Advertisement

ಚಾರ್ಮಾಡಿ ಘಾಟಿ ನಿರಂತರ ಕುಸಿತ

06:00 AM Jun 14, 2018 | Team Udayavani |

ಬೆಳ್ತಂಗಡಿ: ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಹೆದ್ದಾರಿ ನಿರ್ವಹಣಾ ಕಾಮಗಾರಿಗೆ ಅಡ್ಡಿಯಾಗಿದೆ. ಅಲ್ಲಲ್ಲಿ ಕುಸಿದಿರುವ ಮಣ್ಣು ಹಾಗೂ ಮರಗಳನ್ನು ತೆಗೆಯುವ ಕೆಲಸ ಭರದಿಂದ ಸಾಗಿದ್ದು, ಬುಧವಾರ ಪುತ್ತೂರು ಉಪವಿಭಾಗ ಸಹಾಯಕ ಅಯುಕ್ತ ಎಚ್‌.ಕೆ. ಕೃಷ್ಣಮೂರ್ತಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

Advertisement

ಘಾಟಿಯಲ್ಲಿ ಮಂಗಳವಾರ ಹಗಲು, ರಾತ್ರಿ ಎಂಟು ಜೆಸಿಬಿಗಳು ಕಾರ್ಯ ನಿರ್ವಹಿಸಿದ್ದವು. ಬುಧವಾರವೂ 13 ಜೆಸಿಬಿಗಳು ನಿರಂತರ ವಾಗಿ ಕಾರ್ಯನಿರ್ವಹಿಸಿವೆ. ರಸ್ತೆಗೆ ಬಿದ್ದಿ ರುವ ಮರಗಳು ಹಾಗೂ ರಸ್ತೆಬದಿ ವಾಲಿಕೊಂಡಿರುವ, ಬೀಳಲು ಸಿದ್ಧವಾಗಿರುವ ಮರಗಳನ್ನು ಗುರುತಿಸಿ, ತೆಗೆ ಯುವ ಕಾರ್ಯ ಅರಣ್ಯ ಇಲಾಖೆಯಿಂದ ನಡೆಯುತ್ತಿದೆ.

ಮಣ್ಣಿನಡಿ ಸಿಲುಕಿದ ಜೆಸಿಬಿ
ಮಂಗಳವಾರ ರಾತ್ರಿ ಮಣ್ಣು ತೆಗೆಯುತ್ತಿದ್ದ ವೇಳೆ ಜೆಸಿಬಿ ಯಂತ್ರದ ಮೇಲೆ ಮಣ್ಣು ಕುಸಿದು ಬಿದ್ದಿದೆ. ರಾತ್ರಿಯ ವೇಳೆ ಅಪಾಯಕಾರಿ ಸ್ಥಳಗಳಲ್ಲಿ ಕಾಮಗಾರಿ ನಡೆಸುವುದು ಅಸಾಧ್ಯವಾದ್ದರಿಂದ ಸ್ಥಗಿತಗೊಳಿಸಿ ಹಗಲು ಮಾತ್ರ ಕಾಮಗಾರಿ ನಡೆಸಲಾಯಿತು. ಘಾಟಿ ರಸ್ತೆಯ ಬಹುತೇಕ ಕಡೆ ಡಾಮರು ಕಿತ್ತುಹೋಗಿದೆ. ಅಲ್ಲಲ್ಲಿ ದೊಡ್ಡದಾದ ಹೊಂಡಗಳು ಬಿದ್ದಿದ್ದು ವಾಹನ ಸಂಚಾರಕ್ಕೆ ಅಯೋಗ್ಯ ವೆನಿಸಿದೆ.

ಸಂಚಾರಕ್ಕೆ ಸಂಪೂರ್ಣ ತಡೆ
ತಡೆಯ ನಡುವೆಯೂ ಮಂಗಳವಾರ ರಾತ್ರಿ ಕೆಲವು ವಾಹನಗಳು ಘಾಟಿಯ ಮೂಲಕ ಹೋಗಿವೆ. ಬುಧ ವಾರವೂ ಗೇಟಿನ ಮುಂದೆ ಸುಮಾರು 40ಕ್ಕೂ ಹೆಚ್ಚು ಲಾರಿಗಳು ನಿಂತಿದ್ದವು. ಅದರೆ ಘನ ವಾಹನಗಳನ್ನು ಸಂಜೆ ವೇಳೆಗೆ ಅಧಿಕಾರಿಗಳು ವಾಪಸ್‌ ಕಳುಹಿಸಿದ್ದಾರೆ. ಹಸನಬ್ಬ ಅವರ ಹೊಟೇಲ್‌ ಬಳಿ ಗೇಟ್‌ ನಿರ್ಮಿಸಿ ಸಂಪೂರ್ಣ ತಡೆ ಹಾಕಲಾಗಿದೆ. ಉಜಿರೆ ಯಲ್ಲಿಯೇ ವಾಹನಗಳನ್ನು ತಡೆದು ಬದಲಿ ರಸ್ತೆಗಳ ಮೂಲಕ ಕಳುಹಿಸಲಾಗುತ್ತಿದೆ.

ಬಾಂಜಾರು ಮಲೆಗೆ ಸಹಾಯಹಸ್ತ
ಚಾರ್ಮಾಡಿ ಘಾಟಿಯ 9ನೇ ತಿರುವಿನಲ್ಲಿರುವ ಬಾಂಜಾರು ಮಲೆ ಪ್ರದೇಶದ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಅವರ ವಾಹನಗಳು ಘಾಟಿ ಮೂಲಕ ಹೋಗಲು ಅವಕಾಶ ಒದಗಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಬಾಂಜಾರುಮಲೆಗೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳ ಪರಿಶೀಲಿಸುವಂತೆ ಬೆಳ್ತಂಗಡಿ ತಹಶೀಲ್ದಾರ್‌ಗೆ ಎಚ್‌.ಕೆ. ಕೃಷ್ಣಮೂರ್ತಿ ಸೂಚನೆ ನೀಡಿದ್ದಾರೆ. ಹೆದ್ದಾರಿ ಪ್ರಾಧಿಕಾರದ ಮಂಗಳೂರು ವಿಭಾಗದ ಸುಬ್ಟಾರಾವ್‌, ತಹಶೀಲ್ದಾರ್‌ ಟಿ.ಸಿ. ಹಾದಿಮನಿ, ತಾ.ಪಂ. ಇಒ ಬಸವರಾಜ್‌ ಅಯ್ಯಣ್ಣನವರ್‌, ವಿವಿಧ ಇಲಾಖೆಗಳ ಶಿವಪ್ರಸಾದ್‌ ಅಜಿಲ, ರವಿ, ಸುಬ್ಬಯ್ಯ ನಾಯಕ್‌ ಮೊದಲಾದವರು ಪರಿಶೀಲನೆ ನಡೆಸಿದರು.

Advertisement

ಸಂಚಾರ ಸಂಪೂರ್ಣ ಸ್ಥಗಿತ ಭೀತಿ
ಬುಧವಾರ ಮತ್ತೆ ಘಾಟಿಯ ನಾಲ್ಕು ತಿರುವುಗಳಲ್ಲಿ ಭೂಕುಸಿತ ಸಂಭವಿಸಿದ್ದು ಆತಂಕ ಹೆಚ್ಚಿಸಿದೆ. ಘಾಟಿಯ ಬಹುತೇಕ ಎಲ್ಲ ತಿರುವುಗಳಲ್ಲಿ ಭೂ ಕುಸಿತವಾಗಿದೆ. ಆರನೇ ತಿರುವಿನಲ್ಲಿ ರಸ್ತೆಯ ಕೆಳಭಾಗದ ತಡೆಗೋಡೆ ಕುಸಿಯಲಾರಂಭಿಸಿದೆ. ಇದನ್ನು ತಡೆಯದಿದ್ದರೆ ಹೆಚ್ಚಿನ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಎಂಟನೇ ತಿರುವಿನಲ್ಲಿಯೂ ತಡೆಗೋಡೆ ಕುಸಿಯುವ ಹಂತದಲ್ಲಿದ್ದು, ಇಲ್ಲಿ ಕುಸಿತವಾದರೆ ಘಾಟಿ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುವ ಅಪಾಯವಿದೆ.

ಮಳೆ ಮುಂದುವರಿದಿದೆ. ಮಣ್ಣು ತೆಗೆಯುವ ಕಾಮಗಾರಿ ನಡೆಯುತ್ತಿದೆ. ಅಲ್ಲಲ್ಲಿ ಕುಸಿತ ಸಂಭವಿಸುತ್ತಿದ್ದು, ಮಳೆ ಕಡಿಮೆಯಾದಲ್ಲಿ ಒಂದೆರಡು ದಿನದಲ್ಲಿ ಕಾಮಗಾರಿ ಪೂರ್ಣಗೊಳಿಸಿ ರಸ್ತೆ ಸಂಚಾರಕ್ಕೆ ತೆರೆಯಲಾಗುವುದು. ಮಳೆ ಮುಂದುವರಿದರೆ ಅಥವಾ ಹೆಚ್ಚಿನ ಪ್ರದೇಶಗಳಲ್ಲಿ ಭೂ ಕುಸಿತಗಳಾದರೆ ರಸ್ತೆಯನ್ನು ಸಂಚಾರಕ್ಕೆ ಯೋಗ್ಯವಾಗಲು ಹೆಚ್ಚು ಸಮಯ ಬೇಕಾಗಬಹುದು.
ರಾಘವನ್‌, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸೂಪರಿಂಟೆಂಡೆಂಟ್‌ ಎಂಜಿನಿಯರ್‌

ತ್ವರಿತವಾಗಿ ಕಾಮಗಾರಿ ನಡೆಯುತ್ತಿದ್ದು ರಸ್ತೆಬದಿಯಲ್ಲಿ ರುವ ಅಪಾಯಕಾರಿ ಮರಗಳನ್ನು ತೆಗೆಯಲು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ. ಗುರುವಾರ ಸಂಜೆಯೊಳಗೆ ಕಾಮಗಾರಿ ಮುಗಿಸುವ ಗುರಿಯಿದೆ. ಗುರುವಾರ ಸಂಜೆಯ ಸ್ಥಿತಿಗತಿ ಪರಿಶೀಲಿಸಿ ವಾಹನ ಸಂಚಾರ ಆರಂಭಿಸುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು.
ಕೃಷ್ಣಮೂರ್ತಿ, ಎ.ಸಿ. ಪುತ್ತೂರು ಉಪವಿಭಾಗ 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next