ವಾಷಿಂಗ್ಟನ್: ಇಂಟರ್ ನೆಟ್ ದಿನಕ್ಕೆ ನೂರಾರು ಮೀಮ್ಸ್ ಗಳು ಹರಿದಾಡುತ್ತವೆ. ಈ ಮೀಮ್ಸ್ ಗಳನ್ನು ನೋಡುತ್ತಾ ಜನ ತನ್ನ ನೋವನ್ನು ಒಂದಷ್ಟು ಕ್ಷಣಕ್ಕಾದರೂ ಮರೆತು ಬಿಡುತ್ತಾರೆ.
ಹೀಗೆಯೇ ಇಂಟರ್ ನೆಟ್ ನಲ್ಲಿ ಮೀಮ್ಸ್ ಮೂಲಕ ಲಕ್ಷಾಂತರ ಜನರ ಗಮನ ಸೆಳೆದಿದ್ದ ನಾಯಿಯೊಂದು ಭಯಾನಕ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಮೃತಪಟ್ಟಿದೆ.
ಚೀಮ್ಸ್ ಎನ್ನುವ ದುಂಡು ಮುಖದ ನಾಯಿ ಸಾವಿರಾರು ಮೀಮ್ಸ್ ಗಳಲ್ಲಿ ಮಿಂಚಿತ್ತು. ಬಾಲ್ಟ್ಜ್ ಹೆಸರಿನ ನಾಯಿ 2017 ರಲ್ಲಿ ಮೀಮ್ ವೊಂದರ ಮೂಲಕ ಖ್ಯಾತಿ ಆಗಿ ‘ಚೀಮ್ಸ್’ ಎಂದೇ ಪರಿಚಿತವಾಗಿತ್ತು. ಒಂದೊಂದು ಸನ್ನಿವೇಶಕ್ಕೆ ವಿಭಿನ್ನವಾಗಿ ಫೋಟೋಗೆ ಪೋಸ್ ಕೊಡುತ್ತಿದ್ದ ಚೀಮ್ಸ್ ಇಂಟರ್ ನೆಟ್ ನಲ್ಲಿ ಬಹುಬೇಗನೆ ಜನಪ್ರಿಯವಾಗಿತ್ತು. ಕೋವಿಡ್ ಸಮಯದಲ್ಲಿ ಈ ನಾಯಿಯ ಮೀಮ್ಸ್ ಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಎಲ್ಲಿಯವರೆಗೆ ಅಂದರೆ ದೇಶ – ವಿದೇಶಗಳಲ್ಲಿ ಚೀಮ್ಸ್ ಮೀಮ್ ಗಳು ಇಂದಿಗೂ ಬಳಕೆಯಾಗುತ್ತದೆ. ಕಳೆದ ಕೆಲ ಸಮಯದಿಂದ ಚೀಮ್ಸ್ ಗೆ ಕ್ಯಾನ್ಸರ್ ಕಾಡಿತ್ತು. ಇದನ್ನು ಅದರ ಮಾಲೀಕ ಕ್ಯಾಥಿ ಅವರು ಹೇಳಿದ್ದರು.
ತನ್ನ ಪ್ರೀತಿಯ ಚೀಮ್ಸ್ ಗೆ ಇತ್ತೀಚೆಗೆ ಶಸ್ತ್ರಚಿಕಿತ್ಸೆ ಮಾಡಿಸಲಾಗಿತ್ತು. ಇದಾದ ಬಳಿಕ ಮಲಗಿದ್ದ ನಾಯಿ ಮತ್ತೇ ಏಳಲೇ ಇಲ್ಲ. ಕಿಮೋಥೆರಪಿಗೆ ಒಳಪಡಿಸಲು ಸಿದ್ದರಾಗಿದ್ದೆವು. ಆದರೆ ಆದಾಗಲೇ ನಮ್ಮ ಸಮಯ ಮೀರಿತ್ತು.. ಎಂದು ದುಃಖಭರಿತ ಪೋಸ್ಟ್ ವೊಂದನ್ನು ಕ್ಯಾಥಿ ಹಂಚಿಕೊಂಡಿದ್ದಾರೆ.
ತನ್ನ 12 ವರ್ಷದಲ್ಲಿ ಕ್ಯಾನ್ಸರ್ ನಂತಹ ಭಯಾನಕ ಕಾಯಿಲೆಗೆ ಸಿಲುಕಿ ಇಹಲೋಕ ತ್ಯಜಿಸಿದ ಚೀಮ್ಸ್ ನೆನೆದು ನೆಟ್ಟಿಗರು ದುಃಖಿಸಿದ್ದಾರೆ. ಚೀಮ್ಸ್ ನಿಧನಕ್ಕೆ ನೆಟ್ಟಿಗರು ಕಂಬನಿ ಮಿಡಿದಿದ್ದಾರೆ.