Advertisement

ಛತ್ರಪತಿ ಶಿವಾಜಿ ಜಾತ್ಯತೀತ, ಧರ್ಮಾತೀತ ನಾಯಕ

07:29 AM Feb 20, 2019 | |

ಚಿಕ್ಕಬಳ್ಳಾಪುರ: ಉತ್ತಮ ಸಮಾಜ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಛತ್ರಪತಿ ಶಿವಾಜಿ ವಿಶ್ವ ಮಾನವೀಯ ಪ್ರಜ್ಞೆ ಸಾರಿದ ಏಕೈಕ ಅರಸ ಶಿವಾಜಿ ಆಗಿದ್ದು, ಅವರೊಬ್ಬ ಜಾತ್ಯತೀತ ಮತ್ತು ಧರ್ಮಾತೀತ ನಾಯಕರಾಗಿದ್ದರು ಎಂದು ಬೆಂಗಳೂರಿನ ಹಿರಿಯ ಸಾಹಿತಿ ಎಸ್‌.ಜಗನ್ನಾಥ್‌ರಾವ್‌ ಬಹುಳೆ ತಿಳಿಸಿದರು.

Advertisement

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದ ಡಾ.ಬಿ.ಆರ್‌ ಅಂಬೇಡ್ಕರ್‌ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಛತ್ರಪತಿ ಶಿವಾಜಿ ಜಯಂತ್ಯುತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

ತಾಯಿಯೇ ಸ್ಫೂರ್ತಿ: ಶಿವಾಜಿಯು ಅತ್ಯುತ್ತಮ ಆಡಳಿತಗಾರನಾಗಿದ್ದ, ವೀರ, ಶೂರ ಯೋಧನಾಗಿದ್ದ. ಶಿವಾಜಿ ಉತ್ಕೃಷ್ಟವಾದ ಸ್ಥಾನದಲ್ಲಿ ನಿಲ್ಲಕಬೇಕಾದರೆ ಆತನನ್ನು ಪ್ರೇರಣಾ ಶಕ್ತಿಯಾಗಿ ಪ್ರೇರೆಪಿಸಿದ್ದು ತಾಯಿ ಜೀಜಾಬಾಯಿ. ತಾಯಿ ಎಲ್ಲಾ ಸಮಯದಲ್ಲೂ ಶಿವಾಜಿಗೆ ಮಾರ್ಗದರ್ಶನ ನೀಡುತ್ತಿದ್ದಳು. ತಾಯಿಯ ಸ್ಫೂರ್ತಿಯಿಂದಲೇ ಶಿವಾಜಿ ಯಶಸ್ವಿಯಾದ ಎಂದರು. 

ತತ್ವಾದರ್ಶ ಪಾಲಿಸಿ: ಯೋಧನಾಗಿ ಸಮ ಸಮಾಜವನ್ನು ಸೃಷ್ಟಿ ಮಾಡಿದರು. ಶಿವಾಜಿಯ ಆಡಳಿತದಲ್ಲಿ ಮಹಿಳೆಯರಿಗೆ ಹೆಚ್ಚಿನ ಗೌರವ ನೀಡಲಾಗುತ್ತಿತ್ತು. ಶಿವಾಜಿಯ ಜೀವಿತಾವಧಿಯನ್ನು ಈ ಸಂದರ್ಭದಲ್ಲಿ ಸ್ಮರಿಸಿದ ಅವರು, ಸರ್ಕಾರದ ಕೆಲಸ ದೇವರ ಕೆಲಸ ಎಂದು ಹೇಳಲಾಗುತ್ತದೆ. ಅದನ್ನು ಮೊದಲು ಪರಿಪಾಲನೆ ಮಾಡಿದ್ದು ಶಿವಾಜಿ ಮಹಾರಾಜರು. ಇಂತಹ ಮಹಾನ್‌ ನಾಯಕನ ತತ್ವಾದರ್ಶಗಳನ್ನು ಇಂದಿನ ವಿದ್ಯಾರ್ಥಿ ಯುವಪೀಳಿಗೆಗೆ ಪಾಲಿಸಬೇಕಿದೆ ಎಂದರು. 

ಧರ್ಮದ ಸಂಕೋಲೆ: ಶಿವಾಜಿ ಮಹರಾಜರ ತತ್ವಾದರ್ಶಗಳು ಪ್ರಸ್ತುತ ಸಮಾಜಕ್ಕೆ ಅವಶ್ಯಕವಾಗಿದೆ. ವಿಪರ್ಯಾಸ ಎಂದರೆ ಅವರನ್ನು ಧರ್ಮದ ಸಂಕೋಲೆಯಲ್ಲಿ ಬಂಧಿಸುವ ಕೆಲಸ ನಡೆಯುತ್ತಿದೆ. ಸಮಾಜ ಸುಧಾರಕರನ್ನು ಎಂದಿಗೂ ಜಾತಿ, ಧರ್ಮಕ್ಕೆ ಸೀಮಿತಗೊಳಿಸಬಾರದು ಎಂದರು. 

Advertisement

ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಪಂ ಅಧ್ಯಕ್ಷ ಬಿ.ಎಂ.ರಾಮುಸ್ವಾಮಿ, ಛತ್ರಪತಿ ಶಿವಾಜಿ ಪ್ರಸಿದ್ಧ ವೀರ ಯೋಧ, ದಕ್ಷ ಆಡಳಿತಾಧಿಕಾರಿ. ಇಂತಹ ವೀರ ಯೋಧನ ಗುಣಗಳನ್ನು ಇಂದಿನ ಯುವಪೀಳಿಗೆ ತಮ್ಮ ಜೀವದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು. ದೇಶದ ಇತಿಹಾಸದಲ್ಲಿ ಛತ್ರಪತಿ ಶಿವಾಜಿ ಕೊಡುಗೆ ಅವಿಸ್ಮರಣೀಯವಾದದ್ದು ಎಂದರು.

ಪ್ರತಿಭಾ ಪುರಸ್ಕಾರ: ಕಾರ್ಯಕ್ರಮದಲ್ಲಿ 2018ನೇ ಸಾಲಿನಲ್ಲಿ ಪಿ.ಯು.ಸಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಅನಸೂಯ, ಹರ್ಷಿತ ಬಾಯಿ, ಅಶೋಕ್‌ ಬಾಯಿ  ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಎಸ್‌.ಜಗನ್ನಾಥ್‌ರಾವ್‌ ಬಹುಳೆ ಅವರನ್ನು ಜಿಲ್ಲಾಡಳಿತದ ಪರವಾಗಿ ಸನ್ಮಾನಿಸಲಾಯಿತು. 

ನಗರಸಭೆ ಅಧ್ಯಕ್ಷ‌ ಎಂ.ಮುನಿಕೃಷ್ಣ, ತಹಶೀಲ್ದಾರ್‌ ಕೆ.ನರಸಿಂಹಮೂರ್ತಿ, ನಗರಸಭೆ ಆಯುಕ್ತ ಉಮಾಕಾಂತ್‌, ಸಮುದಾಯದ ರಾಜ್ಯ ಅಧ್ಯಕ್ಷ ಗುರುಮೂರ್ತಿ ಜಾಗÌರ್‌, ಜಿಲ್ಲಾ ಅಧ್ಯಕ್ಷ ಲಕ್ಷ್ಮಣ್‌ ರಾವ್‌,  ನಗರಸಭಾ ಸದಸ್ಯರಾದ ನರಸಿಂಹ ಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ವಿಷಯ ಪರೀಕ್ಷಕ ಆಂಜಿನಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ಉಪನಿರ್ದೇಶಕ ಬಿ.ಎಸ್‌.ವೆಂಕಟಾಚಲಪತಿ, ಸಮುದಾಯದ ಮುಖಂಡರು ಇದ್ದರು. 

ಗಮನ ಸೆಳೆದ ಗೊಲ್ಲಹಳ್ಳಿ ಗಾಯನ: ಛತ್ರಪತಿ ಶಿವಾಜಿ ಜಯಂತಿ ಪ್ರಯುಕ್ತ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಗಾಯನ ಕಚೇರಿ ಗಮನ ಸೆಳೆಯಿತು. ಖ್ಯಾತ ಜನಪದ ಕಲಾವಿದರಾದ ಚಿತ್ರ ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್‌ ಹಾಗೂ ಯುವ ಗಾಯಕ ಸ್ವಾರಪಲ್ಲಿ ಚಂದ್ರಶೇಖರ್‌ರವರು ನಡೆಸಿಕೊಟ್ಟ ಗಾಯನ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯಿತು. ಶಿವಪ್ರಸಾದ್‌ರವರ ಕಂಠಸಿರಿಯಲ್ಲಿ ಮೂಡಿ ಬಂದ ಕ್ರಾಂತಿಕಾರಿ ಹೋರಾಟದ ಹಾಡುಗಳು, ಜನಪದ ಗೀತೆಗಳು ನೆರೆದಿದ್ದವರನ್ನು ರಂಜಿಸಿದವು.

Advertisement

Udayavani is now on Telegram. Click here to join our channel and stay updated with the latest news.

Next