Advertisement

ಚೇಸಿಂಗ್‌ ವೈಫ‌ಲ್ಯ; ಎಡವಿದ ಭಾರತ “ಎ’

01:43 AM Jan 25, 2020 | Sriram |

ಕ್ರೈಸ್ಟ್‌ಚರ್ಚ್‌: ಚೇಸಿಂಗ್‌ ವೇಳೆ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ವೈಫ‌ಲ್ಯಕ್ಕೆ ಸಿಲುಕಿದ ಭಾರತ “ಎ’ ಶುಕ್ರವಾರದ ದ್ವಿತೀಯ ಅನಧಿಕೃತ ಏಕದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ “ಎ’ಗೆ 29 ರನ್ನುಗಳಿಂದ ಶರಣಾಗಿದೆ.

Advertisement

ಆರಂಭಕಾರ ಜಾರ್ಜ್‌ ವರ್ಕರ್‌ ಅವರ 135 ರನ್‌ ಸಾಹಸದಿಂದ ಕಿವೀಸ್‌ 7 ವಿಕೆಟಿಗೆ 295 ರನ್‌ ಪೇರಿಸಿದರೆ, ಭಾರತ 9 ವಿಕೆಟಿಗೆ 266 ರನ್‌ ಗಳಿಸಿ ಶರಣಾಯಿತು. ಭಾರತ “ಎ’ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು.

ಬ್ಯಾಟಿಂಗಿಗೆ ಇಳಿಸಲ್ಪಟ್ಟ ಕಿವೀಸ್‌ ನಿರಂತರವಾಗಿ ವಿಕೆಟ್‌ ಉರುಳಿಸಿಕೊಳ್ಳುತ್ತ ಸಾಗಿತಾದರೂ ಜಾರ್ಜ್‌ ವರ್ಕರ್‌ ತಮ್ಮ ಕೆಲಸವನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಿ ತಂಡಕ್ಕೆ ರಕ್ಷಣೆ ಒದಗಿಸಿದರು. 47ನೇ ಓವರ್‌ ತನಕ ಬ್ಯಾಟಿಂಗ್‌ ವಿಸ್ತರಿಸಿದ ವರ್ಕರ್‌ 144 ಎಸೆತಗಳಿಂದ 135 ರನ್‌ ಬಾರಿಸಿದರು. ಈ ಆಕ್ರಮಣಕಾರಿ ಬ್ಯಾಟಿಂಗ್‌ ವೇಳೆ 12 ಬೌಂಡರಿ ಹಾಗೂ ಕಿವೀಸ್‌ ಸರದಿಯ ಆರೂ ಸಿಕ್ಸರ್‌ ಒಳಗೊಂಡಿತ್ತು.

ಕೆಳ ಕ್ರಮಾಂಕದಲ್ಲಿ ಕೋಲ್‌ ಮೆಕೊಂಚಿ 54 ಎಸೆತಗಳಿಂದ 56 ರನ್‌ (8 ಬೌಂಡರಿ), ಜಿಮ್ಮಿ ನೀಶಮ್‌ ಅಜೇಯ 33 ರನ್‌ ಬಾರಿಸಿ ತಂಡದ ಮೊತ್ತವನ್ನು ಮುನ್ನೂರರ ಗಡಿ ತನಕ ತಂದು ನಿಲ್ಲಿಸಿದರು. 25ನೇ ಓವರ್‌ ವೇಳೆ ಆತಿಥೇಯರ ಸ್ಕೋರ್‌ 5 ವಿಕೆಟಿಗೆ ಕೇವಲ 109 ರನ್‌ ಆಗಿತ್ತು.

ಅಗ್ರ ಸರದಿಯ ಕುಸಿತ
ದೊಡ್ಡ ಮೊತ್ತವನ್ನು ಬೆನ್ನಟ್ಟುವ ಹಾದಿಯಲ್ಲಿ ಪೃಥ್ವಿ ಶಾ (2), ರುತುರಾಜ್‌ ಗಾಯಕ್ವಾಡ್‌ (17) ವಿಕೆಟ್‌ಗಳನ್ನು ಭಾರತ ಬೇಗನೆ ಕಳೆದುಕೊಂಡಿತು. ನಾಯಕ ಮಾಯಾಂಕ್‌ ಅಗರ್ವಾಲ್‌ (37), ಸೂರ್ಯಕುಮಾರ್‌ ಯಾದವ್‌ (20) ಅವರಿಂದಲೂ ಹೆಚ್ಚಿನ ನೆರವು ಲಭಿಸಲಿಲ್ಲ.

Advertisement

ಮಧ್ಯಮ ಕ್ರಮಾಂಕದಲ್ಲಿ ಇಶಾನ್‌ ಕಿಶನ್‌ (44), ವಿಜಯ್‌ ಶಂಕರ್‌ (41) ಮತ್ತು ಕೃಣಾಲ್‌ ಪಾಂಡ್ಯ (51) ಉತ್ತಮ ಹೋರಾಟ ಸಂಘಟಿಸಿದರು. ಆದರೆ ತಂಡವನ್ನು ದಡ ಮುಟ್ಟಿಸುವಲ್ಲಿ ವಿಫ‌ಲರಾದರು. ಭಾರತದ ಸರದಿಯ ಏಕೈಕ ಅರ್ಧ ಶತಕ ಪಾಂಡ್ಯ ಅವರಿಂದ ದಾಖಲಾಯಿತು.

ಸಂಕ್ಷಿಪ್ತ ಸ್ಕೋರ್‌
ನ್ಯೂಜಿಲ್ಯಾಂಡ್‌ “ಎ’-7 ವಿಕೆಟಿಗೆ 295 (ವರ್ಕರ್‌ 135, ಮೆಕೊಂಚಿ 56, ನೀಶಮ್‌ 33, ಪೊರೆಲ್‌ 50ಕ್ಕೆ 3, ಸಿರಾಜ್‌ 73ಕ್ಕೆ 2). ಭಾರತ “ಎ’-9 ವಿಕೆಟಿಗೆ 266 (ಪಾಂಡ್ಯ 51, ಇಶಾನ್‌ 44, ಶಂಕರ್‌ 41, ಅಗರ್ವಾಲ್‌ 37, ಪಟೇಲ್‌ 24, ನೀಶಮ್‌ 24ಕ್ಕೆ 2, ಡಫಿ 35ಕ್ಕೆ 2, ಜಾಮೀಸನ್‌ 69ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next