Advertisement

ಆನ್‌ಲೈನ್‌ ಮೋಸ; ಎಂಆರ್‌ಪಿ ಮಾಹಿತಿ ಪ್ರಕಟಿಸದೆ ವಂಚನೆ

06:00 AM Aug 31, 2018 | |

ಬೆಂಗಳೂರು: ಆನ್‌ಲೈನ್‌ನಲ್ಲಿ ಖರೀದಿ ಪ್ರಕ್ರಿಯೆಯಲ್ಲಿನ ಅನುಕೂಲ, ಜನಪ್ರಿಯತೆಯನ್ನೇ ಬಂಡವಾಳ ಮಾಡಿಕೊಂಡು ಕೆಲ ಇ- ಕಾಮರ್ಸ್‌ ಸಂಸ್ಥೆಗಳು ಉತ್ಪನ್ನಗಳ ಗರಿಷ್ಠ ಮಾರಾಟ ಬೆಲೆ (ಎಂಆರ್‌ಪಿ) ಸೇರಿದಂತೆ ಆಯ್ದ ಮಾಹಿತಿಯನ್ನು ಗೌಪ್ಯವಾಗಿಟ್ಟು ವಂಚಿಸುವುದು ಹೆಚ್ಚಾಗಿದೆ.

Advertisement

ಆನ್‌ಲೈನ್‌ನಲ್ಲಿ ಖರೀದಿಸುವ ಯಾವುದೇ ಉತ್ಪನ್ನದ ಹೆಸರು, ಎಂಆರ್‌ಪಿ (ಎಲ್ಲ ತೆರಿಗೆ ಒಳಗೊಂಡಂತೆ), ನಿವ್ವಳ ತೂಕ, ಆಕಾರ ಮತ್ತು ಸ್ವರೂಪ, ಉತ್ಪಾದಕ/ ಪ್ಯಾಕರ್‌/ ಆಮದುದಾರರ ಹೆಸರು ಮತ್ತು ವಿಳಾಸ ಹಾಗೂ ಸಮಸ್ಯೆ- ಆಕ್ಷೇಪಣೆಗಳಿದ್ದರೆ ದೂರು ಸಲ್ಲಿಸಲು ವಿಳಾಸ, ಸಂಪರ್ಕ ಸಂಖ್ಯೆ, ಇ- ಮೇಲ್‌ ವಿಳಾಸದ ವಿವರವನ್ನು ಕಡ್ಡಾಯವಾಗಿ ಪ್ರಕಟಿಸಬೇಕೆಂಬ ಆದೇಶವಿದ್ದರೂ ಪಾಲನೆಯಾಗದೆ ಗ್ರಾಹಕರು ವಂಚನೆಗೆ ಒಳಗಾಗುವುದು ಮುಂದುವರಿದಿದೆ.
ಉದಾಹರಣೆಗೆ ಯಾವುದೇ ಉತ್ಪನ್ನ ಕೊಂಡಾಗ ಅದರ ಉಪ ಉತ್ಪನ್ನಗಳನ್ನು (ಆಕ್ಸೆಸರೀಸ್‌) ನೀಡದಿರುವುದು, ವಸ್ತುಗಳ ಸಂಖ್ಯೆ, ಬಟ್ಟೆ ಅಳತೆಯಲ್ಲಿ ಲೋಪ, ಮೂಲ ಬೆಲೆಯನ್ನು ಪ್ರಕಟಿಸಿದರೆ ಭಾರಿ ರಿಯಾಯ್ತಿ ನೀಡುವುದಾಗಿ ಪ್ರಕಟಿಸುವುದು ಸೇರಿದಂತೆ ಇತರೆ ವಿಧಾನಗಳಲ್ಲಿ ವಂಚಿಸಲಾಗುತ್ತಿದೆ.

ತೆರಿಗೆ ವಂಚನೆ ಅಪಾಯ
ಮುಖ್ಯವಾಗಿ ಆಮದು ಮಾಡಿಕೊಳ್ಳುವ ವಸ್ತುಗಳ ಮೂಲ ಬೆಲೆಯನ್ನೇ ಪ್ರಕಟಿಸದಿರುವುದು ಹೆಚ್ಚಾಗಿದೆ. ವಸ್ತುವಿನ ವಾಸ್ತವದ ಬೆಲೆಗೆ ತಕ್ಕ ಆಮದು ಸುಂಕ ಇತರೆ ತೆರಿಗೆ ಪಾವತಿಸದೆ ಸರ್ಕಾರಕ್ಕೆ ವಂಚಿಸುವ ಸಾಧ್ಯತೆ ಇರುತ್ತದೆ. ಇನ್ನೊಂದೆಡೆ ಗ್ರಾಹಕರಿಗೂ ದುಬಾರಿ ಬೆಲೆಗೆ ಮಾರುವ ಸಂಭವವಿರುತ್ತದೆ. ಜತೆಗೆ ಉತ್ಪನ್ನ ತಯಾರಾದ ದೇಶ, ಸ್ಥಳ ವಿವರ, ದೂರು ಸಲ್ಲಿಕೆಗೆ ವಿಳಾಸ ಇತರೆ ಮಾಹಿತಿಯನ್ನು ಪ್ರಕಟಿಸದೆ ವಂಚಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಈ ರೀತಿಯ ಹೈಟೆಕ್‌ ವಂಚನೆಯ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಉತ್ಪನ್ನಗಳ ಎಂಆರ್‌ಪಿ ಸೇರಿದಂತೆ ಆಯ್ದ ಆರು ವಿವರ ಪ್ರಕಟಿಸುವುದನ್ನು 2018ರ ಜ.1ರಿಂದ ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು. ಅದರಂತೆ ರಾಜ್ಯದಲ್ಲಿ ಕಾನೂನು ಮಾಪನಶಾಸ್ತ್ರ ಇಲಾಖೆಯು 2017ರ ಕಾನೂನು ಮಾಪನಶಾಸ್ತ್ರ (ಪ್ಯಾಕೇಜ್‌x ಕಮಾಡಿಟಿ) ತಿದ್ದುಪಡಿ ನಿಯಮಾವಳಿ ಪ್ರಕಾರ ಆರು ವಿವರಗಳ ಪ್ರಕಟಣೆಯನ್ನು ಕಡ್ಡಾಯಗೊಳಿಸಿ ಆದೇಶಿಸಿತ್ತು. ಆದರೆ ಆರಂಭಿಕ ಕೆಲ ತಿಂಗಳಲ್ಲಿ ಈ ಬಗ್ಗೆ ಅರಿವು ಮೂಡಿಸಲು ಗಮನ ಹರಿಸಿದ್ದ ಇಲಾಖೆ ಇದೀಗ ದಂಡ ಪ್ರಯೋಗಿಸಿ ಬಿಸಿ ಮುಟ್ಟಿಸಲು ಆರಂಭಿಸಿದೆ.

ಎರಡು ಸಂಸ್ಥೆಗಳಿಗೆ ದಂಡ
ಇ- ಕಾಮರ್ಸ್‌ ಸಂಸ್ಥೆಗಳು, ಉದ್ಯಮಗಳು ನಿಯಮ ಉಲ್ಲಂ ಸುವುದನ್ನು ಪತ್ತೆ ಹಚ್ಚಲು, ದಂಡ ವಿಧಿಸುವ ಕಾರ್ಯವನ್ನು ಇಲಾಖೆಯು ತನಿಖಾ ತಂಡಕ್ಕೆ ವಹಿಸಿದ್ದು, ಅದರಂತೆ ಕಾರ್ಯಾಚರಣೆ ಆರಂಭವಾಗಿದೆ. ಅದರಂತೆ ನಿಯಮಾನುಸಾರ ವಿವರಗಳನ್ನು ಪ್ರಕಟಿಸದ “ಹೋಮ್‌ಶಾಪ್‌ 18′ ಸಂಸ್ಥೆಗೆ 40,000 ರೂ. ಹಾಗೂ “ಫ್ಯಾಬ್‌ ಇಂಡಿಯಾ’ ಸಂಸ್ಥೆಗೆ 10,000 ರೂ. ದಂಡ ವಿಧಿಸಿದ್ದು, ಅದನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ.

Advertisement

ಜತೆಗೆ ಅಮೇಜಾನ್‌, ಪೆಟ್‌ಶಾಪ್‌ ಇಂಡಿಯಾ ಡಾಟ್‌ ಕಾಮ್‌, ಶಾಪ್‌ ಕ್ಲೂಸ್‌ ಹಾಗೂ ಮಿಂತ್ರ ಸಂಸ್ಥೆಗಳ ವಿರುದ್ಧವೂ ಪ್ರಕರಣ ದಾಖಲಾಗಿದೆ. ಆಯ್ದ ವಿವರಗಳನ್ನು ಕಡ್ಡಾಯವಾಗಿ ಪ್ರಕಟಿಸುವುದು ಉತ್ಪಾದಕರ ಜವಾಬ್ದಾರಿಯೇ ಇಲ್ಲವೇ ಮಾರಾಟ ಮಾಡುವ ಸಂಸ್ಥೆಯ ಹೊಣೆಗಾರಿಕೆಯೇ ಎಂಬ ಬಗ್ಗೆ ಕೇಂದ್ರ ಸರ್ಕಾರದಿಂದ ಸ್ಪಷ್ಟನೆ ಪಡೆದು ಇನ್ನಷ್ಟು ತೀವ್ರವಾಗಿ ಕಾಯಾಚರಣೆ ನಡೆಸಲು ಸಿದ್ಧತೆ ನಡೆದಿದೆ ಮೂಲಗಳು ತಿಳಿಸಿವೆ.

ಆನ್‌ಲೈನ್‌ನಲ್ಲಿ ವಸ್ತುಗಳ ಖರೀದಿಸುವ ಗ್ರಾಹಕ ಹಿತ ಕಾಪಾಡುವ ಸಲುವಾಗಿ ಉತ್ಪನ್ನದ ಆಯ್ದ ವಿವರಗಳನ್ನು ಕಡ್ಡಾಯವಾಗಿ ಪ್ರಕಟಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಅದರಂತೆ ನಿಯಮಾನುಸಾರ ವಿವರಗಳನ್ನು ಪ್ರಕಟಿಸದ ಆರು ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಿಯಮ ಉಲ್ಲಂಘನೆ ಬಗ್ಗೆ ಗ್ರಾಹಕರೂ ದೂರು ನೀಡಬಹುದಾಗಿದ್ದು, ತಪಾಸಣಾ ಕಾರ್ಯವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು.
– ಮಮತಾ, ಸಹಾಯಕ ನಿಯಂತ್ರಕರು, ತನಿಖಾ ತಂಡ

ಕಡ್ಡಾಯವಾಗಿ ಪ್ರಕಟಿಸಬೇಕಾದ ವಿವರ
ಉತ್ಪನ್ನದ ಹೆಸರು
ಎಂಆರ್‌ಪಿ (ಎಲ್ಲ ತೆರಿಗೆ ಒಳಗೊಂಡಂತೆ)
ನಿವ್ವಳ ತೂಕ
ನಿಯಮಾನುಸಾರ ಉತ್ಪನ್ನದ ಆಕಾರ, ಸ್ವರೂಪ
ಉತ್ಪಾದಕ/ ಪ್ಯಾಕರ್‌/ ಆಮದುದಾರರ ಹೆಸರು, ವಿಳಾಸ
ದೂರು ಸಲ್ಲಿಕೆ ವಿಳಾಸ, ಸಂಪರ್ಕ ಸಂಖ್ಯೆ, ಇ- ಮೇಲ್‌

ಗ್ರಾಹಕರು ದೂರು ನೀಡಬಹುದು
ಆನ್‌ಲೈನ್‌ನಲ್ಲಿ ಖರೀದಿಸುವ ಉತ್ಪನ್ನಗಳಲ್ಲಿ ಕಡ್ಡಾಯ ವಿವರಗಳಿಲ್ಲದಿದ್ದರೆ ಗ್ರಾಹಕರು ಇ- ಮೇಲ್‌ ವಿಳಾಸ: kar.lmdhelpdesk@gmail.comಗೆ ದೂರು ಸಲ್ಲಿಸಬಹುದು.

– ಕೀರ್ತಿಪ್ರಸಾದ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next