Advertisement

ಮಚ್ಚಿನ, ಪಾರೆಂಕಿ: ಚಿರತೆ ಓಡಾಟದಿಂದ ಆತಂಕದಲ್ಲಿ ಜನತೆ

10:13 PM Jul 16, 2017 | Karthik A |

ಮಡಂತ್ಯಾರು: ಬೆಳ್ತಂಗಡಿ ತಾಲೂಕಿನ ಮಚ್ಚಿನ, ತಣ್ಣೀರುಪಂಥ, ಪಾರೆಂಕಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಚಿರತೆ ಹಾವಳಿ ಹೆಚ್ಚಾಗಿದ್ದು ಜನರು ಭಯಭೀತರಾಗಿದ್ದಾರೆ. ಈಗಲೂ ಚಿರತೆ ಆತಂಕದಲ್ಲಿಯೇ ಜನತೆ ದಿನ ಕಳೆಯುತ್ತಿದ್ದಾರೆ. ಮಚ್ಚಿನ ಗ್ರಾಮದ ಆಸುಪಾಸಿನಲ್ಲಿರುವ ಗ್ರಾಮಗಳಾದ ಪಾರೆಂಕಿ ಮತ್ತು ತಣ್ಣೀರುಪಂಥ ಹೆಚ್ಚಾಗಿ ಕಾಡುಗಳನ್ನು ಹೊಂದಿದೆ. ಕಳೆದ 5 ವರ್ಷಗಳಲ್ಲಿ ಈ ಪ್ರದೇಶಗಳಲ್ಲಿ ಸುಮಾರು 5ಕ್ಕೂ ಹೆಚ್ಚು ಬಾರಿ ಚಿರತೆಗಳು ಕೆರೆ, ಬಾವಿ, ಉರುಳಿಗೆ ಬಿದ್ದ ಘಟನೆಗಳು ನಡೆದಿವೆ. 

Advertisement

ಸಾಕುಪ್ರಾಣಿಗಳು ಸುಲಭ ತುತ್ತು
ಒಂದೆಡೆ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ನಾಶವಾಗುತ್ತಿದೆ ಎಂಬುದು ರೈತರ ಗೋಳು. ಇನ್ನೊಂದೆಡೆ ನಾಯಿ, ದನ ಮೊದಲಾದ ಸಾಕು ಪ್ರಾಣಿಗಳು ಚಿರತೆಗಳ ಪಾಲಾಗುತ್ತಿವೆ ಎಂಬ ಕೂಗು. ಕಳೆದ ವರ್ಷದಿಂದ ಚಿರತೆ ಒಂದಷ್ಟು ಹೆಚ್ಚಾಗಿಯೇ ಭೀತಿ ಹುಟ್ಟಿಸಿದೆ. ಕಳೆದ ವರ್ಷ ನೆತ್ತರ ಶಿವಪ್ಪ ಪೂಜಾರಿ ಎಂಬವರ ಹಟ್ಟಿಯಿಂದ ದನವನ್ನು ಕೊಂಡು ಹೋಗಿತ್ತು. ಅಂತೋನಿ ಅವರ ಹಟ್ಟಿಯಲ್ಲಿದ್ದ ಕರುವನ್ನು ಹಟ್ಟಿಯಲ್ಲೆ ತಿಂದು ಹಾಕಿತ್ತು. ಹಲವು ನಾಯಿಗಳು  ಚಿರತೆಗೆ ಆಹಾರವಾಗಿವೆ.

ನಿರಂತರ ಕೇಳುತ್ತಿದೆ ಗರ್ಜನೆ ; ಮತ್ತೆ ಹಾವಳಿ
ಕಳೆದ ವರ್ಷ ಕೊಡ್ಲಕ್ಕೆ ಎಂಬಲ್ಲಿ ಎರಡು ಚಿರತೆಗಳು ಬಾವಿಗೆ ಬಿದ್ದ  ಬಳಿಕ ಇಲ್ಲಿನ ಜನತೆ ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿತ್ತು. ಆದರೆ ಮತ್ತೆ ಮತ್ತೆ ಚಿರತೆಯ ಉಪಟಳ ಮುಂದುವರಿದುಕೊಂಡೇ ಬಂದಿದೆ. ಕಳೆದ 15 ದಿನಗಳಿಂದ ಬಿಜಿಲ ಕಲ್ಲಮಾದೆ ಎಂಬಲ್ಲಿ ಮತ್ತೆ ಆರ್ಭಟ ಕೇಳಲು ಪ್ರಾರಂಭವಾಗಿದ್ದು ಜನ ಮತ್ತೆ ಭಯಭೀತರಾಗಿದ್ದಾರೆ. ಒಂದು ವಾರದ ಹಿಂದೆ ಪಾಲೇದು ಮಹಾಬಲ ಶೆಟ್ಟಿ ಎಂಬವರ ನಾಯಿ ಬಲಿಯಾಗಿದ್ದು ಚಿರತೆ ತಿಂದಿರಬಹುದು ಎಂದು ಹೇಳಲಾಗುತ್ತಿದೆ. ಸೌದೆ ತರಲು ಹೋಗುತ್ತಿದ್ದ ಮಹಿಳೆಯರಿಗೆ ಚಿರತೆ ಕಾಣಸಿಕ್ಕಿದೆ. ಚಿರತೆ ಈ ಪರಿಸರದಲ್ಲಿ ಇದೆ ಎನ್ನುವುದಕ್ಕೆ ಇದು ಸಾಕ್ಷಿ ಎನ್ನುತ್ತಾರೆ ಸ್ಥಳೀಯ ನಿವಾಸಿ ನವೀನ್‌ ಊರ್ಲ.

ಶಾಲಾ ಮಕ್ಕಳಿಗೂ ಆತಂಕ 
ಪಾಲೇದು, ಬಿಜಿಲ, ನೆತ್ತರ ಶಾಲೆಗಳಿಗೆ ಹೋಗುವ ಮಕ್ಕಳಿಗೂ ದಾರಿ ಮಧ್ಯೆ ಚಿರತೆಯ ಆತಂಕ ಉಂಟಾಗಿದೆ. ಇದು ಹೆತ್ತವರನ್ನು ಚಿಂತೆಗೀಡು ಮಾಡಿದೆ. ಪುಂಜಾಲಕಟ್ಟೆ, ಮಡಂತ್ಯಾರು, ಮಚ್ಚಿನ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಕೂಡ ಇದೇ ರಸ್ತೆಯನ್ನು ಬಳಸಬೇಕು.

ಚಿರತೆಗಳು ಕಣ್ಣೆದುರೇ ಬಂದಿದ್ದವು
ನಾಲ್ಕು ವರ್ಷಗಳ ಹಿಂದೆ ಬಿಜಿಲ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎರಡು ಚಿರತೆಗಳು ಎದುರಿಗೆ ಬಂದಿದ್ದವು. ಸಮೀಪ ಯಾರ ಮನೆ ಕೂಡ ಇರಲಿಲ್ಲ. ಚಿರತೆ ಇದೆ ಎಂದು ಮಾತ್ರ ಗೊತ್ತಿತ್ತು. ಒಂದು ಕ್ಷಣ ಎದೆಬಡಿತ ನಿಂತು ಹೋದಂತಾಯಿತು. ಹೇಗೋ ಪಾರಾಗಿ ಮನೆ ಸೇರಿದೆ.
– ಪ್ರವೀಣ್‌ ಆಚಾರ್ಯ, ಬಿಜಿಲ ವಿವಾಸಿ

Advertisement

ಪರಿಶೀಲಿಸುತ್ತೇವೆ
ಹುಲಿ, ಚಿರತೆಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಓಡಾಟ ನಡೆಸುತ್ತಿರುತ್ತವೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ. ಅದೇ ಜಾಗದಲ್ಲಿ ಇರುವ ಕುರುಹು ದೊರಕಿದರೆ ಬೋನು ಇಡುವ ವ್ಯವಸ್ಥೆ ಮಾಡಲಾಗುವುದು. 
– ಸುಬ್ಬಯ್ಯ ನಾಯ್ಕ, ವಲಯ ಅರಣ್ಯ ಅಧಿಕಾರಿ, ಬೆಳ್ತಂಗಡಿ 

ಚಿರತೆ ಹೆಜ್ಜೆ ಗುರುತು…
– ಮಚ್ಚಿನ ಗ್ರಾಮದ ಕುಂಡಡ್ಕ ಎಂಬಲ್ಲಿ ಕಾಡುಹಂದಿಗೆ ಇಟ್ಟ ಉರುಳಿಗೆ ಬಿದ್ದ ಚಿರತೆ .
– ಮಚ್ಚಿನ ಗ್ರಾಮದ ಕೋಡ್ಯೇಲು ಎಂಬಲ್ಲಿ ಉರುಳಿಗೆ ಬಿದ್ದ ಚಿರತೆ.
– ತಣ್ಣೀರುಪಂಥ ಕೊಡೆಂಚಡ್ಕ ಎಂಬಲ್ಲಿ ಕೆರೆಗೆ ಬಿದ್ದ ಮರಿ ಚಿರತೆ.
– ಪಾರೆಂಕಿ ಗ್ರಾಮದ ಕೋಡ್ಲಕ್ಕೆ ಎಂಬಲ್ಲಿ ಬಾವಿಗೆ ಬಿದ್ದ ಚಿರತೆ
–  ಕೊಡ್ಲಕ್ಕೆಯಲ್ಲಿ ಮರಿಚಿರತೆ ಬಾವಿಗೆ ಬಿದ್ದಿದ್ದು ಸ್ಥಳೀಯರಿಂದ ರಕ್ಷಣೆ.

– ಪ್ರಮೋದ್‌ ಬಳ್ಳಮಂಜ

Advertisement

Udayavani is now on Telegram. Click here to join our channel and stay updated with the latest news.

Next