ಮಂಗಳೂರು: ಗುತ್ತಿಗೆದಾರೊಬ್ಬರಿಗೆ ಸಿಬಿಐ ಅಧಿಕಾರಿ ಎಂದು ಹೇಳಿ ಕರೆ ಮಾಡಿ ನಿಮ್ಮ ಮೇಲೆ ಸಿಬಿಐ ಕೇಸು ಆಗಿದೆ ಎಂದು ಹೇಳಿ ಬರೋಬ್ಬರಿ 15 ಲಕ್ಷಕ್ಕೂ ಹೆಚ್ಚು ಮೊತ್ತ ಲಪಟಾಯಿಸಿರುವ ಕುರಿತಂತೆ ಸೈ ಬರ್‌ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಟ್ಟಾರ ನಿವಾಸಿಯಾಗಿರು ವ್ಯಕ್ತಿಗೆ ಅವರಿಗೆ ಎ. 25ರಂದು ಅಪರಿಚಿತ ನಂಬರ್‌ನಿಂದ ಕರೆ ಬಂದಿದೆ. ಕರೆ ಮಾಡಿದಾತ ನಿಮ್ಮ ಮೊಬೈಲ್ ಸಂಖ್ಯೆಯಿಂದ ಬೆದರಿಕೆ ಕರೆಗಳು ಬರುತ್ತಿದ್ದು, ಹಣದ ವ್ಯವಹಾರ ಆಗುತ್ತಿರುವ ಬಗ್ಗೆ ಹೇಳಿದ್ದು, ಮೊಬೈಲ್ ಸಂಖ್ಯೆಯನ್ನು ಅಮಾನತು ಮಾಡಬೇಕಾಗುತ್ತದೆ. ನಿಮ್ಮ ಮೇಲೆ ಮುಂಬೈ ಸಿಬಿಐ ಕಚೇರಿಯಲ್ಲಿ ಕೇಸು ಆಗಿದೆ ಎಂದು ಹೇಳಿದ್ದ. ಅನಂತರ, ಕರೆಯನ್ನು ಸಿಬಿಐ ಅಧಿಕಾರಿಗೆ ವರ್ಗಾಯಿಸುತ್ತೇನೆ ಎಂದು ಹೇಳಿದ್ದು, ಇನ್ನೊಬ್ಬ ವ್ಯಕ್ತಿ ಮಾತನಾಡಿದ್ದ.
ಆತ ನಿಮ್ಮ ಬ್ಯಾಂಕ್ ಖಾತೆಯಿಂದ ಹಣದ ಅವ್ಯವಹಾರ ಆಗಿದ್ದು ಖಾತೆಯನ್ನು ಮುಟ್ಟುಗೋಲು ಹಾಕಲಾಗುವುದು ಎಂದಿದ್ದ. ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಬೇರೆ ಖಾತೆಗೆ ವರ್ಗಾಯಿಸಬೇಕು. ಅದಕ್ಕಾಗಿ ಸ್ಕೈ ಪ್ ಆ್ಯಪ್ ಡೌನ್‌ಲೋಡ್ ಮಾಡುವಂತೆ ಸೂಚಿಸಿದ್ದ. ಬಳಿಕ ಸಿಬಿಐ ತನಿಖಾಧಿಕಾರಿ ಎಂದು ಹೇಳಿಕೊಂಡು ನೋಟಿಸ್ ಕಳುಹಿಸಿದ್ದು, ನಮ್ಮೊಂದಿಗೆ ಸಹಕರಿಸಿದರೆ ನಿಮ್ಮನ್ನು ಪ್ರಕರಣದಿಂದ ಮುಕ್ತಗೊಳಿಸುತ್ತೇವೆ ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದ. ಪ್ರಕರಣದಿಂದ ಮುಕ್ತಗೊಳ್ಳುವ ಉದ್ದೇಶದಿಂದ ಗುತ್ತಿಗೆದಾರರು ಅದಕ್ಕೆ ಮೊದಲಿಗೆ 2.99 ಲಕ್ಷ ರೂ. ಹಾಕಿದ್ದರು. ಬಳಿಕ ವಿವಿಧ ಖಾತೆ ಸಂಖ್ಯೆಗಳನ್ನು ಕಳುಹಿಸಿದ್ದ ಖದೀಮರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.
ಅದರಂತೆ ಒಟ್ಟು 15,01,049 ರೂಪಾಯಿ ಹಣವನ್ನು ವರ್ಗಾಯಿಸಿ ದ್ದಾರೆ. ಕೊನೆಗೆ ಅನುಮಾನ ಬಂದ ಅವರು ಮೇ 3 ರಂದು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.