ಕಾಪು: ಕೋವಿಡ್ ವಿರುದ್ದ ಹೋರಾಡಲು ನಾವು ಗೆಲ್ಲುತ್ತೇವೆ ಎಂಬ ಅಚಲ ವಿಶ್ವಾಸ ನಮ್ಮಲ್ಲಿ ಇರಬೇಕು. ಹಾಗೆಯೇ ಭಗವಂತನಲ್ಲಿ ಕೂಡ ಶ್ರದ್ದೆ-ನಂಬಿಕೆ ಇಟ್ಟು ಸೇವೆ ಮಾಡಬೇಕು. ಹಾಗಿದ್ದಲ್ಲಿ ಸಂಸಾರ ಸಾಗರದ ದುರಿತಗಳನ್ನು ಭಗವಂತ ನಿವಾರಿಸುವುದು ನಿಸಂಶಯ ಎಂದು ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾ ಸ್ವಾಮೀಜಿ ನುಡಿದರು.
ಅವರು ಪಡುಕುತ್ಯಾರು ಆನೆಗುಂದಿ ಮಹಾ ಸಂಸ್ಥಾನದ ಸರಸ್ವತಿ ಸತ್ಸಂಗ ಮಂದಿರದಲ್ಲಿ ನಡೆದ ಪ್ಲವ ನಾಮ ಸಂವತ್ಸರದ ಚಾತುರ್ಮಾಸ್ಯ ವ್ರತ ಆಚರಣೆಯ ಧರ್ಮ ಸಭೆಯಲ್ಲಿ ಶಿಷ್ಯ ವೃಂದದವರಿಗೆ ಆಶೀರ್ವಚನ ನೀಡುತ್ತಿದ್ದರು.
ಈ ಸಂದರ್ಭದಲ್ಲಿ ಶ್ರೀ ಸರಸ್ವತೀ ಮಾತೃ ಮಂಡಳಿ , ಶ್ರೀ ನಾಗಧರ್ಮೇಂದ್ರ ಸರಸ್ವತಿ ಸಂಸ್ಕೃತ ವೇದ ಸಂಜೀವಿನಿ ಪಾಠಶಾಲೆಯ ಆನ್ಲೈನ್ ತರಗತಿಗಳು, ಮತ್ತು ಸಮಾಜದ ಜನಗಣತಿಯ ಆ್ಯಪ್ ನ್ನು ಉದ್ಘಾಟಿಸಲಾಯಿತು.
ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಅಧ್ಯಕ್ಷ ವಡೇರಹೋಬಳಿ ಶ್ರೀಧರ ಆಚಾರ್ಯ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಪುರೋಹಿತ್ ಲಕ್ಷ್ಮೀಕಾಂತ ಶರ್ಮ ಬಾರ್ಕೂರು, ಪುರೋಹಿತ್ ಅಕ್ಷಯ ಶರ್ಮಾ ಕಟಪಾಡಿ, ಕೇಶವ ಶರ್ಮ ಇರುವೈಲು, ಪ್ರಶಾಂತ್ ಶರ್ಮ ಚಾತುರ್ಮಾಸ್ಯ ಸಮಾರಂಭದ ವೈದಿಕ ಕಾರ್ಯಕ್ರಮಗಳಿಗೆ ನೇತೃತ್ವ ನೀಡಿದರು. ವೇದಪಾಠ ಶಾಲೆಯ ವಿದ್ಯಾರ್ಥಿಗಳಿಂದ ವೇದಘೋಷ ನಡೆಯಿತು.
ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಮತ್ತು ಪ್ರತಿಷ್ಥಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್ಯ ಕಂಬಾರು ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಕಾಡಬೆಟ್ಟು ನಾಗರಾಜ ಆಚಾರ್ಯ ಧನ್ಯವಾದವಿತ್ತರು. ಕಾರ್ಯದರ್ಶಿ ನ್ಯಾಯವಾದಿ ಗಂಗಾಧರ ಆಚಾರ್ಯ ಕೊಂಡೆವೂರು ಕಾರ್ಯಕ್ರಮ ನಿರೂಪಿಸಿದರು.