Advertisement

ಮತ್ತೆ ಚಿಗುರಿದ ಚೌಡಯ್ಯ ಪ್ರಾಧಿಕಾರ ಕನಸು

01:05 PM Dec 28, 2019 | Suhan S |

ಹಾವೇರಿ: ಹನ್ನೆರಡನೇ ಶತಮಾನದ ಪ್ರಮುಖ ಶರಣರಲ್ಲಿ ಒಬ್ಬರಾದ ನಿಜಶರಣ ಅಂಬಿಗರ ಚೌಡಯ್ಯನವರ ಹೆಸರಲ್ಲಿ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು ಎಂಬ ಹಲವು ವರ್ಷಗಳ ಬೇಡಿಕೆ ಇನ್ನೂ ಈಡೇರಿಲ್ಲ. ಬಹುವರ್ಷಗಳಿಂದ ಕನಸಾಗಿಯೇ ಉಳಿದಿರುವ ಪ್ರಾಧಿಕಾರ ರಚನೆ 2020ರ ಹೊಸ ವರ್ಷದಲ್ಲಾದರೂ ಸಾಕಾರಗೊಳ್ಳಬಹುದೆಂಬ ಆಸೆ ಚಿಗುರೊಡೆದಿದೆ. ಜ.14 ಹಾಗೂ 15ರಂದು ನಡೆಯುವ ನಿಜಶರಣ ಅಂಬಿಗರ ಚೌಡಯ್ಯ ಶರಣ ಸಂಸ್ಕೃತಿ ಉತ್ಸವದಲ್ಲಿ ಸಿಎಂ ಯಡಿಯೂರಪ್ಪ ಪಾಲ್ಗೊಳ್ಳಲಿದ್ದು ಈ ಸಂದರ್ಭದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ಪ್ರಾ ಧಿಕಾರ ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ.

Advertisement

ಅಭಿಮಾನಿಗಳಲ್ಲಿ ಬೇಸರ: ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ಪ್ರಾಧಿಕಾರ ರಚನೆ ಮೂಲಕ ಅಂಬಿಗರ ಚೌಡಯ್ಯನವರ ಸಮಾಧಿ ಸ್ಥಳದ ಅಭಿವೃದ್ಧಿ, ಅವರ ವಚನಗಳ ಸಂಗ್ರಹ, ಪ್ರಚಾರ ಮಾಡಬೇಕು ಎಂಬುದು ಸಮಾಜದವರ ಗುರಿಯಾಗಿದೆ. ಹೀಗಾಗಿ ಪ್ರಾಧಿಕಾರ ರಚಿಸಲು ಹಲವು ಬಾರಿ ಸರ್ಕಾರದ ಗಮನಸೆಳೆದರೂ ಅದು ಯಾವುದೇ ಪ್ರಯೋಜನಕ್ಕೆ ಬಾರದಿರುವುದು ಚೌಡಯ್ಯ ಅಭಿಮಾನಿಗಳಲ್ಲಿ ಬೇಸರವೂ ಮೂಡಿಸಿದೆ.

ಮರೀಚಿಕೆಯಾದ ಬೇಡಿಕೆ: ವಚನಗಳ ಮೂಲಕ ನಿಷ್ಠುರತೆಗೆ ಹೆಸರಾದ ಅಂಬಿಗರ ಚೌಡಯ್ಯನವರ ಜಯಂತಿಯನ್ನೂ ಮೊದಲು ಸರ್ಕಾರ ಮರೆತಿತ್ತು. ಸಮಾಜ ಸಂಘಟನೆಯ ಭಾರಿ ಒತ್ತಾಯ, ಹೋರಾಟದ ಫಲವಾಗಿ 2012ರಿಂದ ಸರ್ಕಾರ, ಪ್ರತಿವರ್ಷ ಜ.21ರಂದು ಅಂಬಿಗರ ಜಯಂತಿ ಆಚರಿಸುತ್ತ ಬಂದಿದೆ. ತನ್ಮೂಲಕ ಅಂಬಿಗರ ಚೌಡಯ್ಯನವರನ್ನು ನೆನೆಸುವ, ಉಪನ್ಯಾಸದ ಮೂಲಕ ಅವರ ವಚನದ ಗಟ್ಟಿತನ ಪ್ರಚಾರಪಡಿಸುವ ಕಾರ್ಯ ಆಗುತ್ತಿದೆ. ಕಳೆದ ವರ್ಷ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ರಚನೆಯಾಗಿದೆ. ಇದರಿಂದ ಗಂಗಾಮತಸ್ಥರಿಗೆ ಪ್ರತ್ಯೇಕವಾಗಿ ಹಿಂದುಳಿದ ವರ್ಗಗಳಿಗೆ ಸಿಗುವ ಸೌಲಭ್ಯ ಸಿಗುತ್ತಿದೆ. ಆದರೆ, ಅವರ ಹೆಸರಲ್ಲಿ ಅಭಿವೃದ್ಧಿ ಪ್ರಾಧಿಕಾರ ಆಗಬೇಕು ಎಂಬ ಬೇಡಿಕೆ ಮಾತ್ರ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.

ವೈಜ್ಞಾನಿಕ ವಿಚಾರಗಳ ಶರಣ: ವೈಜ್ಞಾನಿಕ ವಿಚಾರಗಳನ್ನೊಳಗೊಂಡ ವಚನಗಳನ್ನು ರಚನೆ ಮಾಡಿರುವುದು ಚೌಡಯ್ಯನವರ ವಿಶೇಷತೆ. ಚೌಡಯ್ಯನವರ ವಚನಗಳು ಸಾವಿರಾರು ಸಂಖ್ಯೆಯಲ್ಲಿದ್ದರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅವರ 284 ವಚನಗಳನ್ನು ಮಾತ್ರ ಪ್ರಕಟಿಸಿದೆ. ಲಭ್ಯವಿರುವ ಅವರ ಎಲ್ಲ ವಚನಗಳನ್ನು ಮುದ್ರಿಸಿ, ಅದನ್ನು ಪ್ರಚುರಪಡಿಸುವ ಕಾರ್ಯ ಇನ್ನಷ್ಟು ಆಗಬೇಕಿದೆ. ಚೌಡಯ್ಯನವರ ವಚನಗಳನ್ನು ಮುದ್ರಿಸುವ ಜತೆಗೆ ರಾಣಿಬೆನ್ನೂರು ತಾಲೂಕಿನ ಚೌಡದಾನಪುರದಲ್ಲಿರುವ ಅವರ ಐಕ್ಯ ಸ್ಥಳದ ಅಭಿವೃದ್ಧಿ ಆಗಬೇಕಿದೆ. ಸ್ಮಾರಕದ ರೀತಿಯಲ್ಲಿ ಚೌಡಯ್ಯನವರ ಐಕ್ಯಸ್ಥಳದ ಅಭಿವೃದ್ಧಿ, ಆಯುರ್ವೇದ ಕಾಲೇಜು ಸ್ಥಾಪನೆ, ವೃದ್ಧಾಶ್ರಮ, ಗೋಶಾಲೆ ತೆರೆಯುವ ಇಚ್ಛೆ ಚೌಡಯ್ಯನವರ ಅಭಿಮಾನಿಗಳದ್ದಾಗಿದ್ದು, ಚೌಡಯ್ಯನವರ ಹೆಸರಲ್ಲಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾದರೆ ಇವೆಲ್ಲ ಬೇಡಿಕೆ ಈಡೇರಿಸಿಕೊಳ್ಳಲು ಸಹಕಾರಿಯಾಗುತ್ತದೆ.

ನಿಜಶರಣ ಅಂಬಿಗರ ಚೌಡಯ್ಯನ ಅಭಿವೃದ್ಧಿ ಪ್ರಾಧಿಕಾರ ರಚನೆಗಾಗಿ ಸಮುದಾಯದ ವಿವಿಧ ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಬಂದಿವೆ. ಆದರೆ, ಈವರೆಗೂ ಸರ್ಕಾರದಿಂದ ಪ್ರಾಧಿಕಾರ ರಚನೆಗೆ ಹಸಿರು ನಿಶಾನೆ ದೊರೆತಿಲ್ಲ. ಈಗ ಮುಖ್ಯಮಂತ್ರಿಯವರೇ ಚೌಡಯ್ಯನವರ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವುದರಿಂದ ಪ್ರಾಧಿಕಾರ ರಚನೆ ಬೇಡಿಕೆ ಈಡೇರುವ ನಿರೀಕ್ಷೆ ಹೊಂದಲಾಗಿದೆ.

Advertisement

 

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next