Advertisement

ಚಾರ್ಮಾಡಿ, ಕೊಕ್ಕಡ ಆರೋಗ್ಯ ಕೇಂದ್ರಕ್ಕೆ ಬೇಕಿದೆ ಶೀಘ್ರ ಕಾಯಕಲ್ಪ

10:11 PM Nov 08, 2020 | mahesh |

ಬೆಳ್ತಂಗಡಿ: ಗ್ರಾಮೀಣ ಪ್ರದೇಶದ ಹತ್ತಾರು ಹಳ್ಳಿಗಳ ಜನಸಾಮಾನ್ಯರಿಗೆ ತುರ್ತು ಆರೋಗ್ಯ ಸೇವೆ ಒದಗಿಸಲು ಸರಕಾರವು ಸ್ಥಳೀಯವಾಗಿ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೇನೊ ಮುಂದಾಗಿದೆ. ಆದರೆ ಸಮಯಕ್ಕೆ ಸರಿಯಾಗಿ ಅನುದಾನ ಬಿಡುಗಡೆ ಮಾಡದಿರುವುದರಿಂದ ಕಾಮಗಾರಿಗಳು ಅರ್ಧಕ್ಕೆ ನಿಂತು ಸೇವೆಗೆ ಅಲಭ್ಯವಾಗಿದೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಬೀಟಿಗೆ ಸುಣ್ಣದಗೂಡಿನ ಬಳಿ 1.30 ಕೋ.ರೂ. ವೆಚ್ಚದಲ್ಲಿ ಕರ್ನಾಟಕ ಆರೋಗ್ಯ ವ್ಯವಸ್ಥೆಗಳ ಅಭಿವೃದ್ಧಿ ಯೋಜನೆ (ಕೆ.ಎಚ್‌.ಎಸ್‌.ಡಿ.ಸಿ)ಯಡಿ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಗೊಂಡು ವರ್ಷ ಕಳೆದಿದೆ.

Advertisement

ಚಾರ್ಮಾಡಿ, ಕೊಕ್ಕಡ ಆರೋಗ್ಯ ಕೇಂದ್ರಕ್ಕೆ ಬೇಕಿದೆ ಶೀಘ್ರ ಕಾಯಕಲ್ಪ
ಸರ್ವೇ ನಂಬರ್‌ 174 /1ಸಿ 1ಎ ಯ 0.88ಎಕ್ರೆ ಜಾಗದಲ್ಲಿ ಸುಮಾರು 2,500 ಚದರಡಿಯ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಸರಕಾರ ಟೆಂಡರ್‌ ಕರೆದು ಕೆಲಸ ಆರಂಭಿಸಲಾಗಿತ್ತು. ಸಣ್ಣಪುಟ್ಟ ಕೆಲಸಗಳನ್ನು ಹೊರತುಪಡಿಸಿ ಕಟ್ಟಡ ಸಂಪೂರ್ಣಗೊಂಡು ವರ್ಷ ಕಳೆದಿದೆ. ಆದರೆ ಕಾರ್ಯಾರಂಭಕ್ಕೆ ವೇಗ ಸಿಕ್ಕಿಲ್ಲ. ಇಲಾಖೆಗೆ ಸಂಬಂಧಪಟ್ಟ ಗುತ್ತಿಗೆದಾರರು ಇನ್ನೂ ಹಸ್ತಾಂತರಿಸದಿರುವುದರಿಂದ ಉದ್ಘಾಟನೆ ಗೊಳ್ಳಲು ಮೀನಮೇಷ ಎಣಿಸಲಾಗುತ್ತಿದೆ.

ಆರು ಹಾಸಿಗೆಯುಳ್ಳ ಸುಸಜ್ಜಿತ ಕಟ್ಟಡ
6 ಹಾಸಿಗೆಯುಳ್ಳ ಹೊಸ ಪ್ರಾ.ಆ.ಕೇ. ಕಟ್ಟಡದಲ್ಲಿ ಸುಮಾರು 12ರಷ್ಟು ಕೊಠಡಿಗಳು, ವಿದ್ಯುತ್‌ ಸಂಪರ್ಕ ಇತ್ಯಾದಿ ಅಗತ್ಯ ಕಾಮಗಾರಿ ಪೂರ್ಣಗೊಂಡಿದೆ. ಕಟ್ಟಡದ ಒಳಭಾಗದಲ್ಲಿ ಕಚೇರಿ, ಸಭಾಂಗಣ, ವೈದ್ಯರ ಕೊಠಡಿ, ಸ್ಟೋರ್‌ರೂಮ್‌, ಲ್ಯಾಬ್‌, ಡ್ರೆಸ್ಸಿಂಗ್‌, ಪರೀûಾ ಕೊಠಡಿ, ಶಸ್ತ್ರಚಿಕಿತ್ಸಾ ಕೊಠಡಿ, ಔಷಧ ವಿತರಿಸಲು ಪ್ರತ್ಯೇಕ ಕೊಠಡಿ ಎಲ್ಲವನ್ನೂ ಮೀಸಲಿರಿಸಲಾಗಿದೆ.

ಮೂರು ಗ್ರಾಮಗಳಿಗೆ ಪ್ರಯೋಜನ
ಪ್ರಸಕ್ತ ತಾಲೂಕಿನ ನೆರಿಯ ಆರೋಗ್ಯ ಕೇಂದ್ರಕ್ಕೊಳಪಟ್ಟಂತೆ ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಕಕ್ಕಿಂಜೆಯಲ್ಲಿ ಗ್ರಾ.ಪಂ. ಹಳೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಚಿಬಿದ್ರೆ, ತೋಟತ್ತಾಡಿ ಹಾಗೂ ಚಾರ್ಮಾಡಿ ಈ ಮೂರು ಗ್ರಾಮಗಳ ವ್ಯಾಪ್ತಿಗೊಳಪಡುತ್ತಿದೆ. ಚಾರ್ಮಾಡಿ ಗ್ರಾಮ, ನೆರಿಯಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಪ್ರದೇಶದಲ್ಲಿ ತುರ್ತು ಅವಘಡ ಸಂಭವಿಸಿದಲ್ಲಿ ಉಜಿರೆ ಅಥವಾ ಬೆಳ್ತಂಗಡಿ ಆಸ್ಪತ್ರೆಗಳಿಗೆ ಬರಲು 30 ಕಿ.ಮೀ. ಅಧಿಕ ತ್ರಾಸದಾಯಕ ಓಡಾಟ ನಡೆಸಬೇಕಿದೆ. ಈ ನಿಟ್ಟಿನಲ್ಲಿ ನೂತನ ಕಟ್ಟಡ ಶೀಘ್ರ ಕಾಮಗಾರಿ ಪೂರ್ಣಗೊಂಡಲ್ಲಿ ಬಹಳಷ್ಟು ಅನುಕೂಲವಾಗಲಿದೆ ಎಂಬುದು ಸಾರ್ವಜನಿಕರ ಬೇಡಿಕೆಯಾಗಿದೆ.

ನೂತನ ಪ್ರಾ.ಆ.ಕೇಂದ್ರ ಕಾರ್ಯಾ ರಂಭಗೊಂಡರೆ ಪೂರ್ಣಕಾಲಿಕ ವೈದ್ಯಾಧಿಕಾರಿ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಹಿರಿಯ ಪುರುಷ ಆರೋಗ್ಯ ಸಹಾಯಕ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಲ್ಯಾಬ್‌ ಟೆಕ್ನಿಶಿಯನ್‌, ಫಾರ್ಮಸಿಸ್ಟ್‌, ಶುಶ್ರೂಷಕಿ, ಗುಮಾಸ್ತ, ಡಿ ಗ್ರೂಪ್‌ ಮೊದಲಾದ ಹುದ್ದೆಗಳು ಬರುವ ನಿರೀಕ್ಷೆ ಇದೆ.

Advertisement

ಹಳೇ ಕೇಂದ್ರಕ್ಕೆ ವೈದ್ಯಾಧಿಕಾರಿಯ ಆವಶ್ಯಕತೆ
ಕಳೆದ ಜನಗಣತಿಯಂತೆ ಈ ಮೂರು ಗ್ರಾಮಗಳಲ್ಲಿ 11,194 ಜನಸಂಖ್ಯೆ ಇದೆ. ಈಗಿರುವ ಹಳೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಯಾವುದೇ ಅಗತ್ಯ ವ್ಯವಸ್ಥೆಗಳಿಲ್ಲ. ವೈದ್ಯಾಧಿಕಾರಿ ಅಥವಾ ಆರೋಗ್ಯ ಸಹಾಯಕಿಯರಿಲ್ಲ. ಸದ್ಯ ನೆರಿಯ ಸಂಚಾರಿ ಗಿರಿಜನ ಆರೋಗ್ಯ ಘಟಕದ ಕಿರಿಯ ಆರೋಗ್ಯ ಸಹಾಯಕಿಯನ್ನು ಕೇವಲ ಔಷಧ ನೀಡುವ ನಿಟ್ಟಿನಲ್ಲಿ ನಿಯೋಜಿಸಲಾಗಿದೆ. ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಗ್ರಾಮಸ್ಥರು ಮುಂಡಾಜೆ, ನೆರಿಯ ಮೊದಲಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಅವಲಂಬಿಸುವ ಸ್ಥಿತಿ ಎದುರಾಗಿದೆ. ಈ ನಿಟ್ಟಿನಲ್ಲಿ ಶೀಘ್ರವಾಗಿ ಚಾರ್ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆದು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಗ್ರಾಮಸ್ಥರ ಅಲೆದಾಟಕ್ಕೆ ಮುಕ್ತಿ ನೀಡಬೇಕಿದೆ.

ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರ
ಕೊಕ್ಕಡದಲ್ಲೂ ಸುಮಾರು 4 ಕೋ.ರೂ. ವೆಚ್ಚದಲ್ಲಿ 30 ಹಾಸಿಗೆಯುಳ್ಳ ಸುಸಜ್ಜಿತ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣ ಕಾಮಗಾರಿ ಕೊನೆ ಹಂತದಲ್ಲಿದೆ. ಶಿಶಿಲ, ಶಿಬಾಜೆ, ನಿಡ್ಲೆ, ನೆಲ್ಯಾಡಿ, ಅರಸಿನಮಕ್ಕಿ ಸುತ್ತಮುತ್ತ ನಾಲ್ಕಾರು ಗ್ರಾಮಗಳ ಜನರಿಗೆ ಅತೀಹೆಚ್ಚು ಪ್ರಯೋಜನವಾಗಲಿದೆ. ಇದರ ಲೋಕಾರ್ಪಣೆಯೂ ವಿಳಂಬವಾಗಿದೆ.

ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next