಗಲ್ಲಿನಿಂದ ನಿರ್ಮಿಸಲಾಗಿದ್ದ ಸೇತುವೆಯ ಆಧಾರ ಸ್ತಂಭದ ಗೋಡೆ ಮಾತ್ರವಲ್ಲದೆ ಸೇತುವೆ ಮೇಲ್ಗಡೆಯೂ ಬಿರುಕು ಕಾಣಿಸುತ್ತಿದೆ. ಮಳೆಗಾಲದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಿಸಿದೆ. ಭಾರೀ ಮಳೆ ಸುರಿದರೆ ನೆರೆಯ ನೀರು ತುಂಬಿ ಸೇತುವೆ ಮುಳುಗುವ ಜತೆಗೆ ನೀರಿನೊಂದಿಗೆ ಭಾರೀ ಗಾತ್ರದ ಮರದ ದಿಮ್ಮಿಗಳು ಬಂದು ಸೇತುವೆಗೆ ಬಡಿದರೆ ಕುಸಿಯುವ ಸಾಧ್ಯತೆಯೇ ಹೆಚ್ಚು.
Advertisement
ಸೇತುವೆ ಪರಿಶೀಲಿಸಲಿಕಳೆದ ಮಳೆಗಾಲದಲ್ಲಿ ಬಂಟ್ವಾಳ ಸಮೀಪದ ಮೂಲರಪಟ್ನ ಸೇತುವೆ ಕುಸಿದ ನೆನಪು ಮಾಸುವ ಮೊದಲೇ ಈ ಸೇತುವೆಯೂ ಅಪಾಯದ ಕರೆಗಂಟೆ ಬಾರಿಸುತ್ತಿದ್ದು, ಅಧಿಕಾರಿಗಳು ಸೇತುವೆಯ ಗುಣಮಟ್ಟ ಹಾಗೂ ಧಾರಣ ಸಾಮರ್ಥ್ಯವನ್ನು ಪರೀಕ್ಷಿಸಿ, ಜನ ಹಾಗೂ ವಾಹನ ಸಂಚಾರಕ್ಕೆ ಅವಕಾಶ ನೀಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಕುಸಿಯುವ ಸಾಧ್ಯತೆ ಹೆಚ್ಚು
ಹಲವು ವರ್ಷಗಳ ಕನಸು ನನಸಾಗಿಲ್ಲ. ಮಳೆಗಾಲದಲ್ಲಿ ಪ್ರವಾಹದ ಸಂದರ್ಭ ಅನಾಹುತ ಸಂಭವಿಸುವ ಅಪಾಯವಿದೆ. ಸೇತುವೆ ಕುಸಿಯುವ ಸಾಧ್ಯತೆ ಇರುವುದರಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ಇಲ್ಲಿ ಹೊಸದಾಗಿ ಸರ್ವಋತು ಸೇತುವೆ ನಿರ್ಮಾಣ ಹಾಗೂ ರಸ್ತೆ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. – ಸನತ್ ಕುಮಾರ್ ಸ್ಥಳೀಯ ನಿವಾಸಿ
ಅನುಮತಿ ಬಾಕಿ ಇದೆ
ಇದು ಜಿ.ಪಂ. ರಸ್ತೆಯಾಗಿದೆ. ಲೋಕೋಪಯೋಗಿ ಇಲಾಖೆಯಿಂದ ನಬಾರ್ಡ್ 25ನಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 1.50 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಮತ್ತು ಸೇತುವೆ ಕಾಮಗಾರಿ ನಡೆಯುತ್ತದೆ. ಸರಕಾರ ಅನುಮತಿ ನೀಡುವುದು ಬಾಕಿ ಉಳಿದಿದೆ.
– ಪ್ರಮೋದ್ ಕುಮಾರ್, ಲೋಕೋ ಪಯೋಗಿ ಎಂಜಿನಿಯರ್, ಪುತ್ತೂರು ಮಾಧವ ನಾಯಕ್ ಕೆ.