Advertisement

ಚಾರ್ಮಾಡಿ ಘಾಟಿ ರಸ್ತೆಗೆ ಹೆಚ್ಚುವರಿ ಹೊರೆ

07:20 AM May 24, 2018 | Team Udayavani |

ಬೆಳ್ತಂಗಡಿ: ತಾಲೂಕಿನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಮುಖ್ಯವಾಗಿ ತಾಲೂಕಿನಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ನಿರ್ವಹಣೆ ಸಮರ್ಪ ಕವಾಗಿ ನಡೆಯಬೇಕಿದೆ. ಚಾರ್ಮಾಡಿ ಘಾಟಿಯಲ್ಲಿ ರಸ್ತೆ ಕಿರಿದಾಗಿದ್ದು, ವಾಹನಗಳ ದಟ್ಟಣೆಯಿಂದ ಸವಾರರು ಪರದಾಡುತ್ತಿದ್ದಾರೆ. ರಸ್ತೆಯಿಂದ ವಾಹನಗಳನ್ನು ಬದಿಗೆ ಇಳಿಸಲೂ ಸಾಧ್ಯವಾಗದ ಪರಿಸ್ಥಿತಿಯಿದೆ. ಮಳೆ ಬಂದರೆ ಪರಿಸ್ಥಿತಿ ಇನ್ನಷ್ಟು ಜಟಿಲವಾಗಲಿದೆ. ಆದ್ದರಿಂದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಪುತ್ತೂರು ಉಪವಿಭಾಗ ಸಹಾಯಕ ಅಯುಕ್ತ ಎಚ್‌.ಕೆ. ಕೃಷ್ಣಮೂರ್ತಿ ಅವರಿಗೆ ತಿಳಿಸಿದರು.

Advertisement

ಬುಧವಾರ ಮಿನಿ ವಿಧಾನಸೌಧ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಪ್ರಕೃತಿ ವಿಕೋಪ ಮುನ್ನೆಚ್ಚರಿಕೆ ತುರ್ತು ಸಭೆಯಲ್ಲಿ ಈ ವಿಷಯ ತಿಳಿಸಲಾಯಿತು. ಪ್ರತಿಕ್ರಿಯಿಸಿದ ಕೃಷ್ಣಮೂರ್ತಿ, ಕೂಡಲೇ ರಾ.ಹೆ. ಪ್ರಾಧಿಕಾರದ ಅಭಿಯಂತ ಜತೆ ಮಾತನಾಡಿ ಕ್ರಮ ಕೈಗೊಳ್ಳಲು ತಿಳಿಸಲಾಗುವುದು. ಶಿರಾಡಿ ಘಾಟಿ ಆದಷ್ಟು ಬೇಗ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ. ಚಾರ್ಮಾಡಿ ಪ್ರದೇಶದಲ್ಲಿ ಗುಡ್ಡ ಕುಸಿತವಾಗುವ ಸಾಧ್ಯತೆಗಳಿದ್ದಲ್ಲಿ ಸಮರ್ಪಕ ಕ್ರಮ ಕೈಗೊಳ್ಳಬೇಕಿದೆ ಎಂದರು. ಎಲ್ಲ ಇಲಾಖೆ ಅಧಿಕಾರಿಗಳೂ ಹೊಂದಾಣಿಯಿಂದ ಕಾರ್ಯನಿರ್ವಹಿಸಬೇಕಾಗಿದೆ. ಸಮಸ್ಯೆಗೆ ಸ್ಪಂದಿಸಬೇಕು, ಮುನ್ನೆಚ್ಚರಿಕೆ ಕ್ರಮ ಅಗತ್ಯ. ಶುಚಿತ್ವ ಕಾಪಾಡಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕಿದೆ. ವೈದ್ಯಾಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕೆಂದು ತಿಳಿಸಿದರು.

ಶಿಕ್ಷಣಾಧಿಕಾರಿಗೆ ರಜೆ ನೀಡುವ ಅಧಿಕಾರ 
ಮಕ್ಕಳಿಗೆ ಅನಾರೋಗ್ಯ ಬಾಧಿಸಿದಲ್ಲಿ ಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕು. ಹೆಚ್ಚಿನ ಮಳೆ ಸುರಿದು ಮಕ್ಕಳಿಗೆ ಶಾಲೆಗೆ ಆಗಮಿಸಲು ಅನನುಕೂಲವಾದಲ್ಲಿ  ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೇಲಧಿಕಾರಿಗಳ ಗಮನಕ್ಕೆ ತಂದು ರಜಾ ನೀಡಬಹುದು ಎಂದು ತಿಳಿಸಿದರು. ತಹಶೀಲ್ದಾರ್‌ ಟಿ.ಸಿ. ಹಾದಿಮನಿ, ಇಒ ಬಸವರಾಜ ಅಯ್ಯಣ್ಣನವರ್‌ ಲೋಕೋಪಯೋಗಿ, ಕಂದಾಯ, ಆರೋಗ್ಯ, ವಿದ್ಯುತ್‌, ಶಿಕ್ಷಣ, ತೋಟಗಾರಿಕೆ, ಅರಣ್ಯ, ಪೊಲೀಸ್‌, ಸಮಾಜ ಕಲ್ಯಾಣ ಮೊದಲಾದ ಅಧಿಕಾರಿಗಳು ಭಾಗವಹಿಸಿದ್ದರು. 

ನೀರು ನಿಲ್ಲದಿರಲಿ
ಮಳೆಗಾಲದಲ್ಲಿ ನೀರಿಗೆ ಸಂಬಂಧಿಸಿದ ಕಾಯಿಲೆಗಳು ಹರಡುವುದರಿಂದ ಎಚ್ಚರಿಕೆ ವಹಿಸಬೇಕು. ಮುಖ್ಯವಾಗಿ ಅಡಿಕೆ ತೋಟಗಳಲ್ಲಿ,ರಬ್ಬರು ತೋಟಗಳಲ್ಲಿ, ಹೊಂಡಗಳಲ್ಲಿ, ಚರಂಡಿಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಅದೇ ರೀತಿ ಕೃಷಿ ಹೊಂಡ ಹಾಗೂ ಕಲ್ಲಿನ ಕೋರೆಗಳ ಸುತ್ತ ಬೇಲಿ ನಿರ್ಮಿಸಿ ಸೂಚನಾ ಫಲಕ ಹಾಕಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮಕ್ಕಳು ನೀರಿಗಿಳಿದು ಅನಾಹುತ ಸಂಭವಿಸುವ ಸಾಧ್ಯತೆಗಳಿರುತ್ತವೆ ಎಂದು ಎ.ಸಿ. ತಿಳಿಸಿದರು.

ತ್ವರಿತ ಕ್ರಮ ಅಗತ್ಯ
ಯಾವುದೇ  ಕಾರಣಕ್ಕೂ ಅಧಿಕಾರಿಗಳು ಕೇಂದ್ರ ಸ್ಥಾನದಿಂದ ಹೊರಗೆ ತೆರಳುವ ವೇಳೆ ಅನುಮತಿ ಪಡೆಯುವುದು ಕಡ್ಡಾಯ. ಅಧಿಕಾರಿಗಳು ಯಾವುದೇ ಘಟನೆ ಸಂಭವಿಸಿದ ತತ್‌ಕ್ಷಣ ಸ್ಪಂದಿಸಬೇಕು. ಘಟನೆ ನಡೆದ ಸ್ಥಳದಲ್ಲಿದ್ದು, ಅಗತ್ಯ ಕ್ರಮ ಕೈಗೊಳ್ಳಲು ನೆರವಾಗಬೇಕು. ಹಾನಿ ಸಂಭವಿಸಿದಲ್ಲಿ  ಪರಿಹಾರ ನೀಡುವುದಕ್ಕೂ ಮುನ್ನ 24 ಗಂಟೆಗಳಲ್ಲಿ ನೆರವು ನೀಡಬೇಕು. ಅಗತ್ಯವಿದ್ದಲ್ಲಿ  ತನಿಖೆ ಕೈಗೊಳ್ಳಬೇಕು ಎಂದು ಸಹಾಯಕ ಆಯುಕ್ತರು ತಿಳಿಸಿದರು.

Advertisement

ಸಹಾಯವಾಣಿ
ಜನರ ಸಹಾಯಕ್ಕಾಗಿ ದಿನದ 24 ಗಂಟೆಗಳೂ ಸಹಾಯವಾಣಿ ಕಾರ್ಯ ನಿರ್ವಹಿಸಲಿದೆ. ಪ್ರಕೃತಿ ವಿಕೋಪ ಸಂಭವಿಸಿದಲ್ಲಿ, ಅವಘಡ ಸಂಭವಿಸಿದಲ್ಲಿ ಜನತೆ ತತ್‌ಕ್ಷಣ 08256- 232047ಗೆ ಕರೆ ಮಾಡಬಹುದು ಎಂದು ಎ.ಸಿ. ತಿಳಿಸಿದ್ದಾರೆ.

ಎಚ್ಚರವಿರಲಿ
ಅಧಿಕಾರಿಗಳ ಜತೆಗೆ ಸಾರ್ವಜನಿಕರಿಗೂ ಅವರದೇ ಆದ ಜವಾಬ್ದಾರಿಗಳಿವೆ. ಅದನ್ನು ಸಮರ್ಪಕ ರೀತಿ ನಿರ್ವಹಿಸಬೇಕು. ಮನೆಗಳ ಸಮೀಪ ಅಪಾಯದ ಸ್ಥಿತಿಯಲ್ಲಿರುವ ಮರಗಳಿದ್ದಲ್ಲಿ ತೆರವು ಮಾಡಬೇಕು. ಅನಿವಾರ್ಯ ಆದಲ್ಲಿ ತಹಶೀಲ್ದಾರ್‌ಅವರಿಗೆ ತಿಳಿಸಿದಲ್ಲಿ, ಪರಿಸ್ಥಿತಿ ಗಮನಿಸಿ ಅವರು ಸೂಕ್ತ ನೆರವು ನೀಡಲಿದ್ದಾರೆ. ವಿವಿಧ ರೀತಿಗಳ ರೋಗಗಳು ಕಾಣಿಸಿಕೊಳ್ಳುತ್ತಿದ್ದು, ಜನತೆ ನೀರು ಬಳಸುವಾಗ ಎಚ್ಚರಿಕೆ ವಹಿಸಬೇಕು.
– ಎಚ್‌.ಕೆ. ಕೃಷ್ಣಮೂರ್ತಿ, ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತರು

Advertisement

Udayavani is now on Telegram. Click here to join our channel and stay updated with the latest news.

Next