Advertisement

ಕಾಮಗಾರಿ ಆರಂಭಕ್ಕೆ ಮುನ್ನ ಸ್ಥಳ ಪರಿಶೀಲಿಸಿ: ಕುಮಾರ್‌

01:15 PM Jun 20, 2018 | |

ಸೊರಬ: ಯಾವುದೇ ಇಲಾಖೆಯ ಮುಖ್ಯಸ್ಥರು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿದ ನಂತರವೇ ಕಾಮಗಾರಿ ಪ್ರಾರಂಭಿಸುವಂತೆ ಶಾಸಕ ಕುಮಾರ್‌ ಬಂಗಾರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಪಂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಮನಸ್ಸಿಗೆ ಬಂದಂತೆ ಯೋಜನೆ ರೂಪಿಸಿ ಗುತ್ತಿಗೆದಾರರಿಗೆ ಕಾಮಗಾರಿ ಪ್ರಾರಂಭಿಸಲು ಅವಕಾಶ ನೀಡಬಾರದು. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಕಾಮಗಾರಿ ಪ್ರಾರಂಭಿಸುವ ಮುನ್ನ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ಪ್ರಾರಂಭಿಸಲು ಅನುಮತಿ ನೀಡಬೇಕು ಎಂದು ಎಚ್ಚರಿಸಿದರು.

ಜನರ ಆರೋಗ್ಯಕ್ಕೆ ಸಂಚಕಾರ ತರುವ ನಕಲಿ ವೈದ್ಯರ ಬಗ್ಗೆ ಪಟ್ಟಿ ಮಾಡಿ, ಯಾರು ನಕಲಿ ವೈದ್ಯರು ಎನ್ನುವುದನ್ನು ಮಾಹಿತಿ ಸಂಗ್ರಹಿಸಿ ಕೂಡಲೇ ಅಂತಹ ಕ್ಲಿನಿಕ್‌ಗಳನ್ನು ಮುಚ್ಚಿಸಬೇಕು. ನಕಲಿ ವೈದ್ಯರ ಬಗ್ಗೆ 15 ದಿನದೊಳಗೆ ವರದಿ
ನೀಡುವಂತೆ ತಾಲೂಕು ವೈದ್ಯಾಧಿಕಾರಿ ಗಾಯತ್ರಿ ಅವರಿಗೆ ಸೂಚಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅರಿವಳಿಕೆ ವೈದ್ಯರ ಹುದ್ದೆಗೆ ರಾಜೀನಾಮೆ ನೀಡಿರುವುದರಿಂದ ಹೆರಿಗೆ ಹಾಗೂ ಶಸ್ತ್ರ ಚಿಕಿತ್ಸೆಗೆ ತೊಂದರೆಯಾಗುತ್ತಿದೆ. ತಾಲೂಕಿನ ಹೊಸಬಾಳೆ, ಬಾರಂಗಿ, ಕೆರೆಹಳ್ಳಿ ಹಾಗೂ ಉಳವಿ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿನ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ ಎಂದು ತಾಲೂಕು ವೈದ್ಯಾಧಿಕಾರಿ ಗಾಯತ್ರಿ ಸಭೆಗೆ ಮಾಹಿತಿ ನೀಡುತ್ತಿದ್ದಂತೆ, ಮಧ್ಯೆ ಪ್ರವೇಶಿಸಿದ ಶಾಸಕರು, ಕಟ್ಟಡದ ದುರಸ್ತಿಗೆ ಕ್ರಮ ಕೈಗೊಂಡಿರುವ ಬಗ್ಗೆ ಜಿಪಂ ಎಂಜಿನಿಯರ್‌ ಕೇಳಿದಾಗ ಆರೋಗ್ಯ ಇಲಾಖೆಯ ಅಧಿಕಾರಿಗಳು ಕಟ್ಟಡದ ದುರಸ್ತಿಗೆ ಸಂಬಂಧಪಟ್ಟಂತೆ ಮಾಹಿತಿ ನೀಡದಿರುವುದು ಜೊತೆಗೆ ಕ್ರಿಯಾ ಯೋಜನೆ ಸಿದ್ಧಪಡಿಸದಿರುವ ಬಗ್ಗೆ ಆಕ್ರೋಶಗೊಂಡ ಶಾಸಕರು, ಜನರು ಆರೋಗ್ಯದ ಬಗ್ಗೆ ಕಾಳಜಿ ಇರುವ ಇಲಾಖೆ ಉತ್ತಮ ಕಟ್ಟಡ, ಕುಡಿಯುವ ನೀರು ಸೇರಿದಂತೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವಂತೆ ತಾಕೀತು ಮಾಡಿದರು.

ಪಟ್ಟಣದ ಮುಖ್ಯರಸ್ತೆ ವಿಸ್ತರಣೆಗೆ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಸಿಕ್ಕಿರುವಾಗ ಸ್ಥಳೀಯ ಅಧಿಕಾರಿಗಳು ವಿಳಂಬ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಬಹಳಷ್ಟು ನಿವಾಸಿಗಳು 10 ವರ್ಷಗಳ ಹಿಂದೆಯೇ
ಸರ್ಕಾರದಿಂದ ಪರಿಹಾರ ಪಡೆದು ರಸ್ತೆ ವಿಸ್ತರಣೆಗೆ ಅನುಕೂಲ ಮಾಡಿ ಕೊಟ್ಟಿದ್ದಾರೆ.

Advertisement

ಆದರೆ ಕೆಲವರು ಮಾತ್ರ ಹೆಚ್ಚಿನ ಪರಿಹಾರಕ್ಕೆ ತಡೆ ಉಂಟು ಮಾಡುತ್ತಿದ್ದು, ಈಗಾಗಲೇ ಅವರನ್ನು ಕರೆದು ಮನವೊಲಿಸಲಾಗಿದೆ. ರಸ್ತೆ ವಿಸ್ತರಣೆಗೆ ಒಂದು ವಾರದಲ್ಲಿ ಲೋಕೋಪಯೋಗಿ ಇಲಾಖೆ ಮುಂದಾಗಬೇಕು ಎಂದು ಎಂಜಿನಿಯರ್‌ ರೇವಣಸಿದ್ದಯ್ಯ ಅವರಿಗೆ ಸೂಚಿಸಿದರು.

ಪಟ್ಟಣದಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಪಪಂ ಮುಖ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ನೂರಾರು ಸಂಖ್ಯೆಯಲ್ಲಿ ದನಗಳ ಹಾವಳಿ ಇದೆ. ಅವುಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಲು ಏಕೆ ಗಮನ ನೀಡಿಲ್ಲ. ಕೂಡಲೇ ಹಸುಗಳ ಮಾಲೀಕರ ಹೆಸರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಎಚ್ಚರಿಸಿದರು.

ತಾಪಂ ಅಧ್ಯಕ್ಷೆ ನಯನಾ ಶ್ರೀಪಾದ ಹೆಗಡೆ, ಉಪಾಧ್ಯಕ್ಷ ಸುರೇಶ್‌ ಹಾವಣ್ಣನವರ್‌, ಜಿಪಂ ಸದಸ್ಯರಾದ ಶಿವಲಿಂಗೇಗೌಡ, ತಾರಾ ಶಿವಾನಂದಪ್ಪ, ಸತೀಶ್‌ ಅರ್ಜುನಪ್ಪ, ವೀರೇಶ್‌ ಕೊಟಗಿ, ತಹಶೀಲ್ದಾರ್‌ ಸಿ.ಪಿ. ನಂದಕುಮಾರ್‌, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಬಸವರಾಜ್‌, ಸಮಾಜ ಕಲ್ಯಾಣಾಧಿಕಾರಿ ರವಿಕುಮಾರ್‌,
ಬಿಇಒ ಮಂಜುನಾಥ, ಪಪಂ ಮುಖ್ಯಾಧಿಕಾರಿ ಬಾಲಚಂದ್ರಪ್ಪ, ಲೋಕೋಪಯೋಗಿ ಇಂಜಿನಿಯರ್‌ ರೇವಣಸಿದ್ದಯ್ಯ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next