Advertisement
ತಾಲೂಕಿನ ಮಲ್ಲನಕುಪ್ಪೆ ಗ್ರಾಮದ ನಿವಾಸಿ ಹಾಗೂ ಕೆಸ್ತೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗುಮಾಸ್ತನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಟಿ.ಎಲ್. ನಂಜುಂಡಸ್ವಾಮಿ ಅವರ ಪತ್ನಿ ಟಿ.ಎಂ. ಗಿರಿಜಾ ವಂಚನೆಗೊಳಗಾದ ದಂಪತಿ.
Related Articles
Advertisement
ನಂಜುಂಡಸ್ವಾಮಿ ಅವರ ಅಮಾಯಕತೆ ಬಳಸಿಕೊಂಡ ರಾಮಚಂದ್ರೇಗೌಡ ಆಲಿಯಾಸ್ ಶ್ರೀರಾಮಚಂದ್ರ, ಜ.8ರಂದು ನಂಜುಂಡಸ್ವಾಮಿ ಅವರನ್ನು ಮತ್ತೇ ಭೇಟಿ ಮಾಡಿ ಅವರ ಪತ್ನಿ ಟಿ.ಎಂ.ಗಿರಿಜಾ ಅವರ ಹೆಸರಿನಲ್ಲಿ ನಿವೇಶನ ಕೋರಿ ಅರ್ಜಿಯನ್ನು ಬರೆಸಿಕೊಂಡಿದ್ದಾನೆ.
ಬಳಿಕ ಜ.13ರಂದು ನಂಜುಂಡಸ್ವಾಮಿ ಅವರಿಗೆ ಪೋನಾಯಿಸಿ ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿಯಲ್ಲಿ 26*40 ಅಡಿ ಅಳತೆಯ ನಿವೇಶನ ಮಂಜೂರಾಗಿದೆ ಕೂಡಲೇ ಗಿರಿಜಾ ಅವರ ಆಧಾರ್ ಚೀಟಿ, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಸೇರಿದಂತೆ ಇನ್ನಿತರ ದಾಖಲಾತಿಗಳೊಂದಿಗೆ ಬೆಂಗಳೂರಿಗೆ ಬರಲು ತಿಳಿಸಿದ್ದಾನೆ.
ಈತನ ಮಾತು ನಂಬಿದ ನಂಜುಂಡಸ್ವಾಮಿ ದಂಪತಿ ಬೆಂಗಳೂರಿಗೆ ಹೋಗಿ ಆತನನ್ನು ಭೇಟಿಯಾಗಿ ಆಗ ಆತನು ಅಲ್ಲಿಂದ ಇವರನ್ನು ಉಲ್ಲಾಳ ಉಪನಗರದ ವಿಶ್ವೇಶ್ವರಯ್ಯ ಬಡಾವಣೆಗೆ ಕರೆದೊಯ್ದಿದ್ದಾನೆ. ಅಲ್ಲಿ ಬಿಡಿಎ ನಿವೇಶನ ಸಂಖ್ಯೆ 140/1 ತೋರಿಸಿ ಇದೇ ನಿಮ್ಮ ನಿವೇಶನ ಎಂದು ತಿಳಿಸಿದ್ದಾನೆ. ಬಳಿಕ ತಮ್ಮ ಮನೆಗೆ ಗಿರಿಜಾ ಹಾಗೂ ನಂಜುಂಡಸ್ವಾಮಿ ಅವರನ್ನು ಕರೆದೊಯ್ದ ಈತ, ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ ಅವರ ಶಿಫಾರಸಿನ ನಕಲಿ ಪತ್ರವನ್ನು ತೋರಿಸಿ ನಂಬಿಕೆ ಹುಟ್ಟಿಸಿದ್ದಾನೆ.
ಜ.16ರಂದು ಕೆಸ್ತೂರಿಗೆ ಬಂದ ರಾಮಚಂದ್ರೇಗೌಡ, ನಾನು ಈಗಾಗಲೇ ನನ್ನ ಖಾತೆಯಿಂದ 4,22,830 ರೂ. ಹಣವನ್ನು ಬಿಡಿಎಗೆ ಪಾವತಿ ಮಾಡಿದ್ದೇನೆ ಎಂದು ತಿಳಿಸಿ ಬಿಡಿಎಗೆ ಪಾವತಿ ಮಾಡಿರುವ ಹಣದ ಚಲನ್ ಹಾಗೂ ಅವರು ನೀಡಿರುವ ಹಣದ ರಶೀದಿಯನ್ನು ತೋರಿಸಿ ಹಣ ನೀಡುವಂತೆ ಒತ್ತಾಯಿಸಿದ್ದಾನೆ.
ಇದನ್ನು ನಂಬಿದ ನಂಜುಂಡಸ್ವಾಮಿ ಅವರು ತಮ್ಮ ಖಾತೆಯಿಂದ 2ಲಕ್ಷ ರೂ. ಗಳ ಚೆಕ್ ಅನ್ನು ಅಂದೇ ನೀಡಿದ್ದಾರೆ. ಬಳಿಕ ಜ.21ರಲ್ಲಿ 3ಲಕ್ಷ ರೂ. ಹಣವನ್ನು ನಗದಾಗಿ ನಂಜುಂಡಸ್ವಾಮಿ ರಾಮಚಂದ್ರೇಗೌಡನಿಗೆ ನೀಡಿದ್ದಾರೆ. ಇದಾದ ಬಳಿಕ ಫೆ.14ರಂದು ನಿಮ್ಮ ನಿವೇಶನದ ನೋಂದಣಿ ಪ್ರಕ್ರಿಯೆ ಮಾಡಬೇಕಾಗಿದ್ದು, ಇದಕ್ಕೆ ನೋಂದಣಿ ಶುಲ್ಕವಾಗಿ 84,811 ರೂ. ಪಾವತಿ ಮಾಡಬೇಕೆಂದು ಒತ್ತಾಯಿಸಿದ್ದಾನೆ.
ಬಳಿಕ ಈಗಾಗಲೇ ಆ ಹಣವನ್ನು ತಾನೇ ಪಾವತಿಸಿರುವುದಾಗಿ ತಿಳಿಸಿ ಅದರ ನಕಲಿ ಚಲನ್ ಅನ್ನು ನಂಜುಂಡಸ್ವಾಮಿ ಅವರ ವಾಟ್ಸ್‌ಪ್ ಮೂಲಕ ಕಳುಹಿಸಿದ್ದಾನೆ. ಕೂಡಲೇ ಬೆಂಗಳೂರಿಗೆ ಬಂದು ಹಣವನ್ನು ಕೊಡಲು ಒತ್ತಾಯಿಸಿದ್ದಾನೆ. ಇದರಿಂದ ಅನುಮಾನಗೊಂಡ ನಂಜುಂಡಸ್ವಾಮಿ ಕೂಡಲೇ ಬೆಂಗಳೂರಿನ ಬಿಡಿಎ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಅಲ್ಲದೇ ಆತ ನೀಡಿದ್ದ ಎಲ್ಲಾ ಚಲನ್ ಹಾಗೂ ರಶೀದಿಗಳನ್ನು ತೋರಿಸಿದಾಗ ಇವುಗಳೆಲ್ಲವೂ ನಕಲಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಳಿಕ ಈ ಕುರಿತು ರಾಮಚಂದ್ರೇಗೌಡನಿಗೆ ನಂಜುಂಡಸ್ವಾಮಿ ಅವರು ಪೋನಾಯಿಸಿದಾಗ, ಎಲ್ಲಾ ದಾಖಲಾತಿಗಳು ಅಸಲಿ ಎಂದು ಆತ ವಾದಿಸಿದ್ದಾನೆ. ಬಳಿಕ ಮೂರು ನಾಲ್ಕು ಬಾರಿ ಪೋನಾಯಿಸಿ, ಈ ಕುರಿತು ಪ್ರಶ್ನಿಸಲು ಆರಂಭಿಸಿದಾಗ ತನ್ನ ಪೋನನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಆಗ ತಾವು ಮೋಸ ಹೋಗಿರುವುದಾಗಿ ನಂಜುಂಡಸ್ವಾಮಿ ದಂಪತಿಗಳಿಗೆ ಗೊತ್ತಾಗಿದೆ.
ಬಳಿಕ ಗಿರಿಜಾ ಹಾಗೂ ನಂಜುಂಡಸ್ವಾಮಿ ಅವರು ರಾಮಚಂದ್ರೇಗೌಡನ ಮಂಜುನಾಥ ನಗರದ ನಿವಾಸಕ್ಕೆ ಹೋದಾಗ ಅಲ್ಲಿ ರಾಮಚಂದ್ರೇಗೌಡ ಸಿಗಲಿಲ್ಲ. ಈ ಬಗ್ಗೆ ಆತನ ಪತ್ನಿ ಮಂಜುಳಾ ಅವರನ್ನು ಪ್ರಶ್ನಿಸಿದಾಗ ಆಕೆಯು ಇವರೊಂದಿಗೆ ಜಗಳ ತೆಗೆದು ತನ್ನ ಮೇಲೆ ಹಲ್ಲೆ ಮಾಡಿದರು ಎಂದು ಸ್ಥಳೀಯ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅಲ್ಲದೇ ರೌಡಿಗಳ ಮೂಲಕ ರಾಮಚಂದ್ರೇಗೌಡ ನಂಜುಂಡಸ್ವಾಮಿ ದಂಪತಿಗೆ ಧಮಕಿ ಹಾಕಿಸಿ ಕೊಲೆ ಬೆದರಿಕೆವೊಡ್ಡಿದ್ದಾನೆ ಎಂದು ಗಿರಿಜಾ ನಂಜುಂಡಸ್ವಾಮಿ ದಂಪತಿ ಕೆಸ್ತೂರು ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಪಿಎಸ್‌ಐ ಸಂತೋಷ್ ಈ ಸಂಬಂಧ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.