Advertisement

ಮೈಸೂರು: ನೂರು ಅಡಿ ಆಳದ ಬಾವಿಗೆ ಬಿದ್ದಿದ್ದ ಚಿರತೆಯ ರಕ್ಷಣೆ – ಹೀಗಿತ್ತು ಕಾರ್ಯಾಚರಣೆ

09:37 PM Jul 20, 2020 | Hari Prasad |

ಮೈಸೂರು: ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಕಾರಾಪುರ ಬಳಿಯ ಗ್ರಾಮದಲ್ಲಿ ಬಾವಿಯಲ್ಲಿ ಬಿದ್ದಿದ್ದ ಚಿರತೆಯೊಂದನ್ನು ರಕ್ಷಿಸುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

Advertisement

ಸುಮಾರು ನೂರು ಅಡಿ ಆಳದ ಬಾವಿಗೆ ಬಿದ್ದಿದ್ದ ಈ ಚಿರತೆಯನ್ನು ಎರಡು ದಿನಗಳ ಸತತ ಕಾರ್ಯಾಚರಣೆ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಕೊನೆಗೂ ಪತ್ತೆ ಹಚ್ಚಿ, ಅದನ್ನು ಬಾವಿಯಲ್ಲೇ ಸೆರೆ ಹಿಡಿದು ಮೆಲಕ್ಕೆತ್ತಿದ್ದಾರೆ.

ಈ ಮೂಲಕ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಚಿರತೆ ರಕ್ಷಣೆ ಕಾರ್ಯಾಚರಣೆ ಸೋಮವಾರ ಕೊನೆಗೊಂಡಿದೆ.

ಶನಿವಾರ ಸಂಜೆ ಗ್ರಾಮದಲ್ಲಿರುವ ಬಾವಿಯೊಳಗೆ ಚಿರತೆಯೊಂದು ಬಿದ್ದಿದೆ ಎಂದು ಗ್ರಾಮಸ್ಥರು ಸ್ಥಳೀಯ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳೀಯರ ಮಾಹಿತಿಯನ್ನು ಆಧರಸಿ ಸ್ಥಳಕ್ಕೆ ಬೋನು, ಬಲೆ ಸಮೇತ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಚಿರತೆಗೆ ಹುಡುಕಾಟ ನಡೆಸಿದರು. ಆದರೆ ಅವರಿಗೆ ಎಲ್ಲೂ ಚಿರತೆಯ ಸುಳಿವು ಸಿಕ್ಕಿರಲಿಲ್ಲ.

ಬಳಿಕ ಸಮೀಪದಲ್ಲೇ ಇದ್ದ ಸುಮಾರು ನೂರಡಿ ಆಳವಿರುವ ಬಾವಿಗೆ ಟಾರ್ಚ್ ಲೈಟ್ ಬಿಟ್ಟು ಶೋಧ ನಡೆಸಿದರೂ ಚಿರತೆ ಕಂಡು ಬಂದಿರಲಿಲ್ಲ. ಕೊನೆಗೆ ಅರಣ್ಯಾಧಿಕಾರಿ ಸಿದ್ದರಾಜು ಎಂಬುವರನ್ನು ಬೋನಿನೊಳಗೆ ಕೂರಿಸಿ, ಅವರ ಸಮೇತ ಬೋನನ್ನು ಬಾವಿಗೆ ಇಳಿಸಿ ಹುಡುಕಾಡಿದರೂ ಬಾವಿಯಲ್ಲಿ ಚಿರತೆಯ ಸುಳಿವು ಪತ್ತೆಯಾಗಿರಲಿಲ್ಲ.

Advertisement


ಆದರೆ, ಬಾವಿಯೊಳಗೆ ಚಿರತೆ ಬಿದ್ದಿರುವುದು ನಿಜ ಮತ್ತು ಈ ಬಾವಿಯೊಳಗೆ ಕೊರಕಲು ಗುಹೆ ಇದ್ದು, ಅದರಲ್ಲಿ ಚಿರತೆ ಅವಿತು ಕುಳಿತಿರಬಹುದೆಂಬ ಅನುಮಾನವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ ಬಳಿಕ ಭಾನುವಾರ ಕೂಡ ಅರಣ್ಯಾಧಿಕಾರಿಗಳು ಚಿರತೆ ಪತ್ತೆಗಾಗಿ ವಿಡಿಯೋ ಕ್ಯಾಮೆರಾವನ್ನು ಬಿಟ್ಟು ಆ ಬಾವಿಯೊಳಗೆ ಇದ್ದ ಕೊರಕಲುಳನ್ನು ಶೋಧಿಸಿದಾಗ ಕೊನೆಗೂ ಅಲ್ಲಿ ಚಿರತೆ ಅವಿತು ಕುಳಿತಿರುವುದು ಕಂಡುಬಂದಿತು.

ಬಳಿಕ ಆ ಚಿರತೆಯನ್ನು ರಕ್ಷಿಸುವ ಕಾರ್ಯಾಚರಣೆಗೆ ಚಾಲನೆ ನೀಡಲಾಯಿತು. ಅದಕ್ಕೆ ಅರವಳಿಕೆ ಚುಚ್ಚುಮದ್ದು ನೀಡಿ, ಪ್ರಜ್ಞೆ ತಪ್ಪಿಸಲಾಯಿತು. ಆ ಬಲಿಕ ಬಲೆಯನ್ನು ಹಾಕಿ ಚಿರತೆಯನ್ನು ಸೆರೆ ಹಿಡಿದು ಬಾವಿಯಿಂದ ಮೇಲಕ್ಕೆ ತರುವಲ್ಲಿ ಸಿಬ್ಬಂದಿ ಯಶಸ್ವಿಯಾದರು.

ಆ ಮೂಲಕ ಕತ್ತಲು ತುಂಬಿದ್ದ ಆಳ ಬಾವಿಯಲ್ಲಿ ಕೊರಕಲಿನಲ್ಲಿ ಅಡಗಿ ಕುಳಿತಿದ್ದ ಚಿರತೆಯನ್ನು ಜೀವಂತವಾಗಿ ಹಿಡಿದು ರಕ್ಷಿಸುವಲ್ಲಿ ಯಶಸ್ವಿಯಾದ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಶ್ರಮಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next