Advertisement

ಬೀಜ- ರಸಗೊಬ್ಬರ ಕಳಪೆ ಪರಿಶೀಲಿಸಿ

04:39 PM May 26, 2022 | Team Udayavani |

ಕೊಪ್ಪಳ: ಮುಂಗಾರು ಆರಂಭವಾಗಿದ್ದು, ಬಿತ್ತನೆಗಾಗಿ ಕಳಪೆ ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡುವ ಸಂಭವವಿದ್ದು, ರೈತರಿಗೆ ಅನ್ಯಾಯವಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ. ರಶ್ಮಿ ಮಹೇಶ ಅವರು ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಡಳಿತ ಭವನದ ಕೃಷಿ ಇಲಾಖೆಯ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಿತ್ತನೆ ಸಮಯದಲ್ಲಿ ಬೀಜ ಹಾಗೂ ರಸಗೊಬ್ಬರ ಪೂರೈಕೆದಾರರು, ಮಾರಾಟಗಾರರು ಕಳಪೆ ಬೀಜ ಮತ್ತು ರಸಗೊಬ್ಬರಗಳನ್ನು ವಿತರಿಸಿ ರೈತರಿಗೆ ಮೋಸ ಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಎಲ್ಲ ಬೀಜ ಮತ್ತು ರಸಗೊಬ್ಬರ ಮಾರಾಟ ಮತ್ತು ಪೂರೈಕೆದಾರ ಅಂಗಡಿಗಳಿಗೆ ದಿಢೀರ್‌ ದಾಳಿ ನಡೆಸಿ ಮಾದರಿ ಸಂಗ್ರಹಿಸಿ, ಪ್ರಯೋಗಾಲಯದಲ್ಲಿ ಪರೀಕ್ಷಿಸಿ, ಗುಣಮಟ್ಟದ ಬೀಜ ಹಾಗೂ ರಸಗೊಬ್ಬರವನ್ನು ರೈತರಿಗೆ ದೊರೆಯುವಂತೆ ಮಾಡಿ. ಕಲಬೆರಕೆ ಹಾಗೂ ಕಳಪೆ ಸಾಮಗ್ರಿ ಪೂರೈಸಿದ ಅಂಗಡಿಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದರು.

ಇದಕ್ಕೆ ಉತ್ತರಿಸಿದ ಜಂಟಿ ಕೃಷಿ ನಿರ್ದೇಶಕ ಸದಾಶಿವ ಅವರು, ಕಳಪೆ ಬೀಜ ಮತ್ತು ರಸಗೊಬ್ಬರ ಪೂರೈಕೆ ಪರಿಶೀಲಿಸಲು ಜಾಗೃತ ದಳ ರಚಿಸಿದ್ದು, ಹಲವಾರು ತಂಡಗಳಾಗಿ ಬೀಜ ಮತ್ತು ರಸಗೊಬ್ಬರ ಅಂಗಡಿಗಳ ಮೇಲೆ ದಾಳಿ ಮಾಡಿ ಗುಣಮಟ್ಟದ ಪರಿಶೀಲನೆ ನಡೆಸುತ್ತಿದೆ. ಏಪ್ರಿಲ್‌ನಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಮಾತನಾಡಿ, ಜಿಲ್ಲೆಯ ಎಲ್ಲ ಆರ್‌ಎಸ್‌ಕೆ ಹಾಗೂ ಸೊಸೈಟಿಗಳಲ್ಲಿ ಜಿಲ್ಲೆಯ ಬೇಡಿಕೆಗೆ ತಕ್ಕಂತೆ ಬೀಜ ಹಾಗೂ ರಸಗೊಬ್ಬರದ ದಾಸ್ತಾನು ಇರಬೇಕು. ನಿತ್ಯ ವಿತರಣೆಯಾದ ಬೀಜ ಹಾಗೂ ರಸಗೊಬ್ಬರದ ಮಾಹಿತಿ ಸಂಗ್ರಹಿಸಿ, ಬೇಡಿಕೆಯನುಸಾರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಮೇ ತಿಂಗಳಲ್ಲಿ ಮಳೆಯಿಂದ ಬೆಳೆಹಾನಿ, ಜೀವ ಹಾನಿಯಾದ ಸಂತ್ರಸ್ತರಿಗೆ ಶೀಘ್ರ ಪರಿಹಾರ ಒದಗಿಸಬೇಕು. ಬೆಳೆಹಾನಿ ಮಾಹಿತಿಯನ್ನು ಸೂಕ್ತ ಸಮೀಕ್ಷೆಯ ಆಧಾರದಲ್ಲಿ ಪರಿಹಾರ ಪೋರ್ಟಲ್‌ನಲ್ಲಿ ದಾಖಲಿಸಿ, ರೈತರಿಗೆ ಪರಿಹಾರ ಒದಗಿಸಿ ಎಂದರು.

Advertisement

ಮೇನಲ್ಲಿ 2-3 ದಿನಗಳ ಕಾಲ ಸುರಿದ ಮಳೆಯಿಂದ ಕೋಟಿಗಟ್ಟಲೇ ನಷ್ಟವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ಸಂಭವವಿದ್ದು, ಎಲ್ಲ ಅಧಿ ಕಾರಿಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಸಣ್ಣ ನೀರಾವರಿ ಇಲಾಖೆಯಿಂದ ಹಳ್ಳ, ಡ್ಯಾಂಗಳ ವ್ಯಾಪ್ತಿಯಲ್ಲಿ ವಾಸಿಸುವ ಜನರಿಗೆ ಮುನ್ನೆಚ್ಚರಿಕೆ ನೀಡಿ, ಅಗತ್ಯವಿದ್ದರೆ ಸ್ಥಳಾಂತರಕ್ಕೆ ಸೂಚಿಸಬೇಕು. ಯಾವುದೇ ಸೂಚನೆ ಇಲ್ಲದೇ ಏಕಾಏಕಿ ಡ್ಯಾಂಗಳಿಂದ ನೀರು ಬಿಡುಗಡೆ ಮಾಡಬೇಡಿ. ಮಳೆಗಾಲ ಮುಗಿಯುವವರೆಗೂ ಎಲ್ಲ ಇಲಾಖೆಗಳ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರುವುದು ಕಡ್ಡಾಯ. ಆದೇಶ ಪಾಲಿಸದಿದ್ದರೆ ಅಂತಹವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಾಲೆಗಳು ಆರಂಭವಾಗಿದ್ದು, ಶಾಲಾ ಕೊಠಡಿಗಳು ಸುವ್ಯವಸ್ಥೆಯಲ್ಲಿರುವ ಬಗ್ಗೆ ಖಾತ್ರಿ ಪಡಿಸಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ನೀಡಿ. ದುರಸ್ತಿಯಲ್ಲಿರುವ ಶಾಲಾ ಕೊಠಡಿಗಳಲ್ಲಿ ತರಗತಿ ತೆಗೆದುಕೊಳ್ಳಬೇಡಿ. ವಸತಿ ಶಾಲೆಯಲ್ಲಿನ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಬೇಕು. ಎಲ್ಲ ತಾಪಂ ಇಒಗಳು ಪ್ರತಿದಿನ ಶಾಲೆ ಆಯ್ಕೆ ಮಾಡಿ ಮಧ್ಯಾಹ್ನದ ಊಟವನ್ನು ವಿದ್ಯಾರ್ಥಿಗಳೊಂದಿಗೆ ಮಾಡಬೇಕು. ವಾರದಲ್ಲಿ ಕನಿಷ್ಟ ಮೂರು ದಿನವಾದರೂ ನಿಮ್ಮ ವ್ಯಾಪ್ತಿಯ ವಸತಿ ಶಾಲೆಯಲ್ಲಿ ಊಟ ಮಾಡಬೇಕು. ವಿದ್ಯಾರ್ಥಿಗಳಿಂದ ಮಾಹಿತಿ ಸಂಗ್ರಹಿಸಿ, ಕೊರತೆ ಇದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬಯೋ ಮೆಟ್ರಿಕ್‌ ಹಾಜರಾತಿ ಕಡ್ಡಾಯಗೊಳಿಸಿದೆ. ರಾಜ್ಯ ಸಚಿವಾಲಯದಲ್ಲಿ ಪ್ರತಿ ವಸತಿ ಶಾಲೆಯ ಇ-ಹಾಜರಾತಿ ಪರಿಶೀಲಿಸಲಾಗುತ್ತಿದೆ. ಹಾಜರಾತಿಗೆ ಅನುಗುಣವಾಗಿ ವಿದ್ಯಾರ್ಥಿಗಳ ಆಹಾರ ಪೂರೈಕೆ ಬಿಲ್‌ ಸಲ್ಲಿಸಬೇಕು. ಅಕ್ರಮ ಕಂಡುಬಂದರೆ ಸಂಬಂಧಿ ಸಿದ ತಾಲೂಕು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳಿಂದ ಹಣ ಮರುಪಾವತಿ ಮಾಡಿಕೊಳ್ಳಲಾಗುತ್ತದೆ. ಶಾಲೆಗಳಿಗೆ ವಿತರಿಸುವ ಡೆಸ್ಕ್, ಮುಂತಾದ ಪೀಠೊಪಕರಣ ಶಾಲಾ ಎಸ್‌ಡಿಎಂಸಿ ಸಮಿತಿ ಹಾಗೂ ಶಾಲಾ ಮುಖ್ಯೋಪಾಧ್ಯಾಯರ ಸಮ್ಮುಖದಲ್ಲಿ ವಿತರಣೆ ಮಾಡಬೇಕು. ಗುಣಮಟ್ಟದ ಬಗ್ಗೆ ಎಸ್‌ ಡಿಎಂಸಿ ಸಮಿತಿ ಹಾಗೂ ಮುಖ್ಯೋಪಾಧ್ಯಾಯರು ಜಂಟಿಯಾಗಿ ಪ್ರಮಾಣ ಪತ್ರ ನೀಡಬೇಕು. ಸಾಮಗ್ರಿ ಪೂರೈಕೆದಾರರು ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಜಿಪಂನ ಅನಿರ್ಬಂಧಿತ ಅನುದಾನದಲ್ಲಿ ಆರಂಭವಾದ ಕಾಮಗಾರಿಗಳು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳ್ಳಬೇಕು. ಅನಗತ್ಯ ವಿಳಂಬ, ಕಳಪೆ ಕಾಮಗಾರಿ ನಡೆಸುವ ಅನುಷ್ಠಾನ ಏಜೆನ್ಸಿ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌, ಜಿಪಂ ಸಿಇಒ ಬಿ. ಫೌಜಿಯಾ ತರನ್ನುಮ್‌, ಜಿಪಂ ಉಪಕಾರ್ಯದರ್ಶಿ ಶರಣಬಸವರಾಜ, ಯೋಜನಾ ನಿರ್ದೇಶಕ ಟಿ. ಕೃಷ್ಣಮೂರ್ತಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next