Advertisement

ಶ್ರವಣ ಬೆಳಗೊಳದ ಕೀರ್ತಿ ಮುಗಿಲೆತ್ತರಕ್ಕೇರಿಸಿದ ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

08:56 PM Mar 23, 2023 | Team Udayavani |

ಹಾಸನ: ವೈರಾಗ್ಯ ಮೂರ್ತಿ ಶ್ರೀ ಗೊಮ್ಮಟೇಶ್ವರನ ನೆಲೆವೀಡು ಶ್ರವಣಬೆಳಗೊಳದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟಕ್ಕೆ ಏರಿಸುವ ಮೂಲಕ ದೇಶದ ಪ್ರಮುಖ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕೇಂದ್ರವನ್ನಾಗಿ ರೂಪಿಸಿದ ಹೆಗ್ಗಳಿಕೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರದು.

Advertisement

ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಪೂರ್ವಾಶ್ರಮದ ಹೆಸರು ರತ್ನವರ್ಮ. 1949 ಮೇ 3 ರಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ, ಕಾರ್ಕಳ ತಾಲೂಕಿನ ವರಂಗ ಗ್ರಾಮದ ಉಪಾಧ್ಯಾಯ ಮನೆತನದಲ್ಲಿ ಜನಿಸಿದರು.

1969 ಡಿ.12ರಂದು 20ನೇ ವಯಸ್ಸಿನಲ್ಲಿಯೇ ಸನ್ಯಾಸ ದೀಕ್ಷೆ ಸ್ವೀರಿಸಿದ್ದ ಅವರು 1970 ರ ಏ.19 ರಂದು ಶ್ರವಣಬೆಳಗೊಳ ಜೈನ ಮಠದ ಪೀಠಾರೋಹಣ ಮಾಡಿದರು. 53 ವರ್ಷಗಳ ಕಾಲ ಜೈನಮಠ ಪೀಠಾಧ್ಯಕ್ಷರಾಗಿ, ಜೈನಧರ್ಮ ಪ್ರಚಾರದೊಂದಿಗೆ “ಅಹಿಂಸೆಯಿಂದ ಸುಖ’ ಎಂಬ ಸಂದೇಶ ಸಾರುವ ಕಾಯಕ ಯೋಗಿಯಾಗಿ ಶ್ರವಣಬೆಗೊಳದ ಸಂತನೆಂದೇ ಖ್ಯಾತರಾಗಿದ್ದರು.

ಜೈನಧರ್ಮದ ಸಂದೇಶಗಳ ಪ್ರಚಾರದ ಜತೆಗೆ ಪ್ರಗತಿಪರ ಹಾಗೂ ವೈಜ್ಞಾನಿಕ ಆವಿಷ್ಕಾರಗಳನ್ನು ಬೆಂಬಲಿಸುತ್ತಾ ಬಂದಿದ್ದ ಸ್ವಾಮೀಜಿಯವರು ಶಿಕ್ಷಣ, ಸಾಹಿತ್ಯ ಕ್ಷೇತ್ರಕ್ಕೂ ಕೊಡುಗೆ ನೀಡಿದ್ದರು. ತತ್ವಶಾಸ್ತ್ರದಲ್ಲಿ ಮೈಸೂರು ವಿವಿಯಿಂದ ಸ್ನಾತಕೋತ್ತರ ಪದವಿ, ಇತಿಹಾಸ ವಿಷಯದಲ್ಲಿ ಬೆಂಗಳೂರು ವಿವಿ ಸ್ನಾತಕೋತ್ತರ ಪದವೀಧರರಾಗಿದ್ದ ಸ್ವಾಮೀಜಿ ಕನ್ನಡ, ಸಂಸ್ಕೃತ, ಪ್ರಾಕೃತ ಭಾಷೆಯಲ್ಲೂ ಸ್ನಾತಕೋತ್ತರ ಪದವಿ ಪಡೆದಿದ್ದರು.

ಕನ್ನಡ, ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದ ಸ್ವಾಮೀಜಿಯವರು ಪ್ರಖಂಡ ಪಂಡಿತರು ಉತ್ತಮ ವಾಗ್ಮಿಗಳೂ ಆಗಿದ್ದರು.

Advertisement

ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದ್ದ ಶ್ರವಣಬೆಳಗೊಳವನ್ನು ಶೈಕ್ಷಣಿಕ ಕೇಂದ್ರವನ್ನಾಗಿಯೂ ರೂಪಿಸುವ ಕನಸು ಸ್ವಾಮೀಜಿಯವರದಾಗಿತ್ತು. ಆ ನಿಟ್ಟಿನಲ್ಲಿ ಶ್ರವಣಬೆಳಗೊಳದಲ್ಲಿ ಜೈನ ಮಠದಿಂದಲೇ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಪಾಲಿಟೆಕ್ನಿಕ್‌ ಮತ್ತು ಎಂಜಿನಿಯರಿಂಗ್‌ ಕಾ ಲೇಜು, ನರ್ಸಿಂಗ್‌ ಕಾಲೇಜು ನಿರ್ಮಾಣ ಮಾಡಿದ್ದರು. ಸಂಸ್ಕೃತಕ್ಕಿಂತ ಲೂ ಪ್ರಾಚೀನ ಭಾಷೆಯಾಗಿದ್ದ ಪ್ರಾಕೃತ ಭಾಷೆ ಪುನರುಜ್ಜೀವನಕ್ಕೆ ಪಣ ತೊಟ್ಟಂತೆ ನಡೆದುಕೊಂಡಿದ್ದ ಸ್ವಾಮೀಜಿವರು ಶ್ರವಣಬೆಳಗೊಳದಲ್ಲಿ ಪ್ರಾಕೃತ ವಿವಿ ಸ್ಥಾಪನೆ ಮಾಡುವ ಕನಸು ಕಂಡಿದ್ದರು. ಆ ಕನಸು ಸಾಕಾರ ದ ಪೂರ್ವಭಾಗಿಯಾಗಿ ಪ್ರಾಕೃತ ಜ್ಞಾನ ಭಾರತ ಟ್ರಸ್ಟ್‌ ರಚನೆ ಮಾಡಿ ಆ ಮೂಲಕ ಶ್ರವಣಬೆಳಗೊಳದಲ್ಲಿ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಸ್ಥಾಪಿಸಿ ಪ್ರಾಕೃತ ಗ್ರಂಥಗಳ ಕನ್ನಡ ಅನುವಾದದ ಧವಲ ಗ್ರಂಥಗಳನ್ನು 10 ಸಂಪುಟಗಳಲ್ಲಿ ಪ್ರಕಟಿಸುವ ಮಹತ್ಕಾರ್ಯವನ್ನೂ ಮಾಡಿದ್ದಾರೆ.

ವೈರಾಗ್ಯ ಮೂರ್ತಿ ಶ್ರೀ ಗೊಮ್ಮಟೇಶ್ವರನ ನೆಲೆವೀಡು ಶ್ರವಣಬೆಳಗೊಳವನ್ನು ವಿಶ್ವಮಟ್ಟದಲ್ಲಿ ಪರಿಚಯಿಸುವ ಮೂಲಕ ಜೈನಧರ್ಮದ ಸಾರವನ್ನು ಜಗತ್ತಿಗೆ ಪರಿಚಯಿಸುವ ಕಾಯಕದ ಜೊತೆಗೆ ಪ್ರಮುಖ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕೇಂದ್ರವಾಗಿ ರೂಪಿಸಿದ ಹೆಗ್ಗಳಿಕೆಯೂ ಸ್ವಾಮೀಜಿಯವರದ್ದು, ಶ್ರೀ ಕ್ಷೇತ್ರ ಶ್ರವಣಬೆಳಗೊಳಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಮೂಲ ಸೌಕರ್ಯಗಳ ಕೊರತೆಯಿಲ್ಲದಂತೆ ಶ್ರವಣಬೆಳಗೊಳದಲ್ಲಿಯೇ ಯಾತ್ರಿ ನಿವಾಸ, ಅತಿಗಣ್ಯತರ ಅತಿಥಿಗೃಹ , ಜೈನ ಸಮುದಾಯದವರಿಂದಲೇ ಅತಿಥಿಗೃಹಗಳ ನಿರ್ಮಾಣ ಮಾಡಿಸಿದ್ದರು.
ಆರೋಗ್ಯ ಸೇವೆಗೂ ಒತ್ತು ನೀಡುತ್ತಾ ಬಂದಿದ್ದ ಸ್ವಾಮೀಜಿಯವರು ಶ್ರವಣಬೆಳಗೊಳದಲ್ಲಿ ಆಯುರ್ವೇದ ಆಸ್ಪತ್ರೆ, ಸುಸಜ್ಜಿತ ಮಕ್ಕಳ ಆಸ್ಪತ್ರೆ ನಿರ್ಮಿಸುವುದರ ಜೊತೆಗೆ ಶ್ರವಣಬೆಳಗೊಳ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ನೆರವಾಗಲು ಸಂಚಾರಿ ಆಸ್ಪತ್ರೆಯ ವ್ಯವಸ್ಥೆಯನ್ನೂ ಮಾಡಿದ್ದರು.

ಇಂದಿರಾ ಗಾಂಧಿ ನೀಡಿದ್ದ ಕರ್ಮಯೋಗಿ : ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಪೀಠಾರೋಹಣ ಮಾಡಿದ್ದ 10 ವರ್ಷಗಳಲ್ಲಿಯೇ ಶ್ರೀ ಗೊಮ್ಮಟೇಶಮೂರ್ತಿಯ ಸಹಸ್ರಾಬ್ಧಿ ಮಹಾಮಸ್ತಕಾಭಿಷೇಕ ನಡೆಸುವ ಅವಕಾಶ ಸಿಕ್ಕಿತ್ತು. ಅಂದಿನ ಮಹಾಮಸ್ತಕಾಭಿಷೇಕಕ್ಕೆ ಅಂದಿನ ಪ್ರಧಾನಿ ಇಂದಿರಾಗಾಂಧಿಯವರನ್ನು ಆಹ್ವಾನಿಸಿದ್ದ ಸ್ವಾಮೀಜಿಯವರು ವಿಂಧ್ಯಗಿರಿಯ ತುತ್ತ ತುದಿಯಲ್ಲಿರುವ ವಿಶ್ವವಿಖ್ಯಾತ ಶ್ರೀ ಗೊಮ್ಮಟೇಶ ಮೂರ್ತಿಗೆ ಹೆಲಿಕಾಪ್ಟರ್‌ ಮೂಲಕ ಪುಷ್ಪವೃಷ್ಟಿ ಮಾಡಿಸಿದ್ದರು. ಆ ಮಹಾಮಸ್ತಕಾಭಿಷೇಕವನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಸ್ವಾಮೀಜಿಯವರಿಗೆ ಇಂದಿರಾಗಾಂಧಿಯವರು ಕರ್ಮಯೋಗಿ ಎಂದು ಬಿರುದು ನೀಡಿದ್ದರು. ಆನಂತರದ ಮೂರು ( 1993, 2006 ಮತ್ತು 2018 ) ಮಹಾಮಸ್ತಕಾಭಿಷೇಕಗಳನ್ನೂ ವಿಜೃಂಭಣೆಯೊಂದಿಗೆ ಯಶಸ್ವಿಗೊಳಿಸಿ ಮೈಚ್ಚುಗೆಗೆ ಪಾತ್ರರಾಗಿದ್ದರು.

ಮಹಾಮಸ್ತಕಾಭಿಷೇಕದ ಗಾಯ
2018ರ ಫೆಬ್ರವರಿಯಲ್ಲಿ ನಡೆದ ಮಹಾಮಸ್ತಕಾಭಿಷೇಕದ ಸಂದರ್ಭ ದಲ್ಲಿ ಸ್ವಾಮೀಜಿಯವರ ಕಾಲಿಗೆ ಗಾಯವಾಗಿತ್ತು. ಅದು ಪೂರ್ಣವಾಗಿ ವಾಸಿಯಾಗಲೇ ಇಲ್ಲ. ಅಂದಿನಿಂದಲೇ ಅವರ ಆರೋಗ್ಯ ಹದಗೆಡುತ್ತಾ ಬಂದಿತ್ತು. ಕಳೆದ 6 ತಿಂಗನಿಂದ ಅವರ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಾ ಬಂದಿ ತ್ತು. ಚಿಕಿತ್ಸೆ ನಿರಾಕರಿಸುತ್ತಲೇ ಬಂದಿದ್ದ ಸ್ವಾಮೀಜಿಯವರು ಸಲ್ಲೇಖನ ವ್ರತ ಆಚರಣೆಯಲ್ಲಿದ್ದರು. ಗುರುವಾರ ಮುಂಜಾನೆ ಅವರ ನಿವಾಸದಲ್ಲಿ ಯೇ ಕಾಲು ಜಾರಿ ಬಿದ್ದವರು ಮತ್ತೆ ಏಳಲೇ ಇಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next