Advertisement

ಕನ್ನಡ ಬಳಸದ ಅಧಿಕಾರಿಗಳಿಗೆ ಚಾಟಿ ಬೀಸಿ

09:07 AM Jan 19, 2019 | Team Udayavani |

ಮೂಡಿಗೆರೆ: ಕನ್ನಡದಲ್ಲಿ ವ್ಯವಹರಿಸಲು ಸೋಮಾರಿತನ ತೋರುವ ಕೆಲವು ಕನ್ನಡ ಬಲ್ಲ ಅಧಿಕಾರಿಗಳು ಹಾಗೂ ಕನ್ನಡ ಕಲಿಯಲು ಆಲಕ್ಷಿಸುವ ಕೆಲವು ಕನ್ನಡೇತರ ಅಧಿಕಾರಿಗಳನ್ನು ದಾರಿಗೆ ತರಲು ಸರ್ಕಾರ ನಿಗಾವಹಿಸಬೇಕೆಂದು 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ| ಡಿ.ಎಸ್‌.ಜಯಪ್ಪಗೌಡ ಆಗ್ರಹಿಸಿದರು.

Advertisement

ಮೂಡಿಗೆರೆಯಲ್ಲಿ ಶುಕ್ರವಾರ ಆರಂಭವಾದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ಕನ್ನಡ ಜನಸಾಮಾನ್ಯರ ಸಂಪರ್ಕ ಭಾಷೆಯಾಗಿ ಯಶಸ್ವಿಯಾಗಿದೆ. ಆಡಳಿತ ಭಾಷೆಯಾಗಿ ಅದು ಯಶಸ್ಸುಗೊಳಿಸಲು ಸರ್ಕಾರ ತರಬೇತಿ ಕಾರ್ಯಕ್ರಮ ಸೇರಿದಂತೆ ಪೂರಕವಾದ ಅನೇಕ ಪದಕೋಶ ಹಾಗೂ ಪಾರಿಭಾಷಿಕ ಕೃತಿಗಳನ್ನು ಹೊರ ತಂದಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಕಣ್ಗಾವಲನ್ನು ಇಟ್ಟಿದೆ. ಆಡಳಿತ ಭಾಷೆಯಾಗಿ ಕನ್ನಡವನ್ನು ಜಾರಿಗೊಳಿಸಿ ವರ್ಷಗಳೇ ಕಳೆದಿವೆ. ಈಗ ಸರ್ಕಾರ ಕೈಗೊಳ್ಳಬೇಕಾದುದು ಕೆಲವು ಬಿಗಿ ಕ್ರಮಗಳನ್ನು; ಆಗ ಮಾತ್ರ ಕನ್ನಡ ಆಡಳಿತದಲ್ಲಿ ಊರ್ಜಿತವಾಗಲು ಅಡ್ಡಿಯಾಗುವುದಿಲ್ಲ. ಕನ್ನಡದಲ್ಲಿ ವ್ಯವಹರಿಸಲು ಹಿಂಜರಿಯುವ ಕೆಲವು ಕನ್ನಡ ಬಲ್ಲ ಅಧಿಕಾರಿಗಳು ಹಾಗೂ ಕನ್ನಡ ಕಲಿಯಲು ಅಲಕ್ಷಿಸುವ ಕೆಲವು ಕನ್ನಡೇತರ ಭಾಷಾ ಅಧಿಕಾರಿಗಳು ದಾರಿಗೆ ಬರುವಂತೆ ಸರ್ಕಾರ ನಿಗಾ ವಹಿಸಬೇಕೆಂದು ಸಲಹೆ ಮಾಡಿದರು.

ಕನ್ನಡ ಭಾಷೆ ಮತ್ತು ಸಾಹಿತ್ಯದ ಹಿರಿಮೆ ಹಾಗೂ ಗರಿಮೆ ಅತ್ಯಂತ ಪ್ರಸ್ತುತ. ಆದರೆ ಕನ್ನಡದ ಆತಂಕಗಳು ಮರೆಯಾಗಿಲ್ಲ. ಕನ್ನಡ ಈ ನಾಡಿನಲ್ಲಿ ತನ್ನ ಹಿಡಿತವನ್ನು ಉಳಿಸಿಕೊಳ್ಳಬೇಕಾದರೆ ಅದು ಸಾಫ್ಟ್‌ವೇರ್‌ ಭಾಷೆಯಾಗುವುದು ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.

ಕನ್ನಡ ಭಾಷೆ ಸಾಫ್ಟ್‌ ವೇರ್‌ ಭಾಷೆಯಾಗದಿದ್ದರೆ ಅದು ಹಿಂದೆ ಬೀಳುತ್ತದೆ. ಈ ಮಾತನ್ನು ಬಹಳ ಹಿಂದೆಯೇ ಖ್ಯಾತ ಸಾಹಿತಿ ಹಾಗೂ ಪರಿಸರವಾದಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸೂಚಿಸಿ ಎಚ್ಚರಿಸಿದ್ದರು ಎಂಬುದನ್ನು ನೆನಪಿಸಿಕೊಂಡ ಸರ್ವಾಧ್ಯಕ್ಷರು, ಕನ್ನಡವನ್ನು ತಂತ್ರಾಂಶ ಭಾಷೆಯಾಗಿಸಲು ಏನು ಕೆಲಸವಾಗಿದೆ ಎಂಬುದನ್ನು ತಜ್ಞರೇ ಸ್ಪಷ್ಟಪಡಿಸಬೇಕು ಎಂದರು.

ಒಂದು ಭಾಷೆಗೆ ಆತಂಕ ಎದುರಾಗುವುದು ಅದು ಶಿಕ್ಷಣ ಮಾಧ್ಯಮವಾಗಲು ಸಾಧ್ಯವಾಗದಿದ್ದಾಗ. ಇದಕ್ಕೆ ಐತಿಹಾಸಿಕ ಕಾರಣಗಳೂ ಇವೆ. ಸಂಸ್ಕೃತದ ಪ್ರಭಾವಳಿ ಅಡಿ ಬೆಳೆದ ಕನ್ನಡ ಸಾಹಿತ್ಯ ಅಲ್ಲಿಂದ ಪದ ಸಂಪತ್ತನ್ನು ಧಾರಾಳವಾಗಿ ಪಡೆದು ಬಳಸಿಕೊಂಡ ಪರಿಣಾಮ ದ್ರಾವಿಡ ಭಾಷೆಯ ಪಾರಿಭಾಷಿಕ ಪದಗಳ ಸ್ಥಾನದಲ್ಲಿ ಸಂಸ್ಕೃತ ಪದಗಳು ಬಂದು ಕುಳಿತವು ಎಂದು ವಿವರಿಸಿದರು.

Advertisement

ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣಕ್ಕೆ ಬಂದು ಇಂಗ್ಲಿಷ್‌ ಮಾಧ್ಯಮಕ್ಕೆ ಸೇರಿದರೆ ಪಠ್ಯ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ. ವಿಜ್ಞಾನ ವಿಷಯಗಳನ್ನು ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳುವುದು ಕಷ್ಟ. ಸಮಾನ ಪದಕೋಶಗಳು ದೊರಕುವುದಿಲ್ಲ. ಹಿಂದೆಯೇ ವಿದ್ವಾಂಸ ಡಾ| ಎಂ.ಚಿದಾನಂದಮೂರ್ತಿ ಸಾಮಾಜಿಕ ವಿಜ್ಞಾನಗಳ ಅಕಾಡೆಮಿಯೊಂದನ್ನು ಸ್ಥಾಪಿಸಬೇಕೆಂಬ ಸಲಹೆಯನ್ನು ಸರ್ಕಾರದ ಮುಂದಿಟ್ಟಿದ್ದರು. ಆದರೆ ಸರ್ಕಾರದಿಂದ ಅದಕ್ಕೆ ಒಪ್ಪಿಗೆಯೇ ಸಿಗಲಿಲ್ಲ ಎಂದು ಹೇಳಿದರು.

ಕರ್ನಾಟಕವು ಧಾರ್ಮಿಕವಾಗಿಯೂ ಪ್ರೌಢಿಮೆ ತೋರಿದೆ. 12ನೇ ಶತಮಾನದಷ್ಟು ಹಿಂದೆಯೇ ಬಸವಣ್ಣನವರು ದಯೆಯೇ ಧರ್ಮದ ಮೂಲವೆಂದು ಸಾರಿದರು. ಈ ಮಾತು ಸರ್ವಕಾಲಿಕ ಸತ್ಯ. ಕನಕದಾಸರು ಕುಲಕೇಳಿ ಮಣೆ ಹಾಕಬಾರದು ಎಂದು ಹೇಳಿದರು ಎಂದರು. ಈ ಜಿಲ್ಲೆ ಪ್ರವಾಸಿಗಳನ್ನು ಹಾಗೂ ಯಾತ್ರಾರ್ಥಿಗಳನ್ನು ಸೆಳೆಯುವ ಜಿಲ್ಲೆಯಾಗಿದೆ. ಇದಕ್ಕೆ ಪೂರಕವಾದ ಸೂಕ್ತ ಮೂಲ ಸೌಕರ್ಯಗಳ ಅಗತ್ಯವಿದೆ. ತೋಟಗಾರಿಕಾ ವಿಶ್ವವಿದ್ಯಾಲಯದ ನಿರೀಕ್ಷೆಯಲ್ಲಿ ಜನರಿದ್ದಾರೆ. ಚಿತ್ರದುರ್ಗ-ಮಂಗಳೂರು ಹೆದ್ದಾರಿಯ ಬಗ್ಗೆ ಜನ ಕುತೂಹಲಿಗಳಾಗಿದ್ದಾರೆ. ಇದರಿಂದ ಈಗಿನ ಕಡೂರು-ಮಂಗಳೂರು ಮಾರ್ಗದ ಸಂಚಾರದ ಒತ್ತಡ ಕಡಿಮೆ ಮಾಡಲು ಸಾಧ್ಯ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next