ಲಕ್ನೋ/ನವದೆಹಲಿ: ಕುಖ್ಯಾತ ರೌಡಿ ವಿಕಾಸ್ ದುಬೆಯನ್ನು ಬಂಧಿಸಲು ತೆರಳಿದ್ದ ಸಂದರ್ಭದಲ್ಲಿ ಎಂಟು ಪೊಲೀಸರನ್ನು ಹತ್ಯೆಗೈದಿದ್ದ ದುಬೆ ಮನೆಯನ್ನು ಶನಿವಾರ ಕಾನ್ಪುರ ಜಿಲ್ಲಾಡಳಿತ ನೆಲಸಮಗೊಳಿಸಿದೆ ಎಂದು ವರದಿ ತಿಳಿಸಿದೆ.
ರೌಡಿ ಶೀಟರ್ ವಿಕಾಸ್ ದುಬೆ ಹಾಗೂ ಆತನ ಸಹಚರರನ್ನು ಬಂಧಿಸಲು ತೆರಳಿದ್ದ ಸಂದರ್ಭದಲ್ಲಿ ಗುಂಡಿನ ದಾಳಿಗೆ ಎಂಟು ಮಂದಿ ಪೊಲೀಸರು ಸಾವನ್ನಪ್ಪಿದ್ದರು. ಈ ಘಟನೆ ನಡೆದು 36 ಗಂಟೆಯ ನಂತರ ಬಿಥೂರ್ಸ್ ನ ಡಿಕ್ರೂ ಗ್ರಾಮದಲ್ಲಿರುವ ದುಬೆ ಮನೆಯನ್ನು ಧ್ವಂಸಗೊಳಿಸಲಾಗಿದೆ ಎಂದು ವರದಿ ಹೇಳಿದೆ.
ಮತ್ತೊಂದು ಬೆಳವಣಿಗೆಯಲ್ಲಿ ನಟೋರಿಯಸ್ ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಪರಾರಿಯಾಗಲು ಮಾಹಿತಿ ನೀಡಿರುವ ಶಂಕಿತ ಚೌಬೇಪುರ್ ಪೊಲೀಸ್ ಠಾಣಾಧಿಕಾರಿ ವಿನಯ್ ತಿವಾರಿಯನ್ನು ಅಮಾನತು ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಚೌಬೇಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಡಿಕ್ರೂ ಪ್ರದೇಶದಲ್ಲಿದ್ದ ವಿಕಾಸ್ ಹಾಗೂ ಆತನ ಸಹಚರರು ಅಡಗಿರುವ ಮಾಹಿತಿ ಪಡೆದು ಪೊಲೀಸರು ಬಂಧಿಸಲು ತೆರಳಿದ್ದ ವೇಳೆ 8 ಮಂದಿಗೆ ಗುಂಡು ಹಾರಿಸಿ ಹತ್ಯೆಗೈದಿದ್ದ ಘಟನೆ ನಡೆದಿತ್ತು. ದುಬೆ ವಿರುದ್ಧ ಕೊಲೆ, ಸುಲಿಗೆ ಸೇರಿದಂತೆ 60ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ.
ನಟೋರಿಯಲ್ ಕ್ರಿಮಿನಲ್ ದುಬೆ ಮತ್ತು ಆತನ ಸಹಚರರ ಬಂಧನಕ್ಕೆ ಉತ್ತರಪ್ರದೇಶ ಪೊಲೀಸ್ ಅಧಿಕಾರಿಗಳು ನೂರು ತಂಡಗಳನ್ನು ರಚಿಸಲಾಗಿದೆ. ಅಲ್ಲದೇ ದುಬೆ ಬಂಧನದಿಂದ ತಪ್ಪಿಸಿಕೊಳ್ಳಲು ನೆರೆಯ ರಾಷ್ಟ್ರಕ್ಕೆ ಪರಾರಿಯಾಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.