Advertisement

ವೈದ್ಯ ಸೀಟು ಕೊಡಿಸುವುದಾಗಿ ವಂಚನೆ

12:29 PM Sep 11, 2018 | Team Udayavani |

ಬೆಂಗಳೂರು: ನಗರದ ಪ್ರತಿಷ್ಠಿತ ಮೆಡಿಕಲ್‌ ಕಾಲೇಜುಗಳಲ್ಲಿ ಸೀಟು ಕೊಡಿಸುವುದಾಗಿ ಅಭ್ಯರ್ಥಿಗಳಿಂದ ಹತ್ತಾರು ಲಕ್ಷ ರೂ. ಪಡೆದು ವಂಚಿಸುತ್ತಿದ್ದ ಒಡಿಶಾ ಮೂಲದ ನಾಲ್ವರು ಆರೋಪಿಗಳನ್ನು ಕೇಂದ್ರ ವಲಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಒಡಿಶಾದ ಡಮನಸ್ಕ್ವೇರ್‌ನ ಸುಭಾಷಿಷ್‌ ಪತಿ (31), ಸಮರ್‌ಜಿತ್‌ ಪಂಡ್‌ (41), ಇಂದ್ರೇಶ್‌ ದುಬೆ ಹಾಗೂ ಗೌರವ್‌ ಎಂಬುವವರನ್ನು ಬಂಧಿಸಲಾಗಿದೆ. ಸೋಮ್ಯಕಾಂತ್‌ ಮೊಹಾಂತಿ, ಅನಿಲ್‌ ಮುಖರ್ಜಿ, ಇಲಿಯಾಜ್‌ ಮತ್ತು ಮನೋಜ್‌ ದಾಸ್‌ ಎಂಬುವರು ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ ಎಂದು ಕೇಂದ್ರ ವಲಯ ಡಿಸಿಪಿ ದೇವರಾಜ್‌ ತಿಳಿಸಿದರು.

ಆರೋಪಿಗಳಿಂದ 10 ಲಕ್ಷ ರೂ.ನಗದು, 1,55,000 ರೂ. ಡಿ.ಡಿ ಹಾಗೂ 8 ಲಕ್ಷ ರೂ. ರೇವಣಿ ಹಣ, 2 ಲ್ಯಾಪ್‌ಟಾಪ್‌ ಮತ್ತು ಮೊಬೈಲ್‌ಗ‌ಳನ್ನು ವಶಕ್ಕೆ ಪಡೆಯಲಾಗಿದೆ. ಈ ಮೂಲಕ ಕಬ್ಬನ್‌ ಪಾರ್ಕ್‌ ಹಾಗೂ ಹೈಗ್ರೌಂಡ್ಸ್‌ ಠಾಣೆಗಳಲ್ಲಿ ದಾಖಲಾಗಿದ್ದ 9 ವಂಚನೆ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದರು.

ಒಡಿಶಾದಲ್ಲಿ ಎಜುಕೇಷನ್‌ ಟ್ರಸ್ಟ್‌ ನಡೆಸುತ್ತಿದ್ದ ಆರೋಪಿಗಳು ಪಶ್ಚಿಮ ಬಂಗಾಳ, ಒಡಿಶಾ, ಉತ್ತರ ಪ್ರದೇಶ, ಹರಿಯಾಣ ಸೇರಿ ಕೆಲ ರಾಜ್ಯಗಳ ವೈದ್ಯಕೀಯ ಸೀಟು ಆಕಾಂಕ್ಷಿಗಳಿಗೆ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಂಚನೆ ಹೇಗೆ?: ನಾಲ್ವರು ಆರೋಪಿಗಳು ಒಡಿಶಾದ ಕಟಕ್‌ನಲ್ಲಿ “ಸನರೈಸ್‌’ ಎಂಬ ಎಜುಕೇಷನ್‌ ಟ್ರಸ್ಟ್‌ ನಡೆಸುತ್ತಿದ್ದು, ಮೆಡಿಕಲ್‌ ಸೀಟಿ ಕೊಡಿಸುವುದಾಗಿ ಹೇಳಿಕೊಂಡು ಒಂದು ಲಕ್ಷ ರೂ. ನೀಡಿ ಏಜೆನ್ಸಿಯೊಂದರಿಂದ ಪ್ರತಿವರ್ಷ ದೇಶದಲ್ಲಿ ನೀಟ್‌ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಪಟ್ಟಿಯ ಡಾಟಾಬೇಸ್‌ ಅನ್ನು ಖರೀದಿ ಮಾಡಿದ್ದರು. ಬಳಿಕ ಈ ಪಟ್ಟಿಯಲ್ಲಿರುವ ಕೆಲ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು, ಅವರ ಮೊಬೈಲ್‌ ನಂಬರ್‌ ಪಡೆಯುತ್ತಿದ್ದರು.

Advertisement

ನಂತರ ಕರೆ ಮಾಡಿ, ನಮಗೆ ಬೆಂಗಳೂರಿನ ಎಂ.ಎಸ್‌.ರಾಮಯ್ಯ ಕಾಲೇಜು, ಎಂವಿಜೆ ಮೆಡಿಕಲ್‌ ಕಾಲೇಜು ಆ್ಯಂಡ್‌ ರಿಸರ್ಚ್‌, ಕಿಮ್ಸ್‌,  ವೈದೇಹಿ ಇನ್ಸಿಟಿಟ್ಯೂಟ್‌ ಆಫ್ ಮೆಡಿಕಲ್‌ ಸೈನ್ಸ್‌ ಆ್ಯಂಡ್‌ ರಿಸರ್ಚ್‌ ಸೆಂಟರ್‌, ಬಿ.ಆರ್‌.ಅಂಬೇಡ್ಕರ್‌ ಮೆಡಿಕಲ್‌ ಕಾಲೇಜು, ಬಿಜಿಎಸ್‌ ಗ್ಲೋಬಲ್‌ ಇನ್ಸಿಟಿಟ್ಯೂಟ್‌ ಆಫ್ ಮೆಡಿಕಲ್‌ ಸೈನ್ಸ್‌,

ಬಿಎಂಎಸ್‌ ಮೆಡಿಕಲ್‌ ಕಾಲೇಜುಗಳಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ ಪ್ರತಿ ಅಭ್ಯರ್ಥಿಯಿಂದ 10 ಲಕ್ಷ ರೂ.ನಿಂದ 1 ಕೋಟಿ ರೂ.ವರೆಗೆ ಹಣ ವಸೂಲಿ ಮಾಡುತ್ತಿದ್ದರು. ಬಳಿಕ ನಿರ್ದಿಷ್ಟ ಅಭ್ಯರ್ಥಿಗೆ ಕೆಲ ದಿನಗಳ ಬಳಿಕ ಸೀಟು ಸಿಕ್ಕಿರುವುದಾಗಿ ಸಂದೇಶಗಳನ್ನು ಕಳುಹಿಸಿ ಹಾಗೂ ವಿವಿಧ ಮೆಡಿಕಲ್‌ ಕಾಲೇಜುಗಳ ನಕಲಿ ಮೊಹರುಗಳನ್ನು ಮುದ್ರಿಸಿ ನಕಲಿ ಪ್ರಮಾಣ ಪತ್ರಗಳನ್ನು ಕೊಟ್ಟು ವಂಚಿಸುತ್ತಿದ್ದರು.

ಹತ್ತಾರು ಇ-ಮೇಲ್‌, ಮೊಬೈಲ್‌ ನಂಬರ್‌ ಬಳಕೆ: ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳಿಗೆ ಸಂದೇಶ್‌ ಕಳುಹಿಸುತ್ತಿದ್ದ ಆರೋಪಿಗಳು ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಸಿಕ್ಕಿದ್ದು, ಇಲ್ಲಿನ ಪಂಚತಾರ ಹೋಟೆಲ್‌ಗೆ ಬಂದು ಹಣ ಕೊಟ್ಟು ಪ್ರಮಾಣ ಪತ್ರ ಕೊಂಡೊಯ್ಯುವಂತೆ ಸೂಚಿಸುತ್ತಿದ್ದರು. ಅದರಂತೆ ಬರುತ್ತಿದ್ದ ಅಭ್ಯರ್ಥಿಗಳು ಆರೋಪಿಗಳು ಹೇಳಿದಷ್ಟು ಹಣ ಕೊಟ್ಟು ನಕಲಿ ಪ್ರಮಾಣ ಪತ್ರ ಪಡೆದು ಹೋಗುತಿದ್ದರು.

ಇದನ್ನು ನಂಬಿ ಆಯಾ ವೈದ್ಯಕೀಯ ಕಾಲೇಜುಗಳಲ್ಲಿ ದಾಖಲಾತಿಗೆ ಹೋದಾಗ ವಂಚನೆ ಬೆಳಕಿಗೆ ಬಂದಿದೆ. ಆರೋಪಿಗಳು ಸಂಪರ್ಕಿಸುತ್ತಿದ್ದ ಪ್ರತಿ ಅಭ್ಯರ್ಥಿಗೆ ಪ್ರತ್ಯೇಕ ಇ-ಮೇಲ್‌ ವಿಳಾಸ ಹಾಗೂ ಮೊಬೈಲ್‌ ನಂಬರ್‌ ಬಳಕೆ ಮಾಡುತ್ತಿದ್ದರು. ಒಮ್ಮೆ ಒಬ್ಬ ಅಭ್ಯರ್ಥಿಗೆ ಬಳಸಿದ್ದ ಮೊಬೈಲ್‌ ಹಾಗೂ ಇ-ಮೇಲ್‌ ವಿಳಾಸವನ್ನು ಮತ್ತೂಬ್ಬ ಅಭ್ಯರ್ಥಿಗೆ ಕೊಡುತ್ತಿರಲಿಲ್ಲ. ಬಳಿಕ ಈ ನಂಬರ್‌ಗಳನ್ನು ಸ್ವೀಚ್‌ಆಫ್ ಮಾಡಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next