ನೆಲಮಂಗಲ: ಕೋವಿಡ್ 19 ಸಂಕಷ್ಟದಲ್ಲಿರುವ ಜನರಿಗೆ ನೀಡುತ್ತಿರುವ ಪಡಿತರ ತೂಕದಲ್ಲಿ ಮೋಸ ಮಾಡಿದರೆ ಕಠಿಣ ಕ್ರಮಕೈಗೊಳ್ಳಲಾಗುತ್ತ ದೆ ಎಂದು ಹೇಳುವ ಆಹಾರ ಮತ್ತು ನಾಗರಿಕ ಸಚಿವ ಗೋಪಾಲಯ್ಯನವರ ಎದುರೇ, ನ್ಯಾಯಬೆಲೆ ಅಂಗಡಿ ಮಾಲಿಕ ತೂಕದಲ್ಲಿ ಮೋಸ ಮಾಡಿರುವುದು ಕಂಡು ಬಂದಿದೆ.
ತಾಲೂಕಿನ 94 ನ್ಯಾಯಬೆಲೆ ಅಂಗಡಿಗಳಲ್ಲಿ 1ನೇ ನಂಬರ್‌ನ ನ್ಯಾಯಬೆಲೆ ಅಂಗಡಿಯಾಗಿರುವ ನಗರದ ಬಸ್ ನಿಲ್ದಾಣ ಸಮೀಪದಲ್ಲೇ ಪಡಿತರ ಅಕ್ಕಿ ಹಾಗೂ ಕಡಲೆಕಾಳು ಅಳತೆ ಮಾಡುವಾಗ ತೂಕದಲ್ಲಿ ಮೋಸ ಮಾಡಿರುವುದು ಸಚಿವರ ಪರಿಶೀಲನೆ ಬಯಲಾಗಿದೆ.
ದಿಢೀರ್ ಭೇಟಿ: ಬೆಳಗ್ಗೆ 10.30ರ ಸುಮಾರಿಗೆ ನಗರದ ಬಸ್‌ನಿಲ್ದಾಣ ಸಮೀಪದ ಗೋದಾಮಿಗೆ ಹಾಗೂ ನಂ.1ನ್ಯಾಯಬೆಲೆ ಅಂಗಡಿಗೆ ದಿಢೀರ್ ಭೇಟಿ ನೀಡಿದ ಸಚಿವರು, ಗೋದಾಮು ಪರಿಶೀಲನೆ ನಡೆಸಿ ನ್ಯಾಯಬೆಲೆ ಅಂಗಡಿಯ ವಿದ್ಯುತ್ ಚಾಲಿತ ತಕ್ಕಡಿಯಲ್ಲಿ ಪಡಿತರದಾರರಿಗೆ ನೀಡಿರುವ ಅಕ್ಕಿ ಹಾಗೂ ಕಡಲೆಕಾಳು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ 3 ಆಧಾರ್ ಕಾರ್ಡ್‌ಗೆ 6 ಕೆ.ಜಿ. ಕಡಲೆಕಾಳು ನೀಡುವುದನ್ನು ಬಿಟ್ಟು 4.9 ಕೆ.ಜಿ. ನೀಡಿರುವುದು ಸ್ಥಳದಲ್ಲಿ ಕಂಡು ಬಂದಿದೆ.
ಸಚಿವರ ತರಾಟೆ: ಜನರಿಗೆ ಮೋಸ ಮಾಡಬೇಡಿ ಎಂದು ಪದೇ ಪದೆ ಹೇಳುತ್ತಿದ್ದರೂ ಈ ರೀತಿ ಮಾಡುತ್ತಿರುವುದು ಸರಿಯೇ? ಅಧಿಕಾರಿಗಳು ಏನು ಮಾಡುತ್ತಿದ್ದೀರಿ? ಇಂತಹವರಿಂದ ರಾಜ್ಯಕ್ಕೆ ಕೆಟ್ಟ ಹೆಸರು ಎಂದು ಇಲಾಖೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ತನಿಖೆಗೆ ಆದೇಶ: ತಾಲೂಕಿನ ಮೊದಲ ನ್ಯಾಯಬೆಲೆ ಅಂಗಡಿಯಲ್ಲಿ ನಡೆದಿರುವ ತೂಕದ ಮೋಸದ ತನಿಖೆ ಮಾಡಲು ಸಚಿವರು ಆದೇಶಿಸಿದ್ದಾರೆ. ಎಲ್ಲ ದಾಖಲೆ ವಶಕ್ಕೆ ಪಡೆದುಕೊಳ್ಳಲಾಗಿದೆ. ನ್ಯಾಯಬೆಲೆ ಅಂಗಡಿ ಬೈಲಪ್ಪ ಹಾಗೂ ನಾಗರಾಜು ವಿಚಾರಣೆ ಮಾಡಿ, ತಹಶೀಲ್ದಾರ್ ಹಾಗೂ ಆಹಾರ ಇಲಾಖೆ ಜಿಲ್ಲಾ ಉಪನಿರ್ದೇಶಕರ ನೇತೃತ್ವದಲ್ಲಿ ತನಿಖೆ ಮಾಡಲು ಸೂಚಿಸಲಾಗಿದೆ.
ಎಲ್ಲ ಇಲಾಖೆ ಅಧಿಕಾರಿಗಳು ಓಡಾಡುವ ನಗರದ ನಂ.1ನ್ಯಾಯಬೆಲೆ ಅಂಗಡಿಯಲ್ಲಿ ಮೋಸವಾದರೆ ತಾಲೂಕಿನ ಗಡಿಗ್ರಾಮಗಳು ಸೇರಿದಂತೆ ಗ್ರಾಮೀಣ ಭಾಗದಲ್ಲಿರುವ 85 ನ್ಯಾಯಬೆಲೆ ಅಂಗಡಿಗಳ ಪರಿಸ್ಥಿತಿಯನ್ನು ಮೇಲಾಧಿಕಾರಿಗಳು ಅರ್ಥಮಾಡಿಕೊಳ್ಳಬೇಕು ಎಂದು ಪಡಿತರದಾರರು ಮನವಿ ಮಾಡಿದ್ದಾರೆ.
ಸಚಿವರು ಭೇಟಿಗೆ ಮಾತ್ರ ಬಂದಿದ್ದರು, ತೂಕದಲ್ಲಿ ವ್ಯತ್ಯಾಸವಾಗಿರುವುದು ಕಂಡುಬಂದಿದ್ದು, ತನಿಖೆ ಮಾಡಲಾಗುತ್ತಿದೆ. ಅಲ್ಲಿ ಸ್ಟಾಕ್ ಸಮಸ್ಯೆ ಇತ್ತು ಎನ್ನುತ್ತಾರೆ. ಈ ಸಂಬಂಧ ವಿಚಾರಿಸುತ್ತೇನೆ. ತಪ್ಪು ಕಂಡುಬಂದರೆ ಎಫ್ಐಆರ್ ಹಾಕಲಾಗುವುದು.
-ಶ್ರೀನಿವಾಸ್, ತಹಶೀಲ್ದಾರ್