Advertisement
ಆಷಾಢಮಾಸದ ಮೂರನೇ ಶುಕ್ರವಾರದಂದು ನಡೆದ ಚಾಮುಂಡೇಶ್ವರಿ ಅಮ್ಮನವರ ಜನ್ಮೋತ್ಸವದ ಹಿನ್ನೆಲೆಯಲ್ಲಿ ವಿವಿಧ ಭಾಗಗಳಿಂದ ಆಗಮಸಿದ್ದ ಭಕ್ತರು ಅಧಿದೇವತೆ ದರ್ಶನ ಪಡೆದು ಪುನೀತರಾದರು. ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ್ ಒಡೆಯರ್, ತ್ರಿಷಿಕಾ ಕುಮಾರಿ ಸೇರಿದಂತೆ ಸಚಿವ ಎಚ್.ಡಿ.ರೇವಣ್ಣ ದಂಪತಿ ಬೆಟ್ಟಕ್ಕೆ ಆಗಮಿಸಿ ದೇವಿ ದರ್ಶನ ಪಡೆದರು.
Related Articles
Advertisement
ಬಳಿಕ ನಗರ ಪೊಲೀಸ್ ವತಿಯಿಂದ ಗೌರವ ವಂದನೆ ಸಲ್ಲಿಸುತ್ತಿದ್ದಂತೆ ರಾಜವಂಶಸ್ಥರಾದ ಡಾ. ಪ್ರಮೋದಾದೇವಿ ಒಡೆಯರ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾಕುಮಾರಿ ಚಿನ್ನದ ಪಲ್ಲಕ್ಕಿ ಉತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಬಳಿಕ ರಾಜವಂಶಸ್ಥರು, ಗಣ್ಯರು ಹಾಗೂ ಸಹಸ್ರಾರು ಭಕ್ತರೊಂದಿಗೆ ಚಿನ್ನದ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪನೆಗೊಂಡಿದ್ದ ದೇವಿಯ ಉತ್ಸವ ಮೂರ್ತಿಯನ್ನು ದೇವಸ್ಥಾನದ ಸುತ್ತಲೂ ಒಂದು ಸುತ್ತಿನ ಪ್ರದಕ್ಷಿಣೆ ಹಾಕಿಸಲಾಯಿತು.
ಭಕ್ತರ ಹರ್ಷೋದ್ಘಾರ: ಒಂದೆಡೆ ಭಕ್ತರು ದೇವಸ್ಥಾನದಲ್ಲಿ ದೇವರ ದರ್ಶನ ಪಡೆಯುತ್ತಿದ್ದರೆ, ಮತ್ತೂಂದೆಡೆ ಚಿನ್ನದ ಪಲ್ಲಕ್ಕಿ ಉತ್ಸವ ನೋಡಲು ಸಹಸ್ರಾರು ಭಕ್ತಾದಿಗಳು ಸಾಲುಗಟ್ಟಿ ನಿಂತಿದ್ದರು. ಉತ್ಸವದಲ್ಲಿ ಅಶ್ವಾರೋಹಿ ಪಡೆ, ದೇವಸ್ಥಾನದ ಬಿರುದು ಬಾವಲಿ, ಮಂಗಳವಾದ್ಯದವರು ಮಂತ್ರಘೋಷ ಮೊಳಗಿಸಿ ಮುಂದೆ ಸಾಗುತ್ತಿದ್ದರೆ, ಅದರ ಹಿಂದೆ ಚಿನ್ನದ ಪಲ್ಲಕ್ಕಿಯ ಮೆರವಣಿಗೆ ಸಾಗಿತು.
ಇನ್ನೂ ಉತ್ಸವದಲ್ಲಿ ಭಾಗವಹಿಸಿದ್ದ ಭಕ್ತರು ಚಾಮುಂಡಿದೇವಿಗೆ ಜಯ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಉತ್ಸವದ ವೇಳೆ ಯಾವುದೇ ನೂಕುನುಗ್ಗಲು ಉಂಟಾಗದಂತೆ ದೇವಸ್ಥಾನದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಉಳಿದಂತೆ ವರ್ಧಂತಿ ಅಂಗವಾಗಿ ರಾತ್ರಿ 8.30ಕ್ಕೆ ದೇವಿಗೆ ಉತ್ಸವ ಫಲಪೂಜೆ, ದರ್ಬಾರ್ ಉತ್ಸವ, ಮಂಟಪೋತ್ಸವ, ರಾಷ್ಟ್ರಾಶೀರ್ವಾದ ಜರುಗಿತು.
ಆಷಾಢದ ಸಂಭ್ರಮ: ಬೆಟ್ಟದಲ್ಲಿ ಅಮ್ಮನವರ ಜನ್ಮೋತ್ಸವದ ಜತೆಗೆ ಆಷಾಢ ಶುಕ್ರವಾರದ ಸಂಭ್ರಮವೂ ಮನೆ ಮಾಡಿತ್ತು. ಮೂರನೇ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಬೆಂಗಳೂರಿನ ಎಸ್‌ಎಫ್ಎಸ್ ಸತ್ಯನಾರಾಯಣ ಫ್ಲವರ್ ಡೆಕೋರೇಟರ್‌ರಿಂದ ದೇವಸ್ಥಾನದ ಒಳಗೆ ವಿಶೇಷ ಹೂವಿನ ಅಲಂಕಾರ ಹಾಗೂ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಗರ್ಭಗುಂಡಿಯಿಂದ ಹೊರಗಿವರಿಗೂ ಮಾಡಿದ್ದ ವಿಶೇಷ ಹೂವಿನ ಅಲಂಕಾರ ನೋಡುಗರ ಗಮನ ಸೆಳೆಯಿತು.
ಭಕ್ತರ ಜನಸಾಗರ: ವರ್ಧಂತಿ ಹಾಗೂ ಮೂರನೇ ಆಷಾಢ ಶುಕ್ರವಾರದ ಪ್ರಯುಕ್ತ ಚಾಮುಂಡಿಬೆಟ್ಟಕ್ಕೆ ಭಕ್ತರ ಜನಸಾಗರವೇ ಹರಿದು ಬಂದಿತು. ಲಲಿತಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದ ಭಕ್ತರು ಮುಂಜಾನೆ 2 ಗಂಟೆಯಿಂದಲೇ ಬೆಟ್ಟಕ್ಕೆ ಆಗಮಿಸಿದ್ದರಿಂದಾಗಿ ದೇವರ ದರ್ಶನಕ್ಕೆ ಅವಕಾಶ ನೀಡುವ ಹೊತ್ತಿಗೆ ಭಾರೀ ಸಂಖ್ಯೆಯಲ್ಲಿ ಜನರು ಸಾಲುಗಟ್ಟಿ ನಿಂತಿದ್ದರು.
ಇನ್ನೂ ದೇವಿಯ ಚಿನ್ನದ ಪಲ್ಲಕ್ಕಿ ಉತ್ಸವ ನಡೆದ ಸಂದರ್ಭದಲ್ಲೂ ದೇವಸ್ಥಾನ ಸುತ್ತಲೂ ಅಸಂಖ್ಯಾತ ಭಕ್ತರು ನೆರೆದಿದ್ದರು. ಇನ್ನೂ ಕೆಲವು ಭಕ್ತರು 1001 ಮೆಟ್ಟಿಲ ಮೂಲಕ ಬೆಟ್ಟಕ್ಕೆ ಆಗಮಿಸಿದ್ದರು. ಹೀಗಾಗಿ ಕಿಕ್ಕಿರಿದು ತುಂಬಿದ್ದ ಭಕ್ತರನ್ನು ನಿಯಂತ್ರಿಸಲು ಪೊಲೀಸರು ಕೆಲಕಾಲ ಪರದಾಡುವಂತಾಯಿತು.
ಗಣ್ಯರಿಂದ ದರ್ಶನ: ವರ್ಧಂತಿ ಹಿನ್ನೆಲೆಯಲ್ಲಿ ಅನೇಕ ಗಣ್ಯರು ಆಗಮಿಸಿ ದೇವರ ದರ್ಶನ ಪಡೆದರು. ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಪತ್ನಿ ಭವಾನಿ ರೇವಣ್ಣ, ಅರಣ್ಯ ಸಚಿವ ಎಸ್.ಶಂಕರ್, ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಸೇರಿದಂತೆ ಹಲವು ಶಾಸಕರು, ವಿವಿಧ ಜಿಲ್ಲೆಗಳ ಜಿಪಂ ಅಧ್ಯಕ್ಷರು ಬೆಟ್ಟಕ್ಕೆ ತೆರಳಿ ದೇವಿಯ ದರ್ಶನ ಪಡೆದರು.