Advertisement

ಸಿಪೆಟ್‌ ಭೂಮಿ ವೀಕ್ಷಿಸಿದ ಸಚಿವ ಚವ್ಹಾಣ

01:51 PM May 16, 2022 | Team Udayavani |

ಬೀದರ: ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ರವಿವಾರ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಬಲ್ಲೂರ(ಜೆ) ಗ್ರಾಮಕ್ಕೆ ಭೇಟಿ ನೀಡಿ ಸಿಪೆಟ್‌ ನಿರ್ಮಾಣಕ್ಕೆ ಮಂಜೂರಾಗಿರುವ ಜಮೀನನ್ನು ವೀಕ್ಷಿಸಿದರು.

Advertisement

ಸೆಂಟ್ರಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಪೆಟ್ರೊಕೆಮಿಕಲ್ಸ್ ಆ್ಯಂಡ್‌ ಇಂಜಿನಿಯರಿಂಗ್‌ (ಸಿಪೆಟ್‌) ಆರಂಭಿಸಲು ಅವಶ್ಯಕವಾಗಿರುವ ಕೆಲಸಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಸಂಸ್ಥೆ ಆರಂಭಕ್ಕೆ ಜಿಲ್ಲಾಡಳಿತದಿಂದ ಅವಶ್ಯಕವಿರುವ ಎಲ್ಲ ನೆರವು ನೀಡಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇದೇ ವೇಳೆ ಸ್ಥಳೀಯರಿಂದಲೂ ಅಗತ್ಯ ಸಲಹೆಗಳನ್ನು ಪಡೆದರು.

ಬಳಿಕ ಮಾತನಾಡಿದ ಸಚಿವರು, 90 ಕೋಟಿ ರೂ. ವೆಚ್ಚದಲ್ಲಿ ಸಿಪೆಟ್‌ ಕೇಂದ್ರ ಆರಂಭಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ 50:50 ಅನುಪಾತದಲ್ಲಿ ಸಿಪೆಟ್‌ ಆರಂಭವಾಗಲಿದ್ದು, ಬಲ್ಲೂರ(ಜೆ) ಗ್ರಾಮದಲ್ಲಿ 10 ಎಕರೆ ಜಮೀನು ಕಾಯ್ದಿರಿಸಲಾಗಿದೆ. ಇದರ ಪರಿಶೀಲನೆ ನಡೆಸಿದ್ದು, ಸಿಪೆಟ್‌ ಸ್ಥಾಪನೆಗೆ ಅತ್ಯಂತ ಸೂಕ್ತ ಸ್ಥಳವಾಗಿದೆ ಎಂದು ಸಚಿವರು ವಿವರಿಸಿದರು.

ಕೇಂದ್ರ ಸಚಿವ ಭಗವಂತ ಖೂಬಾ ಅವರು ವಿದೇಶ ಪ್ರವಾಸದಲ್ಲಿದ್ದು, ಅವರು ಹಿಂದಿರುಗಿ ಬಂದ ನಂತರ ಚರ್ಚಿಸಿ, ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸಚಿವರ ಅಮೃತ ಹಸ್ತದಿಂದ ಸಿಪೆಟ್‌ ನಿರ್ಮಾಣ ಕಾಮಗಾರಿಗೆ ಶೀಘ್ರ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಭರವಸೆ ನೀಡಿದರು.

Advertisement

ಹಿಂದುಳಿದ ಔರಾದ ತಾಲೂಕನ್ನು ಸಮಗ್ರ ಅಭಿವೃದ್ಧಿಪಡಿಸಬೇಕೆಂಬ ಸಂಕಲ್ಪ ಹೊಂದಿದ್ದೇನೆ. ತಾಲೂಕಿಗೆ ಬೃಹತ್‌ ಉದ್ದಿಮೆಗಳನ್ನು ತರಬೇಕು. ಇಲ್ಲಿನ ಜನತೆ ಉದ್ಯೋಗಕ್ಕಾಗಿ ಬೇರೆ ಕಡೆಗೆ ವಲಸೆ ಹೋಗುವುದು ತಪ್ಪಬೇಕು. ಇಲ್ಲಿಯೇ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುವ ದಿಶೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇದಕ್ಕೆ ಪೂರಕವಾಗಿ ಬೀದರ-ಔರಾದ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಲಾಗುತ್ತಿದೆ. ಇದೀಗ ಸಿಪೆಟ್‌ ಕೇಂದ್ರ ಮಂಜೂರಾಗಿರುವುದರಿಂದ ಈ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಔರಾದ ತಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿ, ಶಿವಕುಮಾರ ಘಾಟೆ, ವಸಂತ ಬಿರಾದಾರ, ಮಹಾದೇವ ತಳವಾಡೆ, ಯಶವಂತ ಪಾಟೀಲ, ಸಚಿನ್‌ ರಾಠೊಡ, ಇತರ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next