Advertisement

ಮಳೆಗಾಲಕ್ಕೆ ಅಪಾಯಕಾರಿ ಚಾರ್ಮಾಡಿ ರಸ್ತೆ

03:50 AM May 21, 2019 | sudhir |

ಬೆಳ್ತಂಗಡಿ: ಭಾರೀ ಮಳೆಯಿಂದಾಗಿ ಗುಡ್ಡ ಕುಸಿದು ಚಾರ್ಮಾಡಿ ಘಾಟಿ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಒಂದು ವರ್ಷವಾದರೂ ಇನ್ನೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಇಲ್ಲಿ ಸಮರ್ಪಕವಾದ ಕಾಮಗಾರಿ ನಡೆಸಿಲ್ಲ. ಈ ಬಾರಿ ಮತ್ತೆ ಬಿರುಸಾಗಿ ಮಳೆ ಸುರಿದಲ್ಲಿ ಹೆದ್ದಾರಿ ಸಂಪರ್ಕ ಮತ್ತೆ ಸ್ಥಗಿತಗೊಳ್ಳುವ ಸಾಧ್ಯತೆಯೇ ಅಧಿಕ.

Advertisement

ಮುಖ್ಯವಾಗಿ ಕಳೆದ ಬಾರಿ ಗುಡ್ಡ ಕುಸಿದ ಪ್ರದೇಶದಲ್ಲಿ ತುರ್ತಾಗಿ ಕಾಮಗಾರಿ ನಡೆಸಬೇಕಿತ್ತು. ಆದರೆ ಅಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆದಿಲ್ಲ. ಬದಲಾಗಿ ರಸ್ತೆಯ 11 ತಿರುವುಗಳ ಇಕ್ಕೆಲಗಳಲ್ಲಿ ಸುಮಾರು 75 ಲಕ್ಷ ರೂ. ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ. ಎರಡೂ ಬದಿ ಚರಂಡಿ ದುರಸ್ತಿ ಮತ್ತು ಮೋರಿಗಳ ಹೂಳೆತ್ತುವ ಕೆಲಸ ಸಾಗುತ್ತಿದೆ.

ಮಳೆಗಾಲ ಆರಂಭವಾಗಲು ಒಂದೂವರೆ ತಿಂಗಳು ಇದೆ ಎನ್ನುವಾಗ ಕಾಮಗಾರಿ ಶುರುವಾಗಿದೆ. ನಾಲ್ಕು ಜೆಸಿಬಿ ಸಹಿತ ಕಾರ್ಮಿಕರು ಕೊಟ್ಟಿಗೆ ಹಾರದಿಂದ ಚಾರ್ಮಾಡಿ ಚೆಕ್‌ಪೋಸ್ಟ್‌ ವರೆಗೆ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಕೆಲವು ತಿರುವುಗಳು ಈಗಲೂ ಅಪಾಯಕಾರಿ ಸ್ಥಿತಿಯಲ್ಲಿದ್ದು, ತಡೆಗೋಡೆ ನಿರ್ಮಾಣವಾಗಿಲ್ಲ.

ಮಳೆಯಾದರೆ ಆತಂಕ
ದುರಸ್ತಿ ನೆಪಮಾತ್ರಕ್ಕೆ ಎಂಬಂತೆ ಮೇಲ್ನೋಟಕ್ಕೆ ತೋರುತ್ತಿದೆ. 10ನೇ ತಿರುವಿನ ತಡೆಗೋಡೆ ಕುಸಿದಿದೆ. 6, 7 ಮತ್ತು 8ನೇ ತಿರುವುಗಳ ಅಂಚಿನಲ್ಲಿ ಕುಸಿತ ಕಳೆದ ಮಳೆಗಾಲದಲ್ಲೇ ಸಂಭವಿಸಿತ್ತು. ಈ ಬಾರಿಯೂ ಅಕಾಲಿಕ ಮಳೆಯಾದರೆ ಮತ್ತೆ ಅಡ್ಡಿ ಉಂಟಾಗುವ ಅಪಾಯವಿದೆ.

ಸೂಚನಾ ಫಲಕವಿಲ್ಲ
ಚಾರ್ಮಾಡಿ ರಸ್ತೆಯಲ್ಲಿ ಯಾವುದೇ ತಿರುವಿನ ಬಳಿ ಸೂಚನಾ ಫಲಕವಿಲ್ಲ. ಮಳೆ ಸಂದರ್ಭ ಮಂಜು ಮುಸುಕಿ ರುವುದರಿಂದ ಅಪಾಯ ಖಚಿತ.

Advertisement

ನಿಮ್ನ ಮಸೂರ ಇಲ್ಲ
11 ಹಿಮ್ಮುರಿ ತಿರುವುಗಳಲ್ಲಿ ನಿಮ್ನ ಮಸೂರ ಅಳವಡಿಸಲು ಹಿಂದೆಯೇ ಪ್ರಸ್ತಾವವಾಗಿತ್ತು. ಆದರೆ ಈ ವರೆಗೆ ಅಳವಡಿಕೆ ಆಗಿಲ್ಲ. ಸೂಚನಾ ಫಲಕಗಳನ್ನು ಅಳವಡಿಸುವುದಕ್ಕೆ ಮತ್ತು ಇತರ ಮೂಲಸೌಕರ್ಯ ಕಲ್ಪಿಸಲು ಪ್ರಕೃತಿ ವಿಕೋಪ ನಿಧಿಯಿಂದ ಪ್ರತಿ ವರ್ಷ 5 ಲಕ್ಷ ರೂ. ಬಿಡುಗಡೆಯಾಗುತ್ತದೆ. ಆದರೆ ಉದ್ದೇಶ ಮಾತ್ರ ಸಮರ್ಪಕವಾಗಿ ಈಡೇರುತ್ತಿಲ್ಲ.

ಚಾರ್ಮಾಡಿ ಘಾಟಿ ರಸ್ತೆ ಅಂಚಿನ ಚರಂಡಿ ಹೂಳೆತ್ತುವ ಕೆಲಸಕ್ಕೆ 75 ಲಕ್ಷ ರೂ. ಮೀಸಲಿರಿಸಲಾಗಿದೆ. 4 ಜೆಸಿಬಿಗಳು ನಿರಂತರ ಕೆಲಸ ಮಾಡುತ್ತಿವೆ. ಸೂಚನಾ ಫಲಕ ಅಳವಡಿಸುವ ವ್ಯವಸ್ಥೆ ಮಾಡಲಾಗು ವುದು ಎಂದು ರಾ. ಹೆ. ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರಮೇಶ್‌ ತಿಳಿಸಿದ್ದಾರೆ.

ಮಾಣಿ-ಸಂಪಾಜೆ, ಆಗುಂಬೆಯೂ ಸರಿಯಾಗಿಲ್ಲ
ಚಾರ್ಮಾಡಿ ರಸ್ತೆಯ ಸ್ಥಿತಿಯೇ ಸಂಪಾಜೆ ಮತ್ತು ಆಗುಂಬೆ ಘಾಟಿಯಲ್ಲಿಯೂ ಇದೆ. ಕಳೆದ ಬಾರಿ ಇಲ್ಲಿಯೂ ಗುಡ್ಡ ಕುಸಿದಿತ್ತು. ಆಗುಂಬೆಯ 7ನೇ ತಿರುವಿನಲ್ಲಿ ಕುಸಿತ ಉಂಟಾಗಿದ್ದು, ಆ ಪ್ರದೇಶ ಬಿಟ್ಟು ಇತರ ಪ್ರದೇಶಗಳಲ್ಲಿ ದುರಸ್ತಿ ಮಾಡಲಾಗಿದೆ. ಈ ಬಾರಿ ಮತ್ತೆ ಇದೇ ತಿರುವಿನಲ್ಲಿ ಅಪಾಯ ಎದುರಾದರೆ ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಲಿದೆ. ಮಾಣಿ-ಸಂಪಾಜೆ ರಸ್ತೆಯ ಗುಡ್ಡದ ಬದಿಯ ಮಣ್ಣನ್ನು ತಾತ್ಕಾಲಿಕವಾಗಿ ತೆರವು ಮಾಡಲಾಗಿದೆ ವಿನಾ ಶಾಶ್ವತ ತಡೆಗೋಡೆ ನಿರ್ಮಿಸಿಲ್ಲ. ಆದುದರಿಂದ ಇಲ್ಲಿನ ಬಗ್ಗೆಯೂ ಖಚಿತ ಭರವಸೆ ಹೊಂದುವಂತಿಲ್ಲ.

- ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next