Advertisement

ಜಾಗ ಮೀಸಲಿಡುವ ಮೊದಲು ಸ್ಥಳ ಪರಿಶೀಲಿಸಿ: ಎಸಿ ಸೂಚನೆ 

02:29 PM Nov 23, 2017 | Team Udayavani |

ಪುತ್ತೂರು: ಗ್ರಾಮ ಪಂಚಾಯತ್‌ ವ್ಯಾಪ್ತಿಯ ಘನತ್ಯಾಜ್ಯ, ಶ್ಮಶಾನ, ನಿವೇಶನ ಹಂಚಿಕೆಗೆ ಗಡಿ ಗುರುತು ಗೊಂದಲದ ಹಿನ್ನೆಲೆಯಲ್ಲಿ ಪುತ್ತೂರು ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಬುಧವಾರ ಪ್ರಗತಿ ಪರಿಶೀಲನ ಸಭೆ ನಡೆಯಿತು.

Advertisement

ಅಧ್ಯಕ್ಷತೆ ವಹಿಸಿದ್ದ ಸಹಾಯಕ ಆಯುಕ್ತ ರಘುನಂದನ ಮೂರ್ತಿ ಮಾತನಾಡಿ, ಸರಕಾರಿ ಯೋಜನೆಗಳಿಗೆ ಜಾಗ ಮೀಸಲಿಡುವ ಮೊದಲು ಜಾಗ ನೋಡಿಕೊಳ್ಳಬೇಕು. ಕುಳಿತಲ್ಲಿಂದಲೇ ಜಾಗ ಮೀಸಲಿಟ್ಟರೆ ಬಳಿಕ ಹಲವಾರು ಸಮಸ್ಯೆ ಎದುರಾಗುತ್ತವೆ. ಮೀಸಲಿಟ್ಟ ಜಾಗ ಅರಣ್ಯ ವ್ಯಾಪ್ತಿಗೆ ಒಳಪಟ್ಟರೆ ಯೋಜನೆ ಕಾರ್ಯಗತ ಸಾಧ್ಯವೇ ಇಲ್ಲ. ಅನುದಾನವೂ ವೃಥಾ ಪೋಲಾಗಬಹುದು. ಈ ಬಗ್ಗೆ ಗಮನಿಸಿ ಎಂದು ಸಲಹೆ ನೀಡಿದರು.

ಬೆಟ್ಟಂಪಾಡಿ ಪಿಡಿಒ ಮಾತನಾಡಿ, ಘನತ್ಯಾಜ್ಯ ಘಟಕಕ್ಕಾಗಿ ಒಂದು ಎಕ್ರೆ ಜಾಗ ಕೇಳಿದ್ದೆವು. ಆದರೆ 10 ಸೆಂಟ್ಸ್‌ ಜಾಗ ಮಂಜೂರಾಗಿದೆ. ಕಾಮಗಾರಿಗಾಗಿ 1.5 ಲಕ್ಷ ರೂ. ಖರ್ಚಾಗಿದೆ. ಅಷ್ಟರಲ್ಲಿ ಯಾವುದೇ ಸಮಸ್ಯೆ ಇಲ್ಲದಿದ್ದರೂ ಸ್ಥಳೀಯರು ಆಕ್ಷೇಪ ಹಾಕಿದ್ದಾರೆ. ಸುತ್ತಮುತ್ತ 200 ಮೀಟರ್‌ ವ್ಯಾಪ್ತಿಯಲ್ಲಿ ಮನೆಗಳೇ ಇಲ್ಲ. ತಾಲೂಕು ಆರೋಗ್ಯಾಧಿಕಾರಿ ಕೂಡ ಘನತ್ಯಾಜ್ಯ ಘಟಕ ಮಾಡದಂತೆ ವರದಿ ನೀಡಿದ್ದಾರೆ. ಸಹಾಯಕ ಆಯುಕ್ತರು ಬಂದು ಸ್ಥಳ ಪರಿಶೀಲನೆ ನಡೆಸುವಂತೆ ಮನವಿ ಮಾಡಿಕೊಂಡರು.

ಜಾಗ ಅತಿಕ್ರಮಣ
ಸಹಾಯಕ ಆಯುಕ್ತ ಮಾತನಾಡಿ, ಗ್ರಾ.ಪಂ.ನ ಹಲವು ಜಾಗ ಅತಿಕ್ರಮಣ ಆಗಿದೆ. ಇದರ ಗಡಿ ಗುರುತು ಮಾಡಿ, ಬೇಲಿ ಹಾಕಿ ಕೊಡಲಾಗುವುದು. ಬಳಿಕ ತಾ.ಪಂ.ನ ಜವಾಬ್ದಾರಿ. ಇಲ್ಲದಿದ್ದರೆ ಮತ್ತೆ ಅತಿಕ್ರಮಣ ಆಗುತ್ತದೆ ಎಂದು ತಾ.ಪಂ. ಇಒ ಜಗದೀಶ್‌ ಅವರಿಗೆ ಸೂಚಿಸಿದರು.

ಕುಟ್ರಾಪ್ಪಾಡಿ ಗ್ರಾಮ ಪಂಚಾಯತ್‌ ನಿಂದ 20 ಜನರಿಗೆ ನಿವೇಶನ ಹಂಚಿಕೆಯಾಗಿದೆ. ಇದ ರಲ್ಲಿ 8ಮಂದಿಗೆ 94ಸಿ ಅಡಿ ಜಾಗ ನೀಡಲಾಗಿದೆ ಎಂದಾಗ ಪ್ರತಿಕ್ರಿಯಿಸಿದ ಸಹಾಯಕ ಆಯುಕ್ತ, ಗ್ರಾ.ಪಂ. ಜಾಗವನ್ನು 94 ಸಿ ಅಡಿ ನೀಡಲು ಸಾಧ್ಯವಿಲ್ಲ. ಗ್ರಾಮ ಪಂಚಾಯತ್‌ ನಿರ್ಣಯ ಕೈಗೊಂಡು, ಆ ಜಾಗವನ್ನು ಕಂದಾಯ ಇಲಾಖೆಗೆ ಹಸ್ತಾಂತರ ಮಾಡಬೇಕು ಎಂದರು.

Advertisement

ನಿವೇಶನ ಹಂಚಿಕೆಯಲ್ಲಿ ಕಂದಾಯ ಹಾಗೂ ಪಂಚಾಯತ್‌ನ ಪಾತ್ರ ವಿಭಿನ್ನ. ಕಂದಾಯ ಇಲಾಖೆ ಗಡಿಗುರುತು ಹಾಕಿಕೊಡಬಹುದಷ್ಟೇ. ಪದೇ ಪದೇ ಸಭೆಗೆ ಬಂದು ಕಂದಾಯ ಇಲಾಖೆ ಕಡೆ ಕೈ ತೋರಿಸುವಂತೆ ಆಗಬಾರದು. ವಿಎ, ಆರ್‌ಐ ಆರ್‌ಟಿಸಿ ಮಾಡಿಕೊಡುವರು. ಉಳಿದ ಅಭಿವೃದ್ಧಿ ಕೆಲಸವನ್ನು ಪಂಚಾಯತ್‌ ನಿಭಾಯಿಸಬೇಕು ಎಂದು ಅವರು ಹೇಳಿದರು.

ಶ್ಮಶಾನಕ್ಕೆ  10 ಎಕ್ರೆ 
ಹಿರೇಬಂಡಾಡಿಯಲ್ಲಿ ಶ್ಮಶಾನಕ್ಕಾಗಿ 8-10 ಎಕ್ರೆ ಜಾಗ ಮೀಸಲಿಡಲಾಗಿದೆ. ಶ್ಮಶಾನಕ್ಕೆ ಇಷ್ಟು ಜಾಗದ ಆವಶ್ಯಕತೆ ಇಲ್ಲ. ಉಳಿದ ಜಾಗವನ್ನು ಇತರೆ ಕೆಲಸಕ್ಕೆ ಬಳಸಿಕೊಳ್ಳಬಹುದು. ಶ್ಮಶಾನ ಬೇರೆ ಇದೆ ಎಂದಾದರೆ, ಈಗ ನಿಗದಿ ಮಾಡಿರುವ ಜಾಗವನ್ನು ಕ್ಯಾನ್ಸಲ್‌ ಮಾಡಿ, ಪಂಚಾಯತ್‌ನ ಇತರೆ ಕೆಲಸಗಳಿಗೆ ಬಳಸಿಕೊಳ್ಳಬಹುದು ಎಂದು ರಘುನಂದನಮೂರ್ತಿ ಸಲಹೆ ನೀಡಿದರು.

ಐತ್ತೂರು ಪಿಡಿಒ ಇಲ್ಲ
ಸಭೆಯಲ್ಲಿ ಪ್ರಗತಿ ಪರಿಶೀಲನೆ ನಡೆಸುವಾಗ ಐತ್ತೂರು ಪಿಡಿಒ ಬಂದಿರಲಿಲ್ಲ. ಈ ಬಗ್ಗೆ ಗರಂ ಆದ ತಾ.ಪಂ. ಇಒ ಜಗದೀಶ್‌, ವಸತಿ ಅದಾಲತ್‌ಗೂ ಪಿಡಿಒ ಬಂದಿಲ್ಲ. ಇಂದಿನ ಸಭೆಗೂ ಬಂದಿಲ್ಲ. ಅವರಿಗೆ ಜವಾಬ್ದಾರಿಯೇ ಇಲ್ಲ. ಎಷ್ಟು ಹೊತ್ತಿಗೆ ಸಭೆಗೆ ಬರಬೇಕು ಎಂಬ ಜ್ಞಾನವೂ ಇಲ್ಲ ಎಂದರು. ತಾ.ಪಂ.ಉಪಾಧ್ಯಕ್ಷೆ ರಾಜೇಶ್ವರಿ, ಸ್ಥಾಯೀ ಸಮಿತಿ ಅಧ್ಯಕ್ಷ ಮುಕುಂದ, ಇಒ ಜಗದೀಶ್‌, ತಹಶೀಲ್ದಾರ್‌ ಅನಂತಶಂಕರ, ಕಡಬ ವಿಶೇಷ ತಹಶೀಲ್ದಾರ್‌ ಜೋನ್‌ಪ್ರಕಾಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next