Advertisement

ಚವಡಾಪುರ ಬಸ್‌ ನಿಲ್ದಾಣದಲ್ಲಿ ಅವಾಂತರ

11:27 AM May 26, 2019 | Naveen |

ಅಫಜಲಪುರ: ಸಾರ್ವಜನಿಕ ಸಾರಿಗೆಯಲ್ಲಿ ಬಹಳ ಹೆಸರು ಮಾಡಿರುವ ಈಶಾನ್ಯ ಕರ್ನಾಟಕ ಸಾರಿಗೆ ವ್ಯವಸ್ಥೆ ಕೆಲ ಅವಾಂತರಗಳಿಂದಾಗಿ ಆಗಾಗ ಕೆಟ್ಟ ಹೆಸರು ಪಡೆಯುತ್ತಿದೆ. ಇಲ್ಲೊಂದು ಹೇಳಿಕೊಳ್ಳಲು ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಿಸಿ ಸೌಲಭ್ಯಗಳನ್ನೇ ಕಲ್ಪಿಸಿಲ್ಲ. ತಾಲೂಕಿನ ಚವಡಾಪುರ ಬಸ್‌ ನಿಲ್ದಾಣ ಇಂತಹ ಅವಾಂತರಕ್ಕೆ ಕಾರಣವಾಗಿದೆ.

Advertisement

ಪ್ರಯಾಣಿಕರಿಗೆ ಅನುಕೂಲಕ್ಕಾಗಿ ಬಸ್‌ ನಿಲ್ದಾಣದಲ್ಲಿ ಹೈಟೆಕ್‌ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಬಸ್‌ ನಿಲ್ದಾಣ ನಿರ್ಮಾಣ ಆದಾಗಿನಿಂದ ಶೌಚಾಲಯದ ಬಾಗಿಲು ತೆಗೆದೆ ಇಲ್ಲ. ಇದರಿಂದ ಇಲ್ಲಿಗೆ ಬರುವ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ.

ಚವಡಾಪುರ ಬಸ್‌ ನಿಲ್ದಾಣದಲ್ಲಿ ಇದುವರೆಗೂ ಸಿಸಿ ಕ್ಯಾಮೆರಾ ಅಳವಡಿಸಿಲ್ಲ. ಇದರಿಂದ ಇಲ್ಲಿ ಅನೈತಿಕ ಚಟುವಟಿಕೆಗಳು ಯಾರಿಗೂ ಗೊತ್ತಾಗದ ಹಾಗೆ ನಡೆಯುತ್ತಿವೆ. ಬಸ್‌ ನಿಲ್ದಾಣದಲ್ಲಿ ರಾತ್ರಿಯಾದರೆ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಅಸಭ್ಯವಾಗಿ ವರ್ತಿಸುವ ಪುಂಡರ ಹಾವಳಿ ಹೆಚ್ಚಾಗಿದೆ.

ಚವಡಾಪುರದಲ್ಲಿನ ಬಸ್‌ ನಿಲ್ದಾಣದ ಮುಂಭಾಗದಲ್ಲಿ ಮತ್ತು ಪ್ಲಾಟಫಾರಂ ಬಳಿಯಲ್ಲಿ ಅಡ್ಡಾದಿಡ್ಡಿಯಾಗಿ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡುವುದರಿಂದ ಸರ್ಕಾರಿ ಸಾರಿಗೆ ಬಸ್‌ಗಳಿಗೆ ಬಹಳಷ್ಟು ಪೆಟ್ಟು ಬೀಳುತ್ತಿದೆ. ಅಲ್ಲದೆ ಅಡ್ಡಾದಿಡ್ಡಿ ವಾಹನ ನಿಲುಗಡೆಯಿಂದಾಗಿ ಸಾಕಷ್ಟು ಸಮಸ್ಯೆಗಳಾಗುತ್ತಿವೆ. ಖಾಸಗಿ ವಾಹನಗಳ ಹಾವಳಿಯಿಂದಾಗಿ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತಿದೆ. ಮುಖ್ಯವಾಗಿ ಚವಡಾಪುರದಿಂದ ಕೇವಲ 6 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳ ದೇವಲಗಾಣಗಾಪುರಕ್ಕೆ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ದೇವಲ ಗಾಣಗಾಪುರಕ್ಕೆ ಬರುವ ಯಾತ್ರಾರ್ಥಿಗಳೆಲ್ಲ ಚವಡಾಪುರದಿಂದಲೇ ಹೊರಡಬೇಕು. ಸಾರಿಗೆ ಬಸ್‌ಗಳ ಸೌಕರ್ಯ ಇದೆ. ಆದರೆ ಖಾಸಗಿ ವಾಹನಗಳ ಮಾಲೀಕರು ಪ್ರಯಾಣಿಕರನ್ನು ಬಸ್‌ ನಿಲ್ದಾಣದಿಂದಲೇ ಕರೆದೊಯ್ಯುತ್ತಿದ್ದಾರೆ. ಇದರ ಬಗ್ಗೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಇನ್ನೂ ಬಸ್‌ ನಿಲ್ದಾಣದಲ್ಲಿ ಕುಡಿಯುವ ನೀರಿನ ಸೌಕರ್ಯ ಸರಿಯಾಗಿಲ್ಲ. ಕೊಳವೆ ಬಾವಿ ಇದ್ದರೂ ಇಲ್ಲದಂತಾಗಿದೆ. ಹೀಗಾಗಿ ಹಣ ಕೊಟ್ಟು ನೀರು ಕುಡಿಯುವ ಪರಿಸ್ಥಿತಿ ಪ್ರಯಾಣಿಕರಿಗೆ ಬಂದಿದೆ. ಸಾರಿಗೆ ಸಂಸ್ಥೆ ಅಧಿಕಾರಿಗಳು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಸಿಸಿ ಕ್ಯಾಮೆರಾ ಅಳವಡಿಸಬೇಕು. ಶೌಚಾಲಯ ಆರಂಭಿಸಲು ಕ್ರಮ ತೆಗೆದುಕೊಳ್ಳಬೇಕು. ಅಡ್ಡಾದಿಡ್ಡಿ ವಾಹನಗಳ ನಿಲುಗಡೆಗೆ ಕಡಿವಾಣ ಹಾಕಬೇಕು. ಬಸ್‌ ನಿಲ್ದಾಣಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

Advertisement

ಬಸ್‌ ನಿಲ್ದಾಣಕ್ಕೆ ಭೇಟಿ ನೀಡಿ ಅಲ್ಲಿರುವ ಸಮಸ್ಯೆ ಪರಿಹರಿಸಲಾಗುವುದು ಎಂದು ಘಟಕ ವ್ಯವಸ್ಥಾಪಕ ಜಿ.ಆರ್‌. ಕುಲಕರ್ಣಿ ತಿಳಿಸಿದ್ದಾರೆ.

ಮಲ್ಲಿಕಾರ್ಜುನ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next