ಚಿಕ್ಕಮಗಳೂರು : ವಾರದ ಹಿಂದಷ್ಟೆ ಕುದುರೆಮುಖ ಸುತ್ತಮುತ್ತ ಅವರಿಸಿದ್ದ ಬೆಂಕಿ ಶಮನವಾಗುತ್ತಿದ್ದಂತೆ ರವಿವಾರ ಚಿಕ್ಕಮಗಳೂರು ಜಿಲ್ಲಾ ವಿಭಾಗದ ಚಾರ್ಮಾಡಿ ಘಾಟಿಯ ಆಲೇಖಾನ್ ಹೊರಟ್ಟಿ ಗುಡ್ಡದಲ್ಲಿ ಭಾರಿ ಪ್ರಮಾಣದ ಕಾಡ್ಗಿಚ್ಚು ಕಂಡುಬಂದಿದೆ.
ಎತ್ತರ ಪ್ರದೇಶದ ಗುಡ್ಡದಲ್ಲಿ ಹೊತ್ತಿ ಬೆಂಕಿ ಉರಿಯುತ್ತಿದ್ದು, ಅರಣ್ಯ ಇಲಾಖೆ ಹತೋಟಿಗೆ ತರಲು ಹರಸಾಹಸ ನಡೆಸುತ್ತಿದೆ. ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಸಾಧ್ಯತೆ ಇದ್ದು, ಅಪಾರ ಪ್ರಮಾಣದ ಅರಣ್ಯ ಬೆಂಕಿಗಾಹುತಿಯಾಗಿರುವ ಶಂಕೆ ವ್ಯಕ್ತವಾಗಿದೆ. ಎತ್ತರ ಪ್ರದೇಶವಾದ್ದರಿಂದ ಅಗ್ನಿ ಶಾಮಕ ವಾಹನ ಹೋಗಲು ಸಾಧ್ಯವಾಗದ ಪರಿಸ್ಥಿತಿ ಇದೆ.
ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಚಾರ್ಮಾಡಿ ಪ್ರದೇಶದ ಮಠದ ಮಜಲು ಬಳಿ ಹೆದ್ದಾರಿ ಬದಿ ಇದ್ದ ತ್ಯಾಜ್ಯದ ರಾಶಿಗೆ ಯಾರೋ ಬೆಂಕಿ ಹಚ್ಚಿದ್ದು, ಅದು ಅರಣ್ಯ ಪ್ರದೇಶದತ್ತ ಆವರಿಸುತ್ತಿದ್ದಂತೆ ಸ್ಥಳೀಯ ಅರಣ್ಯ ಇಲಾಖೆಯ ಸಿಬಂದಿ ಕ್ರಮ ಕೈಗೊಂಡ ಕಾರಣ ಯಾವುದೇ ಹೆಚ್ಚಿನ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.
ಕಳೆದ ಎರಡು ದಿನಗಳ ಹಿಂದೆ ಅರಸಿಮನಕ್ಕಿ ಹಾಗೂ ಶಿಬಾಜೆ ಅರಣ್ಯದಲ್ಲಿ ಬೆಂಕಿ ಆವರಿಸಿ ಸುಮಾರು ನೂರು ಹೆಕ್ಟೇರ್‌ಗೂ ಅಧಿಕ ಅರಣ್ಯಕ್ಕೆ ಆವರಿಸಿದೆ ಎಂದು ಸ್ಥಳೀಯರು ತಿಳಿಸಿದ್ದರು. ಬಳಿಕ ಅಗ್ನಿಶಾಮಕ ದಳ ರಸ್ತೆ ಅಂಚಿನಲ್ಲಿ ಆವರಿಸಿದ್ದ ಬೆಂಕಿ ನಂದಿಸಲು ಹರಸಾಹಸ ಪಟ್ಟಿತ್ತು. ಬಹುತೇಕ ಕಡೆಗಳಲ್ಲಿ ವಿದ್ಯುತ್ ತಂತಿಗಳಿಂದ ಬೆಂಕಿ ಹಬ್ಬುತ್ತಿದೆ. ಬೇಸಗೆ ಬಿಸಿ ನಡುವೆ ಅರಣ್ಯ ಪ್ರದೇಶ ಬೆಂಕಿಯ ಕೆನ್ನಾಲೆಗೆ ಸಿಲುಕಿದ್ದರಿಂದ ಬಿಸಿ ಗಾಳಿ ಹೆಚ್ಚಾಗಿದೆ.
ಇದನ್ನೂ ಓದಿ: ವನಿತಾ ಪ್ರೀಮಿಯರ್ ಲೀಗ್ ಬಗ್ಗೆ ನೀತಾ ಅಂಬಾನಿ ಹೇಳಿದ್ದೇನು?