Advertisement
ಯಾವುದೇ ಸಿನಿಮಾ ರಿಲೀಸ್ ಆದರೂ ಪ್ರೇಕ್ಷಕರ ಕೊರತೆ ಕಾಡುತ್ತಿದೆ ಎಂಬ ಅಳಲು ಸಿನಿಮಾ ಮಂದಿಯದ್ದಾಗಿತ್ತು. ಇದು ಸತ್ಯವೋ ಅಥವಾ ಸಿನಿಮಾ ಮಂದಿಯ ಲೆಕ್ಕಾಚಾರವೋ ಗೊತ್ತಿಲ್ಲ. ಆದರೆ, “ಕೆಜಿಎಫ್-2′ ನಂತರ ತೆರೆಕಂಡ 39ಕ್ಕೂ ಹೆಚ್ಚು ಸಿನಿಮಾಗಳಿಗೆ ಪ್ರೇಕ್ಷಕರ ಕೊರತೆ ಕಾಡಿದ್ದಂತೂ ಸುಳ್ಳಲ್ಲ. ಇದು ಮುಂದೆ ಬಿಡುಗಡೆಗೆ ಸಿದ್ಧವಿದ್ದ ಸಿನಿಮಾ ನಿರ್ಮಾಪಕರಲ್ಲಿ ಆತಂಕ ಮೂಡಿಸಿತ್ತು. ಆದರೆ, “777 ಚಾರ್ಲಿ’ ಈಗ ಆ ಆತಂಕವನ್ನು ದೂರ ಮಾಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾದ ಈ ಚಿತ್ರ ಈಗ ಭರ್ಜರಿ ಹಿಟ್ ಆಗಿದೆ.
Related Articles
Advertisement
ಕನ್ನಡ ಚಿತ್ರರಂಗದ ಮುಂಚೂಣಿ ನಿರ್ಮಾಪಕರೊಬ್ಬರು ಹೇಳುವಂತೆ, “ಯಾವ ಸಿನಿಮಾಕ್ಕೂ ಜನ ಬರುತ್ತಿಲ್ಲ ಎಂಬ ಸುದ್ದಿ ಕೇಳಿ ನನಗೆ ತುಂಬಾ ಬೇಸರವಾಗಿತ್ತು. ಚಿತ್ರರಂಗದಲ್ಲಿ ಏನಾಗುತ್ತಿದೆ ಎಂದು ಭಯಪಟ್ಟಿದ್ದೆ. ಆದರೆ, “777 ಚಾರ್ಲಿ’ ಚಿತ್ರದ ಕಲೆಕ್ಷನ್, ಪ್ರೇಕ್ಷಕರ ಪ್ರತಿಕ್ರಿಯೆ ನೋಡಿದಾಗ ನನಗೆ ಧೈರ್ಯ ಬಂದಿದೆ. ಇಂತಹ ಗೆಲುವು ಮತ್ತಷ್ಟು ಸಿನಿಮಾಗಳಿಗೆ ಸ್ಪೂರ್ತಿಯಾಗುತ್ತದೆ. ನನ್ನಂತೆ ಹಲವು ನಿರ್ಮಾಪಕರು ಈ ಗೆಲುವಿನಿಂದ ಖುಷಿಯಾಗಿದ್ದಾರೆ’ ಎನ್ನುತ್ತಾರೆ.
ಸರತಿಯಲ್ಲಿ ಇನ್ನಷ್ಟು ನಿರೀಕ್ಷಿತ ಸಿನಿಮಾಗಳು ಸ್ಯಾಂಡಲ್‌ವುಡ್‌ನ ಗೆಲುವಿನ ಪಯಣ ಇಲ್ಲಿಗೆ ಮುಗಿಯುವುದಿಲ್ಲ. ಮುಂದೆ ಮತ್ತಷ್ಟು ಭಿನ್ನ-ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಶಿವರಾಜ್‌ಕುಮಾರ್ ಅವರ “ಬೈರಾಗಿ’, ಸುದೀಪ್ ನಟನೆಯ “ವಿಕ್ರಾಂತ್ ರೋಣ’, ಗಣೇಶ್ “ಗಾಳಿಪಟ-2′, ಜಗ್ಗೇಶ್ “ತೋತಾಪುರಿ’, ಧನಂಜಯ್ “ಮಾನ್ಸೂನ್ ರಾಗ’, ಉಪೇಂದ್ರ “ಕಬj’ ಹೊಸಬರ “ಶುಗರ್ ಲೆಸ್’, “ವೆಡ್ಡಿಂಗ್ ಗಿಫ್ಟ್’, “ಸಪ್ತಸಾಗರದಾಚೆ ಎಲ್ಲೋ’,”ಲವ್ 360′, “ಕಾಂತಾರ’, “ಮಾರ್ಟಿನ್’, “ಕ್ರಾಂತಿ’.. ಹೀಗೆ ಲೆಕ್ಕ ಹಾಕುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಈ ಎಲ್ಲಾ ಸಿನಿಮಾಗಳು ಒಂದಲ್ಲ ಒಂದು ರೀತಿಯಲ್ಲಿ ನಿರೀಕ್ಷೆ ಹುಟ್ಟಿಸಿವೆ. ಈ ಸಿನಿಮಾಗಳು ಗೆಲುವು ಕೂಡಾ ಕನ್ನಡ ಚಿತ್ರರಂಗದ ಗೆಲುವಿನ ಓಟಕ್ಕೆ ಸಾಥ್ ನೀಡಲಿವೆ.
ಗೊಂದಲ ಮುಕ್ತ ರಿಲೀಸ್: ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಸಿನಿಮಾಗಳು ವಾರ ವಾರ ತೆರೆಕಾಣುತ್ತಿದ್ದರೂ ಯಾವುದೇ ಗೊಂದಲವಿಲ್ಲದೇ ಬಿಡುಗಡೆಯಾಗುತಿವೆ. ಕೆಲವು ವರ್ಷಗಳ ಹಿಂದೆ ರಿಲೀಸ್‌ಗೆ ಪೈಪೋಟಿ ಬಿದ್ದು, ಕೊನೆಗೆ ಅದು ಜಿದ್ದಿನ ರೂಪ ಪಡೆದು ಚಿತ್ರರಂಗದ ನೆಮ್ಮದಿ ಕೆಡಿಸುತ್ತಿತ್ತು. ಆದರೆ, ಸದ್ಯ ಆ ವಾತಾವರಣವಿಲ್ಲ. ಸ್ಟಾರ್‌ಗಳಿಂದ ಹಿಡಿದು ಹೊಸಬರವರೆಗೆ ಯಾವುದೇ ಗೊಂದಲವಿಲ್ಲದೇ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ. ಸ್ಟಾರ್ ಸಿನಿಮಾ ಬಿಡುಗಡೆಯಾಗುವ ವಾರ ಹೊಸಬರು ರಿಲೀಸ್ ಮಾಡದೇ, ಆ ನಂತರ ವಾರದಲ್ಲಿ ತಮ್ಮ ಸಿನಿಮಾ ಬಿಡುಗಡೆ ಮಾಡುತ್ತಾರೆ. ಉದಾಹರಣೆಗೆ ಜುಲೈ 01 ಶಿವಣ್ಣ “ಬೈರಾಗಿ’ ರಿಲೀಸ್ ಆಗುತ್ತಿರುವುದರಿಂದ ಆ ವಾರ ಹೊಸಬರ ದೂರ ಉಳಿದು, ಜುಲೈ 08ಕ್ಕೆ ತೆರೆಗೆ ಬರುತ್ತಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ ಕೂಡಾ.
ಕಡಿಮೆಯಾಯ್ತು ಕೆ.ಜಿ.ರೋಡ್ ಕ್ರೇಜ್: ಕೆಲವು ವರ್ಷಗಳ ಹಿಂದೆ ಸಿನಿಮಾ ಮಂದಿಯಲ್ಲಿ ಒಂದು ನಂಬಿಕೆ ಇತ್ತು, ಕೆ.ಜಿ.ರಸ್ತೆಯ ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಮಾಡಿದರೆ ಮಾತ್ರ ಅದು “ಶಾಸ್ತ್ರೋಕ್ತ’ ಬಿಡುಗಡೆ ಎಂದು. ಅದೇ ಕಾರಣದಿಂದ ಆ ರಸ್ತೆಯ ಚಿತ್ರ ಮಂದಿರಗಳನ್ನು ಹಿಡಿಯಲು ಪೈಪೋಟಿಗೆ ಬೀಳುತ್ತಿದ್ದರು. ಆದರೆ, ಈಗ ನೀವು ಸೂಕ್ಷ್ಮವಾಗಿ ಗಮನಿಸಿದರೆ ಕೆ.ಜಿ.ರಸ್ತೆಯ ಕ್ರೇಜ್ ಕಡಿಮೆಯಾಗಿದೆ. ಚಿತ್ರರಂಗಕ್ಕೆ ಬರುವ ಹೊಸಬರು ಸಿಂಗಲ್ ಸ್ಕ್ರೀನ್‌ಗಿಂತ ಮಲ್ಟಿಪ್ಲೆಕ್ಸ್ ಕಡೆ ಹೆಚ್ಚಿನ ಗಮನ ಕೊಟ್ಟರೆ, ಸ್ಟಾರ್ ಸಿನಿಮಾಗಳು ಕೂಡಾ ತಮ್ಮ ಪ್ರಮುಖ ಚಿತ್ರಮಂದಿರವನ್ನಾಗಿ ಪ್ರಸನ್ನ, ನವರಂಗ, ವೀರೇಶ್… ಸೇರಿದಂತೆ ಇತರ ಚಿತ್ರಮಂದಿರಗಳತ್ತ ವಾಲಿವೆ. ಇದಕ್ಕೆ ಕಾರಣ ಕೆ.ಜಿ.ರಸ್ತೆಯಲ್ಲಿ ಕಡಿಮೆಯಾದ ಚಿತ್ರಮಂದಿರಗಳ ಸಂಖ್ಯೆ. ಕೆಲವು ವರ್ಷಗಳ ಹಿಂದೆ ಇದ್ದ ಸಾಗರ್, ತ್ರಿಭುವನ್ ಚಿತ್ರಮಂದಿರಗಳ ಜಾಗದಲ್ಲಿ ಬೇರೆ ಮಳಿಗೆ ತಲೆ ಎತ್ತಿದರೆ, ಒಂದೇ ಕ್ಯಾಂಪಸ್‌ನಲ್ಲಿರುವ ಸಂತೋಷ್, ನರ್ತಕಿ, ಸಪ್ನಾ ಚಿತ್ರಮಂದಿರಗಳು ಸದ್ಯ ಪ್ರದರ್ಶನ ನಿಲ್ಲಿಸಿವೆ. ಇನ್ನು, ಭೂಮಿಕಾ ಚಿತ್ರಮಂದಿರದಲ್ಲಿ ತೆಲುಗು ಸಿನಿಮಾಗಳು ಹೆಚ್ಚು ಬಿಡುಗಡೆಯಾದರೆ, ಉಳಿದ ತ್ರಿವೇಣಿ ಹಾಗೂ ಅನುಪಮ ಚಿತ್ರಮಂದಿರಗಳು ಕನ್ನಡ ಸಿನಿಮಾಗಳಿಗೆ ತಿಂಗಳಿಗೆ ಮುಂಚೆಯೇ ಬುಕ್ ಆಗಿರುತ್ತವೆ. ಈ ಚಿತ್ರಮಂದಿರಗಳು ಬಹು ಬೇಡಕೆಯನ್ನು ಪಡೆದುಕೊಂಡಿವೆ. ಈ ಎಲ್ಲಾ ಕಾರಣಗಳಿಂದ ಸಿನಿಮಾ ಮಂದಿ ಅನಿವಾರ್ಯವಾಗಿ ಕೆ.ಜಿ.ರೋಡ್ ಕ್ರೇಜ್‌ನಿಂದ ಮುಕ್ತರಾಗುತ್ತಿದ್ದಾರೆ. ಜೊತೆಗೆ ಮಲ್ಟಿಪ್ಲೆಕ್ಸ್‌ಗೆ ಪ್ರೇಕ್ಷಕರು ಕೂಡಾ ಒಗ್ಗಿಕೊಂಡಿರುವುದರಿಂದ ಯಾವುದೇ ಸಮಸ್ಯೆ ಇಲ್ಲದೇ ಸಿನಿಮಾಗಳು ಬಿಡುಗಡೆಯಾಗುತ್ತಿವೆ.
ರವಿಪ್ರಕಾಶ್ ರೈ