Advertisement

ಕಾಸರಗೋಡು: ಚೇತನಾ ಕುಂಬಳೆ ಚೊಚ್ಚಲ ಕೃತಿ ನಸುಕಿನಲ್ಲಿ ಬಿರಿದ ಹೂಗಳು ಕೃತಿ ಬಿಡುಗಡೆ

03:27 PM May 04, 2019 | Nagendra Trasi |

ಬದಿಯಡ್ಕ: ಸಾಹಿತ್ಯ ರಚನೆಗಳ ಮೂಲಕ ವ್ಯಕ್ತಿತ್ವ ವಿಕಸನದ ಜೊತೆಗೆ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಎಳವೆಯಲ್ಲೇ ಸಾಹಿತ್ಯ-ಕಲಾ ಪ್ರಕಾರಗಳನ್ನು ತೊಡಗಿಸಿಕೊಳ್ಳುವುದರಿಂದ ಸೃಜನಾತ್ಮಕತೆಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಗಡಿನಾಡಿನಲ್ಲಿ ಗಝಲ್‌ ಸಾಹಿತ್ಯ ಪ್ರಕಾರದ ಕೃತಿ ಮೊದಲ ಬಾರಿಗೆ ಮೂಡಿಬಂದಿರುವುದು ಕಾಸರಗೋಡಿನ ಸಾಹಿತ್ಯ  ಲೋಕಕ್ಕೆ ಹೊಸ ದಿಕ್ಕನ್ನು ನೀಡಲಿ ಎಂದು ನಿವೃತ್ತ ಶಿಕ್ಷಕಿ ಸರಸ್ವತಿ ಎಚ್‌. ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಯುವ ಕವಯಿತ್ರಿ, ವಿಮರ್ಶಕಿ ಚೇತನಾ ಕುಂಬಳೆ ಅವರ ಚೊಚ್ಚಲ ಕೃತಿ ಗಝಲ್‌ ಸಂಕಲನ ನಸುಕಿನಲ್ಲಿ ಬಿರಿದ ಹೂಗಳು ಕೃತಿಯನ್ನು  ಬದಿಯಡ್ಕದ ರಾಮಲೀಲಾ ಸಭಾಂಗಣದಲ್ಲಿ ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಲಲಿತಾ ಲಕ್ಷ್ಮೀ ಕುಳಮರ್ವ ಅವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪೂರ್ಣಿಮಾ ಸುರೇಶ್‌ ಭಾಷಣ

ಕೃತಿಯ ಬಗ್ಗೆ ಪರಿಚಯ ಭಾಷಣ ಮಾಡಿದ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ, ಕವಿ ಡಾ.ವಸಂತಕುಮಾರ್‌ ಪೆರ್ಲ ಅವರು, ಸಾಹಿತ್ಯ ಪ್ರಕಾರಗಳ ಪರಿಸರ  ನಿರ್ಮಾಣವಾಗದೆ ಯಶಸ್ಸುಹೊಂದಲು ಸಾಧ್ಯವಿಲ್ಲ. ಸಾಹಿತ್ಯದ ವಿವಿಧ ಪ್ರಕಾರಗಳು ಯಶಸ್ಸುಗಳಿಸಲು ಪೂರಕ ವಾತಾವರಣ ಇರಬೇಕು. ಈ ನಿಟ್ಟಿನಲ್ಲಿ ತೀವ್ರ ಭಾವದ ಶೋಧನೆಯ ಕೃತಿಗಳು ನಿರ್ಮಾಣಗೊಳ್ಳುತ್ತದೆ ಎಂದು ತಿಳಿಸಿದರು. ಯಾವ ಕೃತಿ ಮತ್ತೆ ಮತ್ತೆ ಓದಲ್ಪಡುತ್ತದೋ ಅದು ಉತ್ತಮ ಕೃತಿಯಾಗಿ ಸುದೀರ್ಘ‌ ಕಾಲ ನೆಲೆಗೊಳ್ಳುತ್ತದೆ.

Advertisement

ಪ್ರಸ್ತುತ ಕನ್ನಡ ಸಾರಸ್ವತ ಲೋಕದಲ್ಲಿ ಗಝಲ್‌ ಪ್ರಕಾರ ಪ್ರಚುರಗೊಳ್ಳುತ್ತಿದ್ದು, ಉರ್ದು ಭಾಷಾ ಮೂಲದ ಈ ಪ್ರಕಾರ ಪರಂಪರೆಗೆ ಧಕ್ಕೆಯಾಗದೆ ಬೆಳವಣಿಗೊಳ್ಳಬೇಕು ಎಂದು ತಿಳಿಸಿದರು. ಚೇತನಾ ಅವರ ಗಝಲ್‌ ಸಂಕಲನ ಮೂಲ ಗಝಲ್‌ ಪ್ರಕಾರದ ಹಿನ್ನೆಲೆಯನ್ನು ಉಳಿಸಿಕೊಂಡು ಯಶಸ್ವಿ ಕೃತಿಯಾಗಿ ಮೂಡಿಬಂದಿದೆ. ಮಲ್ಲಿಗೆ ಹೂವನ್ನು ಪೋಣಿಸಿದಂತೆ ಚತುರ ಕ್ರಮದ ಚೇತನಾ ಅವರ ಗಝಲ್‌ ಕೃತಿಗಳು ಹೊಸ ಮನ್ವಂತರ ಸೃಷ್ಟಿಸಲಿ ಎಂದು ಹಾರೈಸಿದರು.

ಉದ್ಘಾಟಿಸುತ್ತಿರುವ ಪಿ.ಎಸ್‌.ಪುಣಿಚಿತ್ತಾಯ

ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಉದ್ಘಾಟಿಸಿದ ಖ್ಯಾತ ಅಂತರಾಷ್ಟ್ರೀಯ ಚಿತ್ರ ಕಲಾವಿದ ಪಿ.ಎಸ್‌.ಪುಣಿಚಿತ್ತಾಯ ಅವರು ಮಾತನಾಡಿ, ಕಲೆ, ಸಾಹಿತ್ಯಗಳೇ ಮೊದಲಾದ ಸೃಜನಾತ್ಮಕತೆಗಳು ಯುವ ತಲೆಮಾರಿನ ಜಂಜಡದ ಬದುಕಿಗೆ ಹೊಸ ಬೆಳಕನ್ನು ನೀಡಬಲ್ಲ ಶಕ್ತಿಹೊಂದಿದೆ. ಆದರೆ ಹೊಸತನಕ್ಕೆ ಹೊಂದಿಕೊಳ್ಳುವ ಬರಹಗಳು ಆಧುನಿಕ ಶೈಲಿಯೊಂದಿಗೆ ಪ್ರಕಟಗೊಳ್ಳಬೇಕು. ಈ ನಿಟ್ಟಿನಲ್ಲಿ ಕಾಸರಗೋಡಿನ ಸಾರಸ್ವತ ಲೋಕದ ಎಡೆಬಿಡದ ಪಯಣ ಸಕಾರಾತ್ಮಕತೆಯೊಂದಿಗೆ ಬೆಳೆಯುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಚೇತನಾ ಕುಂಬಳೆ ಅವರ ಇನ್ನೊಂದು ಕೃತಿ, ಸಾಹಿತ್ಯ ರಚನೆಗಳ ವಿಮರ್ಶಾ ಸಂಕಲನ ಪಡಿನೆಳಲು ಕೃತಿಯನ್ನು ಕವಯಿತ್ರಿ, ರಂಗನಟಿ ಪೂರ್ಣಿಮಾ ಸುರೇಶ್‌ ಹಿರಿಯಡ್ಕ ಅವರು ಹಿರಿಯ ಸಾಹಿತಿ ಹರೀಶ್‌ ಪೆರ್ಲ ಅವರಿಗೆ ನೀಡಿ ಲೋಕಾರ್ಪಣೆಗೊಳಿಸಿದರು. ಅವರು ಈ ಸಂದರ್ಭ ಮಾತನಾಡಿ, ಆಧುನಿಕ ಸಾಮಾಜಿಕ ವ್ಯವಸ್ಥೆಯಲ್ಲಿ ಸಾಹಿತ್ಯ ಬರಹಗಳ ಹೊಸ ಬದಲಾವಣೆಗಳ ಹೊರಳಿವಿಕೆಯತ್ತ ತೆರೆದುಕೊಳ್ಳುತ್ತಿರುವುದು ವಿಶೇಷತೆಯಾಗಿದೆ. ಹೆಚ್ಚು ಮಾಗಿಕೊಳ್ಳುವಲ್ಲಿ ವಿಮರ್ಶೆಗಳು ಬಲ ನೀಡುತ್ತವೆ. ಸಾಹಿತ್ಯ ವಿಮರ್ಶೆ  ಹೊಸ ಓದುಗರಿಗೆ ಪ್ರೇರಣೆ ನೀಡುತ್ತದೆ ಎಂದು ತಿಳಿಸಿದರು.

ಕೃತಿಯ ಬಗ್ಗೆ ಮಾತನಾಡಿದ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜಿನ ಉಪನ್ಯಾಸಕಿ ಲಕ್ಷ್ಮಿ ಕೆ. ಅವರು, ವಿಮರ್ಶಾ ಕೃತಿಗಳು ಕಲಾತ್ಮಕತೆಯನ್ನು ಎತ್ತಿಹಿಡಿಯುತ್ತದೆ. ತಮ್ಮದೇ ಶೈಲಿಯ ಮೂಲಕ ಸಮರ್ಥ ವಿಮರ್ಶಕಿಯಾಗಿ ರೂಪುಗೊಳ್ಳುತ್ತಿರುವುದು ಗಡಿನಾಡಿನ ಸಾರಸ್ವತ ಲೋಕದ ಭರವಸೆಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತೆಹ್ರೀ ಕೆ ಉರ್ದು ಸಂಘಟನೆಯ ಮುಖಂಡ ಮೊಹಮ್ಮದ್‌ ಅಝೀಂ ಮಣಿಮುಂಡ ಅವರು ಗಝಲ್‌ ಸಾಹಿತ್ಯ ಪ್ರಕಾರದ ಇತಿಹಾಸ, ಗಝಲ್‌ ಪ್ರಕಾರದ ಸಾಹಿತ್ಯದ ಮಹತ್ವದ ಬಗ್ಗೆ ವಿವರಣಾತ್ಮಕ ಮಾಹಿತಿ ನೀಡಿ ಸ್ವರಚಿತ ಉರ್ದು ಗಝಲ್‌ ವಾಚಿಸಿದರು. ಜೊತೆಗೆ ಮೊಹಮ್ಮದ್‌ ಅಶ್ವಾಕ್‌ ಮಣಿಮುಂಡ ಅವರಿಂದ ಸುಮಧುರ ಗಝಲ್‌ ಗಾಯನ ನಡೆಯಿತು.

ಕವಯಿತ್ರಿ ಶ್ವೇತಾ ಕಜೆ ಸ್ವರಚಿತ ಗಝಲ್‌ ವಾಚನ ನಡೆಸಿದರು. ಶ್ಯಾಮಲಾ ರವಿರಾಜ್‌ ಕುಂಬಳೆ ಪ್ರಾರ್ಥನಾ ಗೀತೆ ಹಾಡಿದರು. ಕೃತಿಕರ್ತೆ ಚೇತನಾ ಕುಂಬಳೆ ತಮ್ಮ ಸಾಹಿತ್ಯ ಯಾನದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮೇಘನಾ ರಾಜಗೋಪಾಲ್‌ ವಂದಿಸಿದರು. ಪತ್ರಕರ್ತ, ಸಂಘಟಕ ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next