ಚಾರ್ಮಾಡಿ: ಬೊಲೇರೊ ಜೀಪೊಂದು 60 ಅಡಿ ಕಂದಕಕ್ಕೆ ಉರುಳಿ ಬಿದ್ದು 9 ಮಂದಿ ಗಾಯಗೊಂಡ ಘಟನೆ ಚಾರ್ಮಾಡಿ ಘಾಟಿಯ ಎರಡನೇ ತಿರುವಿನಲ್ಲಿ ರವಿವಾರ ಮಧ್ಯರಾತ್ರಿ ಸಂಭವಿಸಿದೆ.
ಗಾಯಗೊಂಡವರು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಾರ್ಟಗಿ ನಿವಾಸಿಗಳಾದ ಜೀಪ್ ಚಾಲಕ ಶ್ರೀಧರ್(38), ಶರಣಪ್ಪ(34), ತೇಜಶ್ವಿನಿ(9) ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಾರ್ಟಗಿ ನಿವಾಸಿಗಳಾದ 9 ಜನರ ತಂಡ ಧರ್ಮಸ್ಥಳಕ್ಕೆ ತೆರಳುತಿದ್ದರೆಂದು ತಿಳಿದುಬಂದಿದೆ.
ಮಾನವೀಯತೆ ಮೆರೆದ ಮುಂಡಾಜೆ ಗ್ರಾ.ಪ ಸದಸ್ಯರು: ಜೀಪ್ ಪ್ರಪಾತಕ್ಕೆ ಬೀಳುವ ಸಂದರ್ಭ ಹಿಂಬದಿ ಬೆಂಗಳೂರಿನಿಂದ ಬರುತ್ತಿದ್ದ ಮುಂಡಾಜೆಯ ಗ್ರಾ.ಪ ಸದಸ್ಯರಾದ ಅಬ್ದುಲ್ ಅಜೀಜ್ , ಹಕೀಮ್ ಕಾಜೂರು , ಬಶೀರ್, ಹಮೀದ್ ಉಜಿರೆ, ಉಮರ್ ಮುಂಡಾಜೆ 60 ಅಡಿ ಕೆಳಗೆ ಬಿದ್ದು ಒದ್ದಾಡುತ್ತಿದ್ದ 9 ಜನರನ್ನು ಹಗ್ಗದ ಮೂಲಕ ರಕ್ಷಣೆ ಮಾಡಿ ಸ್ಥಳಿಯ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೇರೆದಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪರಿಶೀಲನೆ ಮುಂದುವರೆದಿದೆ.