ಬೆಂಗಳೂರು: ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳ ನಿರ್ದೇಶಕ ಹಾಗೂ ಮುಖ್ಯಸ್ಥ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಉದ್ಯೋಗ ಕೊಡಿಸುವುದಾಗಿ ಮಹಿಳೆಗೆ ವಂಚಿಸುತ್ತಿದ್ದ ಆರೋಪಿ ಯನ್ನು ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೇವನಹಳ್ಳಿ ನಿವಾಸಿ ಪ್ರವೀಣ್ ಶೆಟ್ಟಿ(39) ಬಂಧಿತ. ಆರೋಪಿ ಸಂಜಯನಗರ ನಿವಾಸಿ ಶ್ರುತಿ ಎಂಬುವರಿಗೆ 2.50 ಲಕ್ಷ ರೂ. ಪಡೆದು ವಂಚಿಸಿದ್ದಾನೆ ಎಂದು ಪೊಲೀಸರು ಹೇಳಿದರು.
ಈವೆಂಟ್ ಮ್ಯಾನೆಜ್‌ಮೆಂಟ್ ಸಂಸ್ಥೆ ನಡೆಸುತ್ತಿದ್ದ ಶ್ರುತಿಗೆ ಪರಿಯಯವಾದ ಆರೋಪಿ ಪ್ರವೀಣ್ ಶೆಟ್ಟಿ ತಾನೊಬ್ಬ ಇಂಡಿಯನ್ ಯೂಥ್ ಸ್ಫೋರ್ಟ್ಸ್ ಅಸೋಸಿಯೇಷನ್‌ನ ಉಪಾಧ್ಯಕ್ಷ, ಕೇಂದ್ರ ಸರ್ಕಾರದ ನ್ಯಾಷನಲ್ ಕ್ರೈಂ ಬ್ಯೂರೋ ಆಫ್ ಇನ್ವೆಷ್ಟಿಗೇಷನ್‌ನ ಸೌತ್ ಇನ್‌ಚಾರ್ಜ್ ಹಾಗೂ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದಲ್ಲಿ ನ್ಯಾಷನಲ್ ಡೈರೆಕ್ಟರ್ ಆಗಿದ್ದೇನೆ ಎಂದು ನಕಲಿ ಗುರುತಿನ ಚೀಟಿಗಳನ್ನು ತೋರಿಸಿ ನಂಬಿಸಿದ್ದಾನೆ. ನಂತರ ಪರಿಶಿಷ್ಟ ಪಂಗಡಕ್ಕೆ ಸಿಗುವ ಸೌಲಭ್ಯಗಳನ್ನು ಕೊಡಿಸುತ್ತೇನೆ. ಒಳ್ಳೆಯ ಕಡೆ ಕೆಲಸಕೊಡಿಸುತ್ತೇನೆ ಎಂದು ನಂಬಿಸಿದ್ದಾನೆ. ಬಳಿಕ ವಿವಿಧ ಕಾರಣಗಳನ್ನು ನೀಡಿ 2.5 ಲಕ್ಷ ರೂ. ಪಡೆದುಕೊಂಡಿದ್ದ. ಆದರೆ, ಕೆಲಸ ಕೊಡಿಸಿರಲಿಲ್ಲ. ಹಣ ವಾಪಸ್ ನೀಡಿರಲಿಲ್ಲ. ಹಣ ಕೇಳಿದರೆ ಪ್ರಾಣ ಬೆದರಿಕೆ ಹಾಕಿದ್ದ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.