Advertisement

ತಾಲೂಕಿನ 6 ಕಡೆಗಳಲ್ಲಿ ಚೆಕ್‌ ಡ್ಯಾಮ್‌ ನಿರ್ಮಾಣ

01:09 PM Jan 04, 2021 | Team Udayavani |

ಬೆಳ್ತಂಗಡಿ, ಜ. 3: ಬೇಸಗೆಯಲ್ಲಿ ಜಲಕ್ಷಾಮ ತಲೆದೋರುವುದನ್ನ ತಪ್ಪಿಸುವ ಸಲುವಾಗಿ ಹಲವು ಯೋಜನೆಗಳೊಂದಿಗೆ ಮುನ್ನಡೆಯುತ್ತಿರುವ ಬೆಳ್ತಂಗಡಿ ರೋಟರಿ ಕ್ಲಬ್‌ ಈ ಬಾರಿ ಸ್ಥಳೀಯ ವಿದ್ಯಾರ್ಥಿ ಗಳೊಂದಿಗೆ ಚೆಕ್‌ ಡ್ಯಾಮ್‌ ನಿರ್ಮಿಸುವ ಮೂಲಕ ಅಂತರ್ಜಲ ವೃದ್ಧಿಗೆ ತಯಾರಿ ನಡೆಸಿದೆ.

Advertisement

ಈಗಾಗಲೇ ಈ ಯೋಜನೆಗೆ ಚಾಲನೆ ನೀಡಲಾಗಿದ್ದು, ಚಾರ್ಮಾಡಿ, ಕಕ್ಕಿಂಜೆ ಮೊದಲಾದ ಭಾಗಗಳಲ್ಲಿ 6 ಕಟ್ಟಗಳನ್ನು ಪೂರ್ಣಗೊಳಿಸಲಾಗಿದೆ. ಈಗಾಗಲೇ ತಾಲೂಕಿನಲ್ಲಿರುವ 40ಕ್ಕೂ ಅಧಿಕ ಕಿಂಡಿ ಅಣೆಕಟ್ಟುಗಳಿಗೆ  ಸಣ್ಣ   ನೀರಾವರಿ ಇಲಾಖೆಯಿಂದ ಹಲಗೆ ಜೋಡನೆ ಪ್ರಕ್ರಿಯೆ ಭಾಗಶಃ ಪೂರ್ಣಗೊಂಡಿದ್ದು ನೀರು ಸಂಗ್ರಹವಾಗುತ್ತಿದೆ.

ಯೋಜನೆಗೆ ಉತ್ತಮ ಪ್ರತಿಕ್ರಿಯೆ :

ಕೃಷಿ ಹಾಗೂ ದಿನಬಳಕೆ ನೀರಿಗೆ ಕೊರತೆ ಉಂಟಾಗಬಾರದು ಎಂಬ ಉದ್ದೇಶದಿಂದ ಕೃಷಿ ತೋಟಗಳ ಆಸುಪಾಸು ಹರಿಯುವ ತೋಡು, ಹಳ್ಳ, ತೊರೆಗಳಿಗೆ ಕಟ್ಟಗಳನ್ನು ಕಟ್ಟಿ ನೀರನ್ನು ಸಂಗ್ರಹಿಸಲಾಗುತ್ತಿದೆ. ಸಂಗ್ರಹ ಗೊಂಡ ನೀರು ಕೃಷಿ ಚಟು ವಟಿಕೆಗಳಿಗೆ ಉಪಯೋಗಿಸುವ ನೂತನ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸ್ಥಳೀಯರು ಹಾಗೂ ಸಂಘ ಸಂಸ್ಥೆಗಳ ಸಹಕಾರದಲ್ಲಿ ನಡೆಯುವ ಈ ಯೋಜನೆಗೆ ಕಟ್ಟಗಳನ್ನು ಕಟ್ಟಲು ಬೇಕಾಗುವ ಗೋಣಿ ಚೀಲ, ಟಾರ್ಪಾಲ್‌ ಇತ್ಯಾದಿಗಳನ್ನು ರೋಟರಿ ಕ್ಲಬ್‌ನಿಂದ ಉಚಿತವಾಗಿ ನೀಡಲಾಗುತ್ತದೆ. ಪ್ರಾಕೃತಿಕವಾಗಿ ಲಭ್ಯವಿರುವ ಕಲ್ಲು, ಮಣ್ಣು, ಸೊಪ್ಪು, ಸದೆ ಇತ್ಯಾದಿಗಳನ್ನು ಬಳಸಿ ರೋಟರಿ ಕ್ಲಬ್‌ನ ಸದಸ್ಯರು ಸ್ಥಳೀಯರೊಂದಿಗೆ ಕಟ್ಟಗಳನ್ನು ನಿರ್ಮಿಸಿ ಕೊಡುತ್ತಾರೆ.

Advertisement

ವಾಟರ್‌ ಬ್ಯಾಂಕ್‌ ಯೋಜನೆ :

ಈ ಬಾರಿ ಮಳೆಗಾಲದಿಂದಲೇ ನೀರನ್ನು ಉಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ರೋಟರಿ ಕ್ಲಬ್‌ ಬೆಳೆ ಇರುವ ಹಾಗೂ ಹಡಿಲು ಗದ್ದೆಗಳಲ್ಲಿ ಹರಿಯುವ ನೀರನ್ನು ಅಡ್ಡಗಟ್ಟಿ ನೀರುಳಿಸುವ ಅಭಿಯಾನವನ್ನು  ಆರಂಭಿಸಿದೆ. ಅಲ್ಲದೆ ಗದ್ದೆಯಲ್ಲಿ ಭತ್ತ ಬೆಳೆಯುವ ಆಯ್ದ ರೈತರಿಗೆ ಧನಸಹಾಯವನ್ನು ಒದಗಿಸಿದೆ. ಜತೆಗೆ ಕೆರೆ, ಬಾವಿಗಳಿಗೆ, ಗುಡ್ಡಗಳಲ್ಲಿ ಇಂಗು ಗುಂಡಿ ನಿರ್ಮಿಸಿ ಮಳೆಕೊಯ್ಲು ಮಾಡಿ ವಾಟರ್‌ ಬ್ಯಾಂಕ್‌ ಯೋಜನೆಯನ್ನು ಅನುಷ್ಠಾನಗೊಳಿಸಿದೆ.

ಸಹಭಾಗಿತ್ವ  : ರೋಟರಿ ಕ್ಲಬ್‌ನ ಕಾರ್ಯಕ್ರಮದಲ್ಲಿ ಇದರ ಅಂಗ ಸಂಸ್ಥೆಗಳಾದ ಆನ್ಸ್‌ ಕ್ಲಬ್‌, ರೋಟರಿ ಸಮುದಾಯ ದಳ ಮುಂಡಾಜೆ, ಚಾರ್ಮಾಡಿ-ಕಕ್ಕಿಂಜೆ, ನೆರಿಯ ವಿಭಾಗಗಳು ಸಹಭಾಗಿತ್ವವನ್ನು ಪಡೆದಿದ್ದು, ಸದಸ್ಯರು ನೀರುಳಿಸುವ ಯೋಜನೆಗಳಲ್ಲಿ ಕೈಜೋಡಿಸುತ್ತಿದ್ದಾರೆ.

ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಲ್ಲಿ ತಾಲೂಕಿನಾದ್ಯಂತ 50 ಕಟ್ಟಗಳನ್ನು ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಈ ಬಗ್ಗೆ ಜನರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಆವಶ್ಯಕತೆಯಿರುವವರಿಗೆ ಕಟ್ಟೆಗಳನ್ನು ನಮ್ಮ ಸಂಸ್ಥೆಯ ಮೂಲಕ ನಿರ್ಮಿಸಿ ಕೊಡಲಾಗುವುದು. -ಬಿ.ಕೆ.ಧನಂಜಯ ರಾವ್‌,ಅಧ್ಯಕ್ಷರು, ರೋಟರಿ ಕ್ಲಬ್‌, ಬೆಳ್ತಂಗಡಿ

Advertisement

Udayavani is now on Telegram. Click here to join our channel and stay updated with the latest news.

Next