Advertisement

“ಪರಿಶೀಲಿಸಿ ಒತ್ತುವರಿ ತೆರವಿಗೆ ಕ್ರಮ’

08:31 PM Jul 03, 2019 | Team Udayavani |

ಬಂಟ್ವಾಳ: ಡಿ.ಸಿ. ಮನ್ನಾ ಜಮೀನು ಪರಾಭಾರೆ ವಿಚಾರದಲ್ಲಿ ಆಗಿರುವ ಲೋಪದ ಬಗ್ಗೆ ನಿರ್ದಿಷ್ಟವಾಗಿ ಸ.ನಂ. ಸಹಿತ ಗಮನಕ್ಕೆ ತನ್ನಿ, ಒತ್ತುವರಿ ಪರಿಶೀಲಿಸಿ ತೆರವಿಗೆ ಕ್ರಮ ಕೈಗೊಳ್ಳ ಲಾಗುವುದು. ಈಗ ಜಮೀನು ಅಪೇಕ್ಷಿಸಿ 710 ಅರ್ಜಿಗಳು ಸಲ್ಲಿಕೆಯಾಗಿವೆ. ಮುಂದಿನ ಹಂತದಲ್ಲಿ ವಿಲೇವಾರಿ ಮಾಡಲಾಗುತ್ತದೆ ಎಂದು ತಹಶೀಲ್ದಾರ್‌ ರಶ್ಮಿ ಎಸ್‌.ಆರ್‌. ಹೇಳಿದರು.

Advertisement

ಜು. 3ರಂದು ಬಂಟ್ವಾಳ ತಾ.ಪಂ.ಸಭಾಂಗಣದಲ್ಲಿ ನಡೆದ ಪ. ಜಾತಿ, ಪಂಗಡ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅರಣ್ಯ ಇಲಾಖೆಯೇ ಜಮೀನು ಒತ್ತುವರಿ ಮಾಡಿದೆ. ನೆಡುತೋಪು ಮಾಡಿದೆ. ಇದರಿಂದ ಪ. ಜಾತಿ, ಪಂಗಡಕ್ಕೆ ಅನ್ಯಾಯವಾಗಿದೆ ಎಂದು ಪ್ರಮುಖರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಂಟ್ವಾಳ ವಲಯ ಅಧಿಕಾರಿ ಸುರೇಶ್‌, ಸರಕಾರದ ಮಾರ್ಗದರ್ಶಿ ಯಂತೆ ನಾವು ಖಾಲಿ ಇರುವ ಅರಣ್ಯ ಭೂಮಿಯಲ್ಲಿ ಗಿಡಗಳ ನಾಟಿ ಮಾಡಿದ್ದೇವೆ. ಡಿ.ಸಿ. ಮನ್ನಾ ಜಮೀನು ಅತಿಕ್ರಮಣ ನಡೆಸಿಲ್ಲ. ಕೆಲವು ವರ್ಷ ಗಳ ಹಿಂದೆ ನಾಟಿ ಮಾಡಿದ ಗಿಡಗಳು ಕಟಾವಿಗೆ ಬಂದಿದ್ದು, ಅದನ್ನು ಕಡಿಯಲು ವ್ಯವಸ್ಥೆ ಮಾಡಲಾಗಿದೆ. ಅದಕ್ಕೆ ಪ್ರಸ್ತುತ ಆಕ್ಷೇಪ ಬಂದಿರುವುದು ಎಂದರು.

ಖಾಲಿ ಜಮೀನಿನಲ್ಲಿ ಗಿಡಗಳನ್ನು ನೆಟ್ಟು ಪ.ಜಾತಿ, ಪಂಗಡಕ್ಕೆ ದೊರಕಬೇಕಾದ ಜಮೀನು ಹಸ್ತಾಂತರ ಬಾಕಿಯಾಗಿದೆ. ಈಗಾಗಲೇ ತಾ|ನಲ್ಲಿ 113 ಎಕ್ರೆ ಜಮೀನು ಅರಣ್ಯ ಇಲಾಖೆ ಗಿಡನೆಟ್ಟು ವಶಕ್ಕೆ ಪಡೆದಿದೆ. ಅದನ್ನು ತೆರವು ಮಾಡಬೇಕು ಎಂದು ಜನಾರ್ದನ ಚಂಡ್ತಿಮಾರು ಆಗ್ರಹಿಸಿದರು.

ಸದ್ರಿ ಪ್ರಕರಣದ ಬಗ್ಗೆ ಖುದ್ದು ಅರಣ್ಯ, ಕಂದಾಯ, ಪ. ಜಾತಿ, ಪಂಗಡದ ಪ್ರಮುಖರ ಉಪಸ್ಥಿತಿಯಲ್ಲಿ ಮಾತುಕತೆ ನಡೆಸಿ ಪರಿಹಾರ ಕಾಣುವ ಎಂದು ತಹಶೀಲ್ದಾರ್‌ ನಿರ್ಣಯ ನೀಡಿದರು. ಡಿ.ಸಿ. ಮನ್ನಾ ಜಮೀನಿನಲ್ಲಿ ಪ್ರಸ್ತುತ 48 ಎಕ್ರೆ ಉಳಿಕೆ ಆಗಿದ್ದು, ಅದರಲ್ಲಿ ಪರಂಬೋಕು, ತೋಡು, ಹಳ್ಳ, ಅರಣ್ಯ ಇಲಾಖೆಯ ಕಟ್ಟಡ, ಇತರ ಸರಕಾರಿ ಕಟ್ಟಡಗಳು ಎದ್ದು ನಿಂತಿವೆ. ಇದರ ಬಗ್ಗೆಯೂ ಪರಿಶೀಲನೆ ನಡೆಯಲಿ ಎಂದು ರುಕ್ಮಯ ಬಂಗೇರ ಆಗ್ರಹಿಸಿದರು.

Advertisement

ಪ್ರಸ್ತುತ ಉಳಿಕೆ ಭೂಮಿಯನ್ನು ಸ್ಥಳೀಯ ಗ್ರಾ.ಪಂ. ವ್ಯಾಪ್ತಿಯಲ್ಲಿ ಇರುವಂತಹ ವಸತಿರಹಿತ ಮಂದಿಗೆ ನೀಡುವ ಕ್ರಮ ಆಗಬೇಕು. ಈಬಗ್ಗೆ ಹಲವು ಸಂದರ್ಭಗಳಲ್ಲಿ ಮಾಡಿದ ಮನವಿಗೆ ಅಧಿಕಾರಿ ವರ್ಗದಿಂದ ಸರಿಯಾದ ಸ್ಪಂದನವಿಲ್ಲ ಎಂದು ಜನಾರ್ದನ ಬೋಳಂತೂರು ಅಭಿಪ್ರಾಯ ನೀಡಿದರು.

ಫಜೀರು ಗ್ರಾ.ಪಂ. ಪ. ಜಾತಿ, ಪಂಗಡ ಮೀಸಲು ನಿಧಿಯಿಂದ ಮಾಡಿದ ರಸ್ತೆ ಯನ್ನು ಖಾಸಗಿ ವ್ಯಕ್ತಿ ಅತಿಕ್ರಮಿಸಿದ್ದಾರೆ. ಅನುದಾನ ಬಿಡುಗಡೆ ಮಾಡುವ ಸಂದರ್ಭ ಈ ಬಗ್ಗೆ ಸದ್ರಿ ಗ್ರಾ.ಪಂ. ಪಿಡಿಒ ಅವರಿಗೆ ಅರಿವಿಲ್ಲವೆ ಎಂದು ಸ್ಥಳೀಯರು ಪ್ರಶ್ನಿಸಿದರು. ಈ ಬಗ್ಗೆ ಪರಿಶೀಲಿಸುವುದಾಗಿ ತಾ.ಪಂ. ಕಾರ್ಯನಿರ್ವ ಹಣಾಧಿಕಾರಿ ರಾಜಣ್ಣ ತಿಳಿಸಿದರು.

ಮರಳು ಸಮಸ್ಯೆ
ಜಿಲ್ಲೆಯ ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಮರಳು ದಿಬ್ಬವನ್ನು ಗುರುತಿಸಲಾಗಿದೆ. ಆದರೆ ನೇತ್ರಾವತಿ ನದಿ ಹಾದು ಹೋಗುವ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಅದನ್ನು ಗುರುತಿಸುವಲ್ಲಿ ವ್ಯವಸ್ಥೆ ಸೋತಿದೆ. ಇಲ್ಲಿ ಮರಳು ಅಕ್ರಮ ಸಾಗಾಟ ಆಗುತ್ತಿದ್ದರೂ ಗಣಿ ಇಲಾಖೆ, ಜಿಲ್ಲಾಡಳಿತ ಗಮನ ಹರಿಸುತ್ತಿಲ್ಲ. ನಿರ್ದಿಷ್ಟವಾಗಿ ಮರಳು ದಿಬ್ಬ ರಚಿಸಿ ಸಾರ್ವಜನಿಕವಾಗಿ ಮರಳು ವಿತರಣೆ ಮಾಡುವ ಬದಲು ಸಮಸ್ಯೆಯನ್ನು ಇನ್ನಷ್ಟು ಜಟಿಲ ಮಾಡಲಾಗುತ್ತಿದೆ ಎಂದು ಹೊನ್ನಪ್ಪ ಕುಂದರ್‌, ನಾರಾಯಣ ಪುಂಚಮೆ ಆಗ್ರಹಿಸಿದರು.

ಸಭೆಯಲ್ಲಿ ಪ್ರಮುಖರಾದ ಗಂಗಾಧರ ಪರಾರಿ, ಕೇಶವ ಬಂಗೇರ, ಸತೀಶ ಅರಳ, ಸೇಸಪ್ಪ ಬೆದ್ರಕಾಡು, ವಿಟ್ಟಲ ನಾಯ್ಕ ಬಾಳ್ತಿಲ, ಜಯರಾಮ ನಾಯ್ಕ ಕೊಳ್ನಾಡು, ಸದಾಶಿವ ಪುದು, ಉಮಾನಾಥ ತುಂಬೆ, ಶೇಖರ ಕುಕ್ಕಿಪ್ಪಾಡಿ, ನೋಣಯ ಸರಪಾಡಿ, ಸತೀಶ ಕಕ್ಕೆಪದವು ಸಹಿತ ಮತ್ತಿತರರು ಮಾತನಾಡಿದರು.
ಸಮಾಜ ಕಲ್ಯಾಣ ಅಧಿಕಾರಿ ಮೋಹನ್‌ ಕುಮಾರ್‌ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

 ಮಾಹಿತಿ ನೀಡಿ
ನಿರ್ದಿಷ್ಟ ದೂರುಗಳ ಬಗ್ಗೆ ಪರಿಶೀಲನೆ ನಡೆಸಿ ಕಾನೂನು ಕ್ರಮ ಮಾಡಲಾಗುವುದು. ಆಕ್ಷೇಪಗಳ ಬಗ್ಗೆ ಲಿಖೀತ ಮಾಹಿತಿ ನೀಡಿ. ಸಭೆಯಲ್ಲಿ ನಡೆದ ಕಲಾಪದಲ್ಲಿ ಮಾಡಲಾದ ಸೂಚನೆಗಳನ್ನು ಪರಿಶೀಲನೆ ಮಾಡುತ್ತೇನೆ.
 - ರಶ್ಮಿ ಎಸ್‌.ಆರ್‌. ತಹಶೀಲ್ದಾರ್‌

 ಒತ್ತುವರಿ ನಡೆಸಿಲ್ಲ
ಅರಣ್ಯ ಇಲಾಖೆ ಡಿ.ಸಿ. ಮನ್ನಾ ಜಮೀನು ಒತ್ತುವರಿ ನಡೆಸಿಲ್ಲ. ಸರಕಾರದ ಮಾರ್ಗದರ್ಶಿ ಸೂತ್ರ ದಂತೆ ಕೆಲವು ವರ್ಷಗಳ ಹಿಂದೆ ನಾಟಿ ಮಾಡಿದ ಗಿಡಗಳು ಕಟಾವಿಗೆ ಬಂದಿವೆ. ಅದನ್ನು ಕಡಿಯಲು ಇಲಾಖೆ ಅನುಮತಿ ನೀಡುವುದು.
 - ಸುರೇಶ್‌, ವಲಯ ಅರಣ್ಯಾಧಿಕಾರಿ, ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next