ಆಳಂದ: 2021-22ನೇ ಸಾಲಿನಲ್ಲಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆ, ಸಹಾಕಿಯರ ಹುದ್ದೆಗೆ ಅನರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಸರ್ಕಾರದ ಮಾರ್ಗಸೂಚಿಯಂತೆ ಅರ್ಹರನ್ನು ಆಯ್ಕೆ ಮಾಡಬೇಕು ಎಂದು ಬಂಜಾರಾ ಕ್ರಾಂತಿದಳ ತಾಲೂಕು ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಕಚೇರಿ ಎದುರು ಶುಕ್ರವಾರ ಬಂಜಾರಾ ಕ್ರಾಂತಿದಳ ರಾಜ್ಯಾಧ್ಯಕ್ಷ ರಾಜು ಚವ್ಹಾಣ, ತಾಲೂಕು ಅಧ್ಯಕ್ಷ ವೆಂಕಟೇಶ ರಾಠೊಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕೂಡಲೇ ನೇಮಕಾತಿ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಧುತ್ತರಗಾಂವ ಅಂಗನವಾಡಿಗೆ ಅಭ್ಯರ್ಥಿಯೊಬ್ಬರ ಹೆಸರು ಆಯ್ಕೆ ಪಟ್ಟಿಯಲ್ಲಿ ಬಂದಿದೆ. ಆದರೆ ನಿಯಮಾವಳಿಗಳ ಪ್ರಕಾರ ಮೆರಿಟ್ ಆಧಾರದಂತೆ ಇನ್ನೊಬ್ಬರು ಆಯ್ಕೆಯಾಗಬೇಕು. ಈ ಅಭ್ಯರ್ಥಿಗಳ ವಿಳಾಸದ ಪ್ರಕಾರ ಇಬ್ಬರು ಒಂದೇ ಪಂಚಾಯಿತಿ ಹಾಗೂ ಒಂದೇ ಭಾಗದ ಮತದಾರರು ಆಗಿದ್ದಾರೆ. ಹೆಸರಿಗಷ್ಟೆ ತಾಂಡಾಗಳು ಬೇರೆಬೇರೆ ಆಗಿವೆ. ಆಯ್ಕೆಯಾದ ಅಭ್ಯರ್ಥಿ ಶೇ. 73.28 ಅಂಕ ಪಡೆದಿದ್ದರೆ, ಇನ್ನೊಬ್ಬರ ಅಂಕ ಶೇ. 77.28 ಇದೆ. ಆದ್ದರಿಂದ ಮೆರಿಟ್ ಆಧಾರದಂತೆ ಸರ್ಕಾರದ ನಿಯಮಾವಳಿಗಳ ಪ್ರಕಾರ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದರು.
ಸಿಡ್ಸ್ ಫಾರ್‍ಂ ತಾಂಡಾ, ಮಟಕಿ ತಾಂಡಾ, ಗುಲಹಳ್ಳಿ ತಾಂಡಾ, ಹಳ್ಳಿಸಲಗರ ತಾಂಡಾ ಸೇರಿ ಒಂಭತ್ತು ಅಂಗನವಾಡಿ ಕೇಂದ್ರಗಳ ಆಯ್ಕೆಯಲ್ಲಿ ನಿಯಮಾವಳಿ ಉಲ್ಲಂಘಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಭ್ಯರ್ಥಿಯೊಬ್ಬರ 9ನೇ ತರಗತಿಯ ಅಂಕವನ್ನು 625 ಎಂದು ದಾಖಲಿಸಲಾಗಿದೆ. ಆದರೆ 9ನೇ ತರಗತಿಯಲ್ಲಿ ಇರುವುದು 600 ಅಂಕಗಳ ಅಂಕಪಟ್ಟಿ. ದಾಖಲೆಗಳು ಸುಳ್ಳು ಸೃಷ್ಟಿ ಎನ್ನುವುದು ಮೆಲ್ನೋಟಕ್ಕೆ ಕಾಣುತ್ತಿದೆ. ಅದ್ದರಿಂದ ಎಲ್ಲ ದಾಖಲೆಗಳ ಮರು ಪರಿಶೀಲನೆ ನಡೆಸಬೇಕು ಮತ್ತು ಅರ್ಹರನ್ನು ನ್ಯಾಯಯುತವಾಗಿ ಆಯ್ಕೆ ಮಾಡಬೇಕು. ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸದಿದ್ದರೇ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮುಖಂಡರಾದ ರಾಜು ಕೀರು ಚವ್ಹಾಣ, ಸಂತೋಷ ಪವಾರ, ಅಕ್ಷಯ ಪವಾರ, ಬಾಬು ರಾಠೊಡ, ಕಿರಣ ರಾಠೊಡ, ಕರಣ ಚವ್ಹಾಣ, ಸುನಿಲ ಪವಾರ ಹಾಗೂ ಇನ್ನಿತರರು ಸಿಡಿಪಿಒ ಶಿವಮೂರ್ತಿ ಕುಂಬಾರ ಅವರಿಗೆ ಮನವಿ ಸಲ್ಲಿಸಿದರು.