“ಚೇಸ್’ ಎಂಬ ಸಿನಿಮಾವೊಂದು ಆರಂಭವಾಗಿರುವ ಸುದ್ದಿಯನ್ನು ನೀವು ಕೇಳಿರಬಹುದು. ಆರಂಭವಾಗಿದ್ದು ಬಿಟ್ಟರೆ ಮಿಕ್ಕಂತೆ ಆ ಸಿನಿಮಾ ಏನಾಯಿತು, ಯಾವ ಹಂತದಲ್ಲಿದೆ ಎಂಬ ಮಾಹಿತಿ ಇರಲಿಲ್ಲ. ಆದರೆ, ಈಗ ಚಿತ್ರತಂಡ ಚಿತ್ರೀಕರಣ ಮುಗಿಸಿ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ ಹಂತವಾಗಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರಾದ ಭಗವಾನ್ ,ಬರಗೂರು ರಾಮಚಂದ್ರಪ್ಪ, ಸಾಯಿಪ್ರಕಾಶ್ ಚಿತ್ರದ ಟೀಸರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು.
ಈ ಚಿತ್ರವನ್ನು ವಿಲೋಕ್ ಶೆಟ್ಟಿ ನಿರ್ದೇಶಿಸಿದ್ದಾರೆ. ಇದೊಂದು ಕ್ರೈಮ್ ಥ್ರಿಲ್ಲರ್ ಸಿನಿಮಾವಾಗಿದ್ದು,
ಚಿತ್ರದಲ್ಲಿ ಸಾಕಷ್ಟು ಮಂದಿ ಕಲಾವಿದರು ನಟಿಸಿದ್ದಾರೆ. ಅವರೆಲ್ಲರ ಡೇಟ್ಸ್ ಹೊಂದಿಸಿ ಚಿತ್ರೀಕರಣ ಮಾಡಬೇಕಾಗಿದ್ದರಿಂದ ಚಿತ್ರ ಸ್ವಲ್ಪ ತಡವಾಯಿತು ಎಂದರು. ಮಹಿಳೆಯರು ರಾತ್ರಿ ಹೊತ್ತು ಕ್ಯಾಬ್ನಲ್ಲಿ ಪ್ರಯಾಣಿಸೋದು ಎಷ್ಟು ಸೇಫ್ ಎಂಬ ವಿಷಯವನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಚಿತ್ರದಲ್ಲಿ ಥ್ರಿಲ್ಲರ್ ಅಂಶಗಳು ಹೆಚ್ಚಿರುವುದರಿಂದ ಪ್ರೇಕ್ಷಕ ಇಷ್ಟಪಡುತ್ತಾನೆ ಎಂಬ ವಿಶ್ವಾಸ ವಿಲೋಕ್ ಶೆಟ್ಟಿಯವರದು. ಈ ಚಿತ್ರವನ್ನು ಸಿಂಪ್ಲಿಫನ್ ಮೀಡಿಯಾ ನೆಟ್ವರ್ಕ್ ಮೂಲಕ ಮನೋಹರ್, ಪ್ರದೀಪ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ನಿರ್ಮಿಸಿದ್ದಾರೆ.
ಚಿತ್ರದಲ್ಲಿ ರಾಧಿಕಾ ನಾರಾಯಣ್, ಅವಿನಾಶ್ ನರಸಿಂಹರಾಜು, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಅರವಿಂದ್ ರಾವ್ ಪ್ರಮೋದ್ ಶೆಟ್ಟಿ, ರಾಜೇಶ್ ನಟರಂಗ, ರೆಹಮಾನ್ ಹಾಗೂ ಬಾಲಿವುಡ್ನ ಎಬಿಸಿಡಿ ಚಿತ್ರದಲ್ಲಿ ನಟಿಸಿದ ಸುಶಾಂತ್ ಪೂಜಾರಿ ನಟಿಸಿದ್ದಾರೆ. ರಾಧಿಕಾ ನಾರಾಯಣ್ ಅವರಿಗೆ ಈ ಚಿತ್ರದಲ್ಲಿ ಹೊಸ ಬಗೆಯ ಪಾತ್ರ ಸಿಕ್ಕಿದೆಯಂತೆ. ಪೊಲೀಸ್ ಇನ್ಸ್ಪೆಕ್ಟರ್ ತರಬೇತಿ ಪಡೆಯುತ್ತಿರುವ ಯುವತಿಯ ಪಾತ್ರದಲ್ಲಿ ರಾಧಿಕಾ ಕಾಣಿಸಿಕೊಂಡಿದ್ದಾರಂತೆ. ಬಹುತೇಕ ಸಿನಿಮಾಗಳಲ್ಲಿ ಪೊಲೀಸ್ ಆಫಿಸರ್ ಆಗಿ ನಟಿಸಿರುವ ಅರವಿಂದ್ ರಾವ್ ಅವರಿಗೆ ಈ ಚಿತ್ರದಲ್ಲಿ ಡಾಕ್ಟರ್ ಪಾತ್ರ ಸಿಕ್ಕಿದೆಯಂತೆ. ಜೊತೆಗೆ ಚಿತ್ರದ ಕಥಾವಸ್ತು ಹಾಗೂ ನಿರೂಪಣೆ ಹೊಸ ಬಗೆಯಿಂದ ಕೂಡಿದೆ ಎಂಬುದು ಅವರ ಮಾತು. ರೆಹಮಾನ್ ಇಲ್ಲಿ ಪೊಲೀಸ್ ಆಫಿಸರ್ ಆಗಿ ಕಾಣಿಸಿಕೊಂಡಿದ್ದಾರೆ.ರಾಜೇಶ್ ನಟರಂಗ ಕೂಡಾ ಈ ಚಿತ್ರದಲ್ಲಿ ಒಂದು ಪಾತ್ರ ಮಾಡಿದ್ದು, ಚಿತ್ರದ ಮೇಲೆ ಅವರಿಗೆ ಭರವಸೆ ಇದೆಯಂತೆ.