Advertisement

ಲಕ್ಷಕ್ಕೂ ಹೆಚ್ಚು ಹಣ ಡ್ರಾ ಮಾಡಿದ್ರೆ ಪರಿಶೀಲಿಸಿ

02:12 PM Apr 16, 2023 | Team Udayavani |

ಮಂಡ್ಯ: ಬ್ಯಾಂಕ್‌ಗಳಲ್ಲಿ ಒಂದು ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ನಗದನ್ನು ಗ್ರಾಹಕರು ತೆಗೆದ ಸಂದರ್ಭದಲ್ಲಿ ಪರಿಶೀಲಿಸಬೇಕು. ಒಂದೇ ಖಾತೆ ಯಿಂದ ಹಲವು ಖಾತೆಗಳಿಗೆ ಪೇಟಿಎಂ, ಗೂಗಲ್‌ ಪೇ ಅಥವಾ ಇನ್ನಿತರೆ ವಿಧದಿಂದ ಹಣ ಜಮೆಯಾದರೆ ಬ್ಯಾಂಕ್‌ಗಳು ನೀಡಲಾಗಿರುವ ನಮೂನೆಗಳಲ್ಲಿ ವರದಿ ನೀಡಬೇಕು ಎಂದು ಚುನಾವಣೆ ವೆಚ್ಚ ವೀಕ್ಷಕರು ಅಧಿಕಾರಿಗಳಿಗೆ ಸೂಚಿಸಿದರು.

Advertisement

ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.

ಬ್ಯಾಂಕ್‌ ಮ್ಯಾನೇಜರ್‌ಗಳಿಗೆ ತಿಳಿಸಿ: ಪ್ರತಿ ದಿನ ಬ್ಯಾಂಕ್‌ಗಳಿಂದ ವರದಿ ಪಡೆದುಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿರುವ ಸಣ್ಣ ಬ್ಯಾಂಕ್‌ಗಳು, ಕೋ- ಆಪರೇಟಿವ್‌, ಖಾಸಗಿ ಸೇರಿದಂತೆ ಯಾವುದೇ ಬ್ಯಾಂಕ್‌ ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು. ಬ್ಯಾಂಕ್‌ ಮ್ಯಾನೇಜರ್‌ಗಳ ಸಭೆ ಕರೆದು ಅವರಿಗೆ ಇನ್ನೊಂದು ಬಾರಿ ವಿಷಯವನ್ನು ತಿಳಿಸಬೇಕು ಎಂದು ತಿಳಿಸಿದರು.

ಅಬಕಾರಿ ಅಕ್ರಮಗಳ ಬಗ್ಗೆ ಸೂಕ್ಷ್ಮ ನಿಗಾ ವಹಿಸಿ: ಅಬಕಾರಿ ಮಾರಾಟದಲ್ಲಿ ಡೀಲರ್‌ ಗಳಿಂದ ಈ ಹಿಂದಿನ ತಿಂಗಳುಗಳಲ್ಲಿ ಮಾರಾಟವಾಗುತ್ತಿದ್ದ ಮದ್ಯ ಹಾಗೂ ಪ್ರಸ್ತುತ ಮಾರಾಟವಾಗುತ್ತಿರುವ ಬಗ್ಗೆ ಪ್ರತಿದಿನ ತಾಳೆ ಮಾಡಿ ವ್ಯತ್ಯಾಸ ಕಂಡುಬಂದಲ್ಲಿ ಪರಿಶೀಲಿಸಬೇಕು. ಮಾರಾಟದಾರರು ಕೂಪನ್‌ ಮೂಲಕ ಮಾರಾಟ ಮಾಡುವುದು ಕಂಡು ಬಂದಲ್ಲಿ ಕ್ರಮ ವಹಿಸಬೇಕು. ಅಬಕಾರಿ ಅಕ್ರಮಗಳ ಬಗ್ಗೆ ಸೂಕ್ಷ್ಮ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಚುರುಕಾಗಿ ಕಾರ್ಯನಿರ್ವಹಿಸಿ: ಎಲ್ಲ ವಿಧಾನಸಭಾ ಕ್ಷೇತ್ರದ ಚುನಾವಣಾ ಕಾರಿಗಳು ಚುರುಕಾಗಿ ಕಾರ್ಯ ನಿರ್ವಹಿಸಬೇಕು. ಅವರ ವ್ಯಾಪ್ತಿಯಲ್ಲಿ ನಿರ್ವಹಿಸುವ ಎಸ್‌ಎಸ್‌ಟಿ, ವಿಎಎಸ್‌ಟಿ, ವಿವಿಟಿ, ಚೆಕ್‌ಪೋಸ್ಟ್‌ ಸೇರಿದಂತೆ ಚುನಾವಣೆಗೆ ನಿಯೋಜನೆಯಾಗಿರುವ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು.ಈ ಬಗ್ಗೆ ಸೂಚನೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

Advertisement

ವಿವಿಧ ಅಧಿಕಾರಿಗಳ ಬಗ್ಗೆ ಮಾಹಿತಿ: ಜಿಲ್ಲಾ ಚುನಾವಣಾ ಧಿಕಾರಿ ಡಾ.ಎಚ್‌.ಎನ್‌.ಗೋಪಾಲಕೃಷ್ಣ ಮಾತನಾಡಿ, ಜಿಲ್ಲೆಯಲ್ಲಿ ಚುನಾವಣಾ ಹಿನ್ನೆಲೆಯಲ್ಲಿ ನಿಯೋಜಿಸಲಾಗಿರುವ ಸಂಚಾರಿ ಜಾಗೃತ ದಳ, ಸೆಕ್ಟರ್‌ ಆಫೀಸರ್‌, ಐಟಿ ತಂಡ, ಚೆಕ್‌ಪೋಸ್ಟ್‌ಗಳ ವಿವರ, ಮಾದರಿ ನೀತಿ ಸಂಹಿತೆ ಜಾರಿಗೂ ಮುನ್ನ ಹಾಗೂ ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ವಿವಿಧ ಅಕ್ರಮಗಳಲ್ಲಿ ವಶಪಡಿಸಿಕೊಂಡಿರುವ ನಗದು, ಮದ್ಯ ಹಾಗೂ ಇನ್ನಿತರ ವಸ್ತುಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಯತೀಶ್‌, ಜಿಪಂ ಸಿಇಒ ಶೇಖ್‌ ತನ್ವೀರ್‌ ಆಸೀಫ್‌, ಅಪರ ಜಿಲ್ಲಾ ಧಿಕಾರಿ ಡಾ.ಎಚ್‌.ಎಲ್‌.ನಾಗರಾಜು, ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ದೀಪಕ್‌, ಅಬಕಾರಿ ಅಧಿಕಾರಿ ಮಹಾದೇವಿ ಬಾಯಿ, ಮುಡಾ ಆಯುಕ್ತೆ ಐಶ್ವರ್ಯ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next