Advertisement

ಎನ್‌ಎಂಸಿ ಮಸೂದೆ ಪರಿಶೀಲಿಸಿ

11:58 AM Jan 24, 2018 | Team Udayavani |

ಬೆಂಗಳೂರು: ಸಿದ್ಧವಾಗಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆ 2017ರಲ್ಲಿ ಕೆಲವು ನಿಯಮಗಳನ್ನು ಬದಲಾವಣೆ ಮಾಡುವಂತೆ ರಾಜ್ಯ ಆರೋಗ್ಯ ಸೇವೆಗಳ ಪರಿಣಿತರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್‌ ಆಫ್ ಹೆಲ್ತ್‌ ಕೇರ್‌ ಪ್ರವೈಡರ್ಸ್‌ ಆಫ್ ಇಂಡಿಯಾದ ಅಧ್ಯಕ್ಷ ಡಾ.ಬಿ.ಎಸ್‌.ಅಜಯ್‌ಕುಮಾರ್‌, ಸರ್ಕಾರದ ಕ್ರಮ ಭವಿಷ್ಯತ್ತಿನ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ. ಆದರೆ ಇದರಲ್ಲಿ ಕೆಲವು ನ್ಯೂನತೆಗಳಿವೆ. ಅವುಗಳನ್ನು ಸರಿಪಡಿಸಿ ಮಸೂದೆ ಮಂಡನೆಯಾಗಲಿ ಎಂದು ಮನವಿ ಮಾಡಿದರು.

ಸರ್ಕಾರ ಈ ಮಸೂದೆ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಹೊರಟಂತೆ ಕಾಣುತ್ತಿದ್ದು, ಇದನ್ನು ಕೈಬಿಡಬೇಕು. ಎಂಬಿಬಿಎಸ್‌ ಪರೀಕ್ಷೆ ಮುಗಿಸಿದ ನಂತರ ಮತ್ತೆ ನ್ಯಾಷನಲ್‌ ಲೈಸೆನ್ಷಿಯೇಟ್‌ ಎಕ್ಸಾಮಿನೇಷನ್‌ ಅನ್ನು ಮಾಡಬೇಕೆಂಬ ನಿಂಬಂಧನೆ ವಿಧಿಸಲಾಗಿದೆ. ಇದು ಕೂಡ ಸರಿಯಾದ‌ ತೀರ್ಮಾನವಲ್ಲ. ಎಂಬಿಬಿಎಸ್‌ ಮುಗಿಸಿದ ಮೇಲೆ ಇಂತಹ ಪರೀಕ್ಷೆಗಳು ಅನಗತ್ಯ ಎಂದರು.

ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಣಕ್ಕೆ ಪರವಾನಿಗೆ, ಗುಣಮಟ್ಟ ಪರಿಶೀಲನೆ, ಮಾನ್ಯತೆ, ಮತ್ತು ಆಡಳಿತದ ಮೇಲೆ ನಿಗಾವಹಿಸಲು ಒಂದು ಸ್ವಾಯತ್ತ ಸಂಸ್ಥೆಯನ್ನು ನೇಮಕ ಮಾಡುವ ಅವಶ್ಯವಿದೆ ಎಂದು ಅಭಿಪ್ರಾಯಪಟ್ಟರು.

ಆಯುಷ್‌ ವೈದ್ಯರು ಅಲೋಪಥಿಕ್‌ ಔಷಧಿಯಲ್ಲಿ ಪ್ರಾಕ್ಟೀಸ್‌ ಮಾಡುವ ಸಂಬಂಧ ಕೋರ್ಸ್‌ಗಳಿಗೆ ಅವಕಾಶ ನೀಡಬಾರದು. ಅಲೋಪಥಿಕ್‌ ಶಿಕ್ಷಣವು ವಾಸ್ತವಿಕ ನೆಲೆಗಟ್ಟಿನ ಮೇಲಿರಬೇಕು. ಯಾವುದೇ ಗೊಂದಲಕ್ಕೆ ಎಡೆ ಮಾಡಿಕೊಡದಂತಿರಬೇಕು ಎಂದು ಹೇಳಿದರು.

Advertisement

ಅಸೋಸಿಯೇಷನ್‌ ಆಫ್ ನ್ಯಾಷನಲ್‌ ಬೋರ್ಡ್‌ ಅಕ್ರಿಡಿಟೆಡ್‌ ಇನ್‌ಸ್ಟಿಟ್ಯೂಷನ್ಸ್‌ (ಎಎನ್‌ಬಿಎಐ)ನ ಅಧ್ಯಕ್ಷ ಡಾ.ವೆಂಕಟೇಶ ಕೃಷ್ಣಮೂರ್ತಿ ಮಾತನಾಡಿ, ಭಾರತದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಗಂಭೀರವಾದ  ಕಾನೂನಿನ ಅಗತ್ಯವಿದೆ ಎಂದರು.

ಜನಸಾಮಾನ್ಯರಿಗೆ ಗುಣಮಟ್ಟದ ಚಿಕಿತ್ಸಾ ಸೌಲಭ್ಯಗಳು ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಕಾನೂನು ರೂಪಿಸಬೇಕಾಗಿದೆ.
-ಡಾ. ಅಲೆಕ್ಸಾಂಡರ್‌ ಥಾಮಸ್‌, ಎಎಚ್‌ಪಿಐ ಅಧ್ಯಕ್ಷ.

ಜನರು ಹಿಂದೇಟು ಹಾಕುತ್ತಿದ್ದಾರೆ: ನಮ್ಮಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಆಗತ್ಯ ಸೌಲಭ್ಯಗಳಿಲ್ಲ. ಹೀಗಾಗಿಯೇ ಜನರು ಸರ್ಕಾರಿ ಆಸ್ಪತ್ರೆಗಳಿಗೆ ಹೋಗಲು ಹಿಂದೇಟು ಹಾಕುತ್ತಾರೆ. ಕೇಂದ್ರ ಸರ್ಕಾರ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಣಕ್ಕೆ ಪರವಾನಿಗೆ ಸೇರಿದಂತೆ ಹಲವು ವಿಚಾರಗಳ ಮೇಲೆ ನಿಗಾ ವಹಿಸಲು ಒಂದು ಸ್ವಾಯತ್ತ ಸಂಸ್ಥೆಯನ್ನು ನೇಮಕ ಮಾಡಲಿ ಎಂದು ನಾರಾಯಣ ಹೆಲ್ತ್‌ ನ ಅಧ್ಯಕ್ಷ. ಡಾ.ದೇವಿ ಪ್ರಸಾದ್‌ ಶೆಟ್ಟಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next