ರಾಜ್‌ಕೋಟ್: ತಮಿಳುನಾಡು ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಕೂಟದ ಸೆಮಿಫೈನಲ್ ಪಂದ್ಯದಲ್ಲಿ ಸ್ಪಷ್ಟ ಗೆಲುವು ದಾಖಲಿಸಲು ಮುಂಬಯಿ ತಂಡಕ್ಕೆ 251 ರನ್ ಗಳಿಸುವ ಗುರಿ ಪಡೆದಿದೆ. ಇದಕ್ಕುತ್ತರವಾಗಿ ಮುಂಬಯಿ ನಾಲ್ಕನೇ ದಿನದಾಟದ ಅಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೇ 5 ರನ್ ಗಳಿಸಿದೆ.
ಅಂತಿಮ ದಿನದ ಆಟ ಬಾಕಿ ಉಳಿದಿದ್ದು ಮುಂಬಯಿ ಜಯ ಸಾಧಿಸಲು ಇನ್ನು 246 ರನ್ ಗಳಿಸಬೇಕಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿರುವ ಮುಂಬಯಿಗೆ ಈ ಸವಾಲು ಕಠಿನವಲ್ಲದಿದ್ದರೂ ಗೆಲ್ಲುವ ಆತುರದಲ್ಲಿ ವಿಕೆಟ್ ಕಳೆದುಕೊಳ್ಳುವುದನ್ನು ನೋಡಬೇಕಾಗಿದೆ. ಪಂದ್ಯವನ್ನು ಡ್ರಾಮಾಡಿಕೊಂಡರೂ ಮುಂಬಯಿ ಫೈನಲಿಗೇರಲಿದೆ.
ಮುಂಬಯಿ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ್ದರಿಂದ ಈ ಪಂದ್ಯದಲ್ಲಿ ಸ್ಪಷ್ಟ ಜಯ ಸಾಧಿಸರಷ್ಟೇ ತಮಿಳುನಾಡು ಫೈನಲಿಗೇರುವ ಅವಕಾಶವಿದೆ. ಇದಕ್ಕಾಗಿ ನಾಲ್ಕನೇ ದಿನ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬಿರುಸಿನ ಆಟವಾಡಿದ ತಮಿಳುನಾಡು 6 ವಿಕೆಟಿಗೆ 356 ರನ್ ಪೇರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳಲು ನಿರ್ಧರಿಸಿತಲ್ಲದೇ ಮುಂಬಯಿ ಗೆಲುವಿಗೆ 251 ರನ್ ಗುರಿ ನಿಗದಿಪಡಿಸಿತು.
ಮುಂಬಯಿ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬಹಳ ಎಚ್ಚರಿಕೆಯಿಂದ ಆಡಿತು. ನಾಲ್ಕನೇ ದಿನ ಉಳಿದ ಐದು ಓವರನ್ನು ಜಾಗ್ರತೆ ವಹಿಸಿ ಆಡಿದ ಮುಂಬಯಿಯ ಆರಂಭಿಕರು ಕೇವಲ 5 ರನ್ ಗಳಿಸಿದರು. ಅಂತಿಮ ದಿನವಾದ ಗುರುವಾರ ಮುಂಬಯಿ ದಿನವಿಡೀ ಆಡಿ ಗೆಲ್ಲಲು 246 ರನ್ ಗಳಿಸಬೇಕಾಗಿದೆ. ಪಂದ್ಯ ಡ್ರಾ ಮಾಡಿಕೊಂಡರೆ ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಮುಂಬಯಿ ಫೈನಲಿಗೇರಲಿದೆ.
ಈ ಮೊದಲು ಬೆಳಗ್ಗೆ ತನ್ನ ದ್ವಿತೀಯ ಇನ್ನಿಂಗ್ಸ್ ಆಡಿದ ತಮಿಳುನಾಡು ಬಿರುಸಿನ ಆಟವಾಡಿತು. ಮೊದಲ ವಿಕೆಟಿಗೆ ಗಂಗ ಶ್ರೀಧರ್ ರಾಜು ಮತ್ತು ಅಭಿನವ್ ಮುಕುಂದ್ 64 ರನ್ ಪೇರಿಸಿದರು. ರಾಜು ಔಟಾದ ಬಳಿಕ ಅಭಿನವ್ ಅವರನ್ನು ಸೇರಿಕೊಂಡ ಬಾಬಾ ಇಂದ್ರಜಿತ್ ರನ್‌ವೇಗವನ್ನು ಹೆಚ್ಚಿಸಿದರು. ಮುಂಬಯಿ ತಂಡವನ್ನು ದಿಟ್ಟವಾಗಿ ಎದುರಿಸಿದ ಅವರಿಬ್ಬರು ದ್ವಿತೀಯ ವಿಕೆಟಿಗೆ 185 ರನ್ ಪೇರಿಸಿದರು. ಇಬ್ಬರೂ ಶತಕ ಸಿಡಿಸಿ ಸಂಭ್ರಮಿಸಿದರು. ಮುಕುಂದ್ 122 ರನ್ ಗಳಿಸಿದರೆ ಇಂದ್ರಜಿತ್ 138 ರನ್ ಗಳಿಸಿದರು. ಅಂತಿಮವಾಗಿ ತಂಡ 356 ರನ್ ತಲುಪಿದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ಸಂಕ್ಷಿಪ್ತ ಸ್ಕೋರು: ತಮಿಳುನಾಡು 305 ಮತ್ತು 6 ವಿಕೆಟಿಗೆ 356 ಡಿಕ್ಲೇರ್x (ಗಂಗ ಶ್ರೀಧರ್ ರಾಜು 28, ಅಭಿನವ್ ಮುಕುಂದ್ 122, ಬಾಬಾ ಇಂದ್ರಜಿತ್ 138, ದಿನೇಶ್ ಕಾರ್ತಿಕ್ 24, ವಿಜಯ್ ಶಂಕರ್ 24, ಬಲ್ವಿಂದರ್ ಸಂಧು 67ಕ್ಕೆ 2, ವಿಜಯ್ ಗೋಹಿಲ್ 110ಕ್ಕೆ 2); ಮುಂಬಯಿ 411 ಮತ್ತು ವಿಕೆಟ್ ನಷ್ಟವಿಲ್ಲದೇ 5.