ಸುರತ್ಕಲ್: ಸುರತ್ಕಲ್ ಸಮೀಪದ ಖಂಡಿಗೆ ಶ್ರೀ ಧರ್ಮರಸು ಉಳ್ಳಾಯ ದೈವಸ್ಥಾನದ ಜಾತ್ರೆಯ ಅಂಗವಾಗಿ ಬುಧವಾರ ಮೀನು ಹಿಡಿಯುವ ಜಾತ್ರೆ ನಡೆಯಿತು.
ಬೆಳಗ್ಗೆ 7 ಗಂಟೆಯಿಂದಲೇ ವಿವಿಧ ಜಾತಿ ಪಂಗಡದ ಜನತೆ ನಂದಿನಿ ನದಿಯಲ್ಲಿ ಮೀನು ಹಿಡಿಯುವ ಕಾರ್ಯದಲ್ಲಿ ನಿರತರಾಗಿದ್ದರು. ಚೇಳಾçರು ಗ್ರಾಮದ ಖಂಡಿಗೆಯ ಇತಿಹಾಸ ಪ್ರಸಿದ್ಧ ಶ್ರೀ ಧರ್ಮರಸು ಕ್ಷೇತ್ರವು ಪಾವಂಜೆ ರಾಷ್ಟ್ರೀಯ ಹೆದ್ದಾರಿ ಸೇತುವೆ ಸಮೀಪ ನಂದಿನಿ ನದಿಯ ತಟದಲ್ಲಿದ್ದು, ದೈವಸ್ಥಾನದಲ್ಲಿ ವರ್ಷಾವಧಿ ಜಾತ್ರೆ ಮೇ ತಿಂಗಳಲ್ಲಿ ಬರುವ ವೃಷಭ ಸಂಕ್ರಮಣದಂದು ನಡೆಯುತ್ತದೆ. ಈ ನದಿಯಲ್ಲಿ ಮೀನು ಹಿಡಿಯುವ ಪದ್ಧತಿ ಹಿಂದಿನಿಂದಲೂ ಬೃಹತ್ ಮಟ್ಟದಲ್ಲಿ ನಡೆಯುತ್ತದೆ.
ತುಳುನಾಡಿನಲ್ಲಿ ಎರ್ಮಾಳು ಜೆಪ್ಪು ಖಂಡೇವು ಅಡೆಪು ನಾಣ್ಣುಡಿ ಜಾರಿಯಲ್ಲಿದೆ. ಉಡುಪಿ ಜಿಲ್ಲೆಯ ಎರ್ಮಾಳು ದೇಗುಲದಲ್ಲಿ ಜಾತ್ರೆ ಪ್ರಾರಂಭಗೊಳ್ಳುವ ಮೂಲಕ ಅವಿಭಜಿತ ದ.ಕ. ಉಡುಪಿ ಜಿಲ್ಲೆಯಲ್ಲಿ ಜಾತ್ರೆಗಳು ಪ್ರಾರಂಭಗೊಂಡು, ಖಂಡಿಗೆ ಶ್ರೀ ಧರ್ಮರಸು ಕ್ಷೇತ್ರದ ಜಾತ್ರೆಯೊಂದಿಗೆ ಎಲ್ಲ ಜಾತ್ರೆಗಳು ಮುಕ್ತಾ ಯವಾಗುತ್ತದೆ. ವೃಷಭ ಸಂಕ್ರಮಣದಂದು ಬೆಳಗ್ಗೆ 7ರ ಸುಮಾರಿಗೆ ದೈವಸ್ಥಾನದಲ್ಲಿ ಸಂಬಂಧ ಪಟ್ಟವರು ದೈವಕ್ಕೆ ಪ್ರಾಥನೆ ಸಲ್ಲಿಸಿ ನಂದಿನಿ ನದಿಯ ದಡಕ್ಕೆ ಆಗಮಿಸಿ ನದಿಗೆ ಪ್ರಸಾದ ಹಾಕಿ ಅದೇ ಸಂದರ್ಭ ಸುಡು ಮದ್ದು ಸಿಡಿಸಲಾಯಿತು. ತತ್‌ಕ್ಷಣ ಮೀನು ಹಿಡಿಯಲು ಬಂದ ಜನರು ನದಿಗೆ ಧುಮುಕಿ ಮೀನು ಹಿಡಿಯಲು ಆರಂಭಿಸಿದರು.
ದೈವದ ಪ್ರಸಾದ
ಮಧ್ಯಾಹ್ನದವರೆಗೂ ಮೀನು ಹಿಡಿದು, ಹಿಡಿದ ಮೀನನ್ನು ಮನೆಗೆ ತೆಗೆದು ಕೊಂಡು ಹೋಗಿ, ಸತ್ತವರಿಗೆ ಬಡಿಸುವ ಕ್ರಮ ಇಲ್ಲಿಯದು. ಇದು ಈಗಲೂ ಹೆಚ್ಚಿನ ಮನೆಗಳಲ್ಲಿ ಆಚರಿಸಿಕೊಂಡೂ ಬರುತ್ತಿದ್ದಾರೆ.
ಕೆಲವರು ವ್ಯಾಪಾರದ ದೃಷ್ಟಿಯಿಂದ ಇಲ್ಲಿ ಹಿಡಿದ ಮೀನನ್ನು ಅಲ್ಲಿಯೇ ಮಾರುವವರೂ ಇದ್ದಾರೆ. ವರ್ಷದಲ್ಲಿ ಒಂದು ದಿನ ಇಲ್ಲಿನ ಮೀನನ್ನು ಪದಾರ್ಥ ಮಾಡಿ ತಿನ್ನುವುದೇ ಇಲ್ಲಿನ ದೈವದ ಪ್ರಸಾದವೆಂದು ಭಕ್ತರು ನಂಬುವುದರಿಂದ ಜಾತ್ರೆಗೆ ವಿಶೇಷ ಪ್ರಾಮುಖ್ಯ ದೊರೆತಿದೆ. ಬೆಳಗ್ಗೆ ಮೀನು ಹಿಡಿಯುವ ಜಾತ್ರೆಯಾದರೆ ಕ್ಷೇತ್ರದಲ್ಲಿ ರಾತ್ರಿ ಧಾರ್ಮಿಕ ಕಾರ್ಯಕ್ರಮ ಬಳಿಕ ಧ್ವಜಾವರೋಹಣ ನೆರವೇರಿತು.
ಇಲ್ಲಿ ಮೀನು ಹಿಡಿಯಲು ಜಾತಿ, ಧರ್ಮದ ಬೇಧ ಮರೆತು ಹಿಂದೂ, ಮುಸ್ಲಿಂ, ಕ್ರೈಸ್ತರು ಪಾಲ್ಗೊಂಡರು. ಜಾತ್ರೆ ಸಂದರ್ಭ ವಿವಿಧ ಧಾರ್ಮಿಕ ಕಾರ್ಯಕ್ರಮ ಜರಗುತ್ತದೆ.