Advertisement

ಹುಬ್ಬಳ್ಳಿ: ಚಿರತೆ ಕಣ್ಣಾಮುಚ್ಚಾಲೆಗೆ ಹೆಚ್ಚಾಯ್ತು ಚಿಂತೆ

01:32 PM Sep 21, 2021 | Team Udayavani |

ಹುಬ್ಬಳ್ಳಿ:ರಾಜನಗರದ ಕೇಂದ್ರೀಯ ವಿದ್ಯಾಲಯ ಆವರಣದಲ್ಲಿ ಎರಡು ದಿನಗಳ ಹಿಂದೆ ಪ್ರತ್ಯಕ್ಷವಾಗಿದ್ದ ಚಿರತೆ ಸೋಮವಾರ ಸಂಜೆ 6:10ರ ಸುಮಾರಿಗೆ ಶಿರಡಿ ನಗರದ ಹನುಮಂತ ದೇವಸ್ಥಾನ ಬಳಿ ಜನರಿಗೆ ಮತ್ತೆ ಕಾಣಿಸಿಕೊಂಡಿದೆ.

Advertisement

ಶಿರಡಿ ಸಾಯಿಬಾಬಾ ದೇವಸ್ಥಾನ ಹತ್ತಿರ ನಿರ್ಮಾಣ ಹಂತದ ಮಾರುತಿ ಗುಡಿ ಬಳಿ ನಿವಾಸಿ ಸಾವಿತ್ರಿ ಮುದ್ದೇಬಿಹಾಳ ಅವರಿಗೆ ಮೊದಲು ಕಾಣಿಸಿಕೊಂಡಿದೆ. ಇವರು ಮನೆ ಅಂಗಳದಲ್ಲಿ ಕಸ ಗುಡಿಸುತ್ತಿದ್ದ ವೇಳೆ ನೃಪತುಂಗ ಬೆಟ್ಟದ ಅರಣ್ಯ ಪ್ರದೇಶದಿಂದ ಜಿಗಿಯುತ್ತ ಬಂದು ಹಂದಿ ಹಿಡಿದುಕೊಂಡು ಹೋಗಿದೆ. ಇದನ್ನು ನೋಡಿದ ಸಾವಿತ್ರಿ ಅವರು ಗಾಬರಿಗೊಂಡು ಮನೆಯೊಳಗೆ ಹೋಗಿದ್ದಾರೆ. ಚಿರತೆ ಅಲ್ಲಿಯೇ ಸಮೀಪದಲ್ಲಿ ಗಿಡ ಏರಿ ಕುಳಿತಿದೆ. ಇದನ್ನು ನೋಡಿದ ಅಲ್ಲಿನ ಕೆಲವು ಮಹಿಳೆಯರು, ಮಕ್ಕಳು ಹಾಗೂ ಪುರುಷರು ಭಯಗೊಂಡು ಮನೆಯೊಳಗೆ ಓಡಿ ಬಾಗಿಲು ಹಾಕಿಕೊಂಡಿದ್ದಾರೆ. ತಕ್ಷಣ ಅಶೋಕ ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೆಲ ಸಮಯದ ನಂತರ ಅರಣ್ಯ ಇಲಾಖೆಯವರು ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಚಿರತೆ ಪತ್ತೆ ಕಾರ್ಯಾಚರಣೆ ನಡೆಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರಸಾಗರ ಅವರು, ಮನೆಬಿಟ್ಟು ಹೊರಗೆ ಬರಬೇಡಿ. ಚಿರತೆಯಿಂದ ನಿಮಗೆ ಯಾವುದೇ ಜೀವಹಾನಿ ಆಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಶಿರಡಿ ನಗರ ನಿವಾಸಿಗಳಿಗೆ ಧೈರ್ಯ ತುಂಬಿದರು.

ಕೇಂದ್ರೀಯ ವಿದ್ಯಾಲಯ ಬಂದ್‌- ಜನತಾ ಪ್ರೌಢಶಾಲೆ ಓಪನ್‌

ನೃಪತುಂಗ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಬೆಟ್ಟಕ್ಕೆ ಪ್ರವೇಶಿಸುವ ಮಾರ್ಗದಲ್ಲಿ ಬ್ಯಾರಿಕೇಡ್‌ ಹಾಕಿ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕೇಂದ್ರೀಯ ವಿದ್ಯಾಲಯ ನಂ.1ರಲ್ಲಿ ಭೌತಿಕ ತರಗತಿಗಳನ್ನು ರದ್ದು ಮಾಡಲಾಗಿದ್ದರೆ, ಬೆಟ್ಟಕ್ಕೆ ಹತ್ತಿಕೊಂಡೇ ಇರುವ ಜನತಾ ಪ್ರೌಢಶಾಲೆ ತೆರೆದುಕೊಂಡಿತ್ತು. ಸೋಮವಾರ ಈ ಶಾಲೆಯಲ್ಲಿ ತರಗತಿಗಳು ನಡೆದವು. ಸುತ್ತಲಿನ ಗ್ರಾಮಗಳ ಸುಮಾರು 8 ವಿದ್ಯಾರ್ಥಿಗಳು ಹಾಜರಾಗಿದ್ದರು. ಒಂದು ವೇಳೆ ಚಿರತೆ ಶಾಲೆ ಬಳಿ ಬಂದರೆ ಯಾರು ಹೊಣೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಶಾಲೆಯಲ್ಲಿ 8 ರಿಂದ 10ನೇ ತರಗತಿಗಳಿದ್ದು, ಅಂದಾಜು 75 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

Advertisement

ಪಕ್ಕದಲ್ಲಿಯೇ ಹಾಸ್ಟೆಲ್‌ ಸಹ ಇದೆ. ಇಲ್ಲಿ 60 ವಿದ್ಯಾರ್ಥಿಗಳು ಇದ್ದಾರೆ. ಶಾಲೆಯ ತರಗತಿಗಳನ್ನು ರದ್ದು ಪಡಿಸುವ ಬಗ್ಗೆ ನಮಗೆ ಇಲಾಖೆಯಿಂದ ಯಾವುದೇ ಆದೇಶ ಬಂದಿಲ್ಲ. ಆದರೆ ಬೆಟ್ಟದ ಸುತ್ತಮುತ್ತಲಿನ ವಿದ್ಯಾರ್ಥಿಗಳಾದರೂ ಶಾಲೆಗೆ ಬಂದಿಲ್ಲ. ಸುತ್ತಲಿನ ಹಳ್ಳಿಯ ಕೆಲ ವಿದ್ಯಾರ್ಥಿಗಳು ಮಾತ್ರ ಸೋಮವಾರ ಶಾಲೆಗೆ ಬಂದಿದ್ದಾರೆ ಎಂದು ಪ್ರೌಢಶಾಲೆ ಮುಖ್ಯ ಶಿಕ್ಷಕಿ ಆರ್‌. ವೈ. ಗೋಕಾಕ ಸುದ್ದಿಗಾರರಿಗೆ ತಿಳಿಸಿದರು.

10-15 ದಿನಗಳಿಂದ ಇಲ್ಲಿಯೇ ಇದೆಯೇ? 

ನೃಪತುಂಗ ಬೆಟ್ಟ ಸುತ್ತಮುತ್ತ ಕಾಣಿಸಿಕೊಂಡಿರುವ ಚಿರತೆ ಕಳೆದ 10-15 ದಿನಗಳಿಂದ ಇಲ್ಲಿನ ಪ್ರದೇಶದಲ್ಲಿಯೇ ವಾಸಿಸುತ್ತಿದೆಯೇ ಎಂಬ ಸಂದೇಹ ಜನರಲ್ಲಿ ಕಾಡುತ್ತಿದೆ. ಸಂಜೆಯಾದರೆ ಸಾಕು ಚಿರತೆಯು ಗಿಡ, ಪೊದೆಗಳಿಂದ ಹೊರಗೆ ಬಂದು ನಾಯಿ, ಹಂದಿಗಳನ್ನು ಹಿಡಿದುಕೊಂಡು ಹೋಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಜನರ ಕಣ್ಣಿಗೆ ಅದು ಕಾಣಿಸಿಕೊಂಡಿದೆ. ಯಾರು ಅದರತ್ತ ಚಿತ್ತ ಹರಿಸಿರಲಿಲ್ಲ ಎಂದು ಶಿರಡಿನಗರದ ನಿವಾಸಿಗಳು ಅನುಮಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next