ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ನವಿವಿಧ ಗ್ರಾಪಂನಲ್ಲಿ ಪಿಆರ್ ಇಡಿ ಹಾಗೂ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದಲ್ಲಿ 2019-20ನೇ ಸಾಲಿನಲ್ಲಿ ನಡೆದಿದ್ದ ಚೆಕ್ ಡ್ಯಾಂಗಳ ಕಾಮಗಾರಿಯಲ್ಲಿ ದೊಡ್ಡ ಹಗರಣ ನಡೆದಿದೆ ಎಂದು ಆಪಾದನೆ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಇಲಾಖೆ ಹಂತದಲ್ಲಿ ತನಿಖೆಯಾಗಿದ್ದು, ಏಳು ಜನರುಸರ್ಕಾರಕ್ಕೆ 2.98 ಕೋಟಿ ಆರ್ಥಿಕ ನಷ್ಟ ಮಾಡಿ ಹಣ ದುರುಪಯೋಗ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಆದ್ದರಿಂದ ಏಳು ಎಂಜಿನಿಯರ್‌ಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲು ಜಿಪಂ ಸಿಇಒ ಅವರು ಕುಷ್ಟಗಿ ತಾಪಂ ಇಒಗೆ ಪತ್ರ ಬರೆದಿದ್ದಾರೆ.
ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಮಳೆಯ ಕೊರತೆ ಇರುವ ಪ್ರದೇಶಗಳಲ್ಲಿ ಚೆಕ್ ಡ್ಯಾಂಗಳ ನಿರ್ಮಾಣ ಮಾಡಿ ರೈತರಿಗೆ ನೆರವಾಗಬೇಕೆಂದು ಉದ್ದೇಶಿಸಿ ವಿವಿಧ ಗ್ರಾಪಂಗಳಿಗೆ ಕಾಮಗಾರಿ ಮಂಜೂರು ಮಾಡಿತ್ತು. ಕುಷ್ಟಗಿ ತಾಲೂಕಿನ ಹಲವು ಗ್ರಾಪಂನಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗ ಮತ್ತು ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದಡಿ ಉದ್ಯೋಗ ಖಾತ್ರಿ ಯೋಜನೆಯಡಿ ಹಲವು ಚೆಕ್‌ಡ್ಯಾಂ ಕಾಮಗಾರಿಗಳಲ್ಲಿ ಹಣ ದುರುಪಯೋಗವಾಗಿದೆ. ಅಲ್ಲದೇ ಕಾಮಗಾರಿಗಳು ಕಳಪೆಯಾಗಿವೆ. ಇದರಿಂದ ರೈತ ಸಮೂಹಕ್ಕೆ ಮೋಸ ಮಾಡಲಾಗುತ್ತಿದೆ ಎಂದು ಮಾಧ್ಯಮದಲ್ಲಿ ವರದಿ ಬಂದಿದ್ದವು. ಸ್ವತಃ ರೈತ ಮುಖಂಡರು ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
ಈ ಬಗ್ಗೆ ಎಚ್ಚೆತ್ತ ಜಿಪಂ ಸಿಇಒ ಪಿಆರ್‌ಇಡಿಯಡಿ ನಡೆದ 21 ಕಾಮಗಾರಿ ಹಾಗೂ ಎನ್‌ಆರ್ 198 ಸೇರಿ ಒಟ್ಟು 219 ಚೆಕ್‌ಡ್ಯಾಂ ಕಾಮಗಾರಿಗಳನ್ನು ಪರಿಶೀಲನೆ ನಡೆಸಲು ಅಧಿಕಾರಿಗಳ ತಂಡ ರಚನೆ ಮಾಡಿತ್ತು. ಅಧಿಕಾರಿಗಳ ತಂಡ ತನಿಖೆ ನಡೆಸಿ ಸಿಇಒಗೆ ವರದಿ ನೀಡಿತ್ತು. ಸಿಇಒ ಸಹಿತ ಗ್ರಾಮೀಣಾಭಿವೃದ್ಧಿ ಇಲಾಖೆಗೆ ವರದಿ ಮಾಡಿದ್ದರು. ಜೊತೆಗೆ ಬೆಂಗಳೂರು ತಂಡವೂ ಆಗಮಿಸಿ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.
ಇದನ್ನೂ ಓದಿ:ಮಹಾನಗರ ಪಾಲಿಕೆಯಿಂದ ಕರ ಸಂಗ್ರಹ ಕ್ಯಾಂಪ್ ಆರಂಭ
ವರದಿಯಲ್ಲಿ ಕಾಮಗಾರಿಯಲ್ಲಿ ಹಣ ದುರುಪಯೋಗ ಆಗಿರುವುದು ಬೆಳಕಿಗೆ ಬಂದಿದೆ. ಆದ್ದರಿಂದ ಪಿಆರ್‌ಇಡಿಯಡಿ ಅಧಿಕಾರಿಗಳು 27.95 ಲಕ್ಷ ರೂ. ದುರುಯೋಗ ಮಾಡಿಕೊಂಡಿರುವುದು ಹಾಗು ಎನ್‌ಆರ್‌ಡಬ್ಲ್ಯೂಪಿನಡಿ 270.49 ಲಕ್ಷ ರೂ. ಸೇರಿ ಒಟ್ಟು 2.98 ಕೋಟಿ ಹಣವನ್ನು ಏಳು ಜನರು ದುರುಯೋಗ ಪಡೆಸಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅವರ ಮೇಲೆ ಶಿಸ್ತು ಕ್ರಮಕ್ಕೆ ರಾಜ್ಯ ಇಲಾಖೆಯು ಸಿಇಒ ಅವರಿಗೆ ಸೂಚನೆ ನೀಡಿದ್ದು, ಸಿಇಒ ರಘುನಂದನ್ ಮೂರ್ತಿ ಅವರು ಏಳು ಜನರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವಂತೆಕುಷ್ಟಗಿ ತಾಪಂ ಇಒಗೆ ಪತ್ರ ಬರೆದಿದ್ದಾರೆ.