Advertisement

ದೇವಾಲಯಗಳಿಗೆ ದತ್ತಿ  ಇಲಾಖೆ ಆಡಳಿತಾಧಿಕಾರಿ ನೇಮಕ

10:44 AM Mar 16, 2019 | |

ಗಂಗಾವತಿ: ಐತಿಹಾಸಿಕ ಪಂಪಾ ಸರೋವರದ ವಿಜಯಲಕ್ಷ್ಮೀ ದೇವಾಲಯ ಮತ್ತು ಆನೆಗೊಂದಿ ಶ್ರೀರಂಗನಾಥ ಸ್ವಾಮಿ ದೇವಾಲಯಗಳಿಗೆ ಧಾರ್ಮಿಕ ದತ್ತಿ ಇಲಾಖೆಯಿಂದ ಆಡಳಿತಾಧಿಕಾರಿ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿಗಳು ಶುಕ್ರವಾರ ಆದೇಶ ಹೊರಡಿಸಿದ್ದಾರೆ.

Advertisement

ಪಂಪಾ ಸರೋವರ ಹಾಗೂ ಆನೆಗೊಂದಿ ಶ್ರೀರಂಗನಾಥ ದೇವಾಲಯಗಳು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿದ್ದರೂ ಹಲವು ದಶಕಗಳಿಂದ ದೇವಾಲಯಗಳಿಗೆ ಆನೆಗೊಂದಿ ರಾಜವಂಶಸ್ಥ ರಾಮದೇವರಾಯಲು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ವಯೋ ಸಹಜದಿಂದಾಗಿ ತಮ್ಮ ಮಗ ಹರಿಹರದೇವರಾಯಲು ಅವರನ್ನು ದೇವಾಲಯಗಳಿಗೆ ಅಧ್ಯಕ್ಷರನ್ನಾಗಿ ಮಾಡಿ ಸಮಿತಿ ಪುನಾರಚನೆ ಮಾಡುವಂತೆ ಇತ್ತೀಚೆಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಈ ಕುರಿತು ಮಾಹಿತಿ ನೀಡುವಂತೆ ಗಂಗಾವತಿ ತಹಶೀಲ್ದಾರ್‌ ಅವರಿಗೆ ಆದೇಶ ಮಾಡಿದ್ದರು.

ಪಂಪಾ ಸರೋವರ ಮತ್ತು ಶ್ರೀರಂಗನಾಥ ಸ್ವಾಮಿ ದೇವಾಲಯ ಧಾರ್ಮಿಕ ದತ್ತಿ ಇಲಾಖೆಯ ನಿಯಮಗಳ ವ್ಯಾಪ್ತಿಯಲ್ಲಿರುವ ಕುರಿತು ತಹಶೀಲ್ದಾರ್‌ರು ಜಿಲ್ಲಾಧಿ ಕಾರಿಗೆ ವರದಿ ನೀಡಿದ್ದರು. ಇದನ್ನು ಪರಿಶೀಲಿಸಿ ಪಂಪಾ ಸರೋವರದ ಶ್ರೀವಿಜಯಲಕ್ಷ್ಮೀ  ದೇವಾಲಯ ಮತ್ತು ಆನೆಗೊಂದಿಯ ಶ್ರೀರಂಗನಾಥಸ್ವಾಮಿ ದೇವಾಲಯಗಳಿಗೆ ಜಿಲ್ಲಾಧಿಕಾರಿಗಳು ಆನೆಗೊಂದಿಯ ಗ್ರಾಮಲೆಕ್ಕಾಧಿಕಾರಿಯನ್ನು
ಕಾರ್ಯ ನಿರ್ವಾಹಣಾಧಿಕಾರಿಯಾಗಿ, ಕಂದಾಯ ನಿರೀಕ್ಷಕರನ್ನು ಆಡಳಿತಾಧಿಕಾರಿಯಾಗಿ ನೇಮಿಸುವಂತೆ ಆದೇಶ ನೀಡಿದ್ದಾರೆ.

ಸ್ಥಳೀಯರ ಆಕ್ರೋಶ: ಪಂಪಾ ಸರೋವರ ಹಾಗೂ ಆನೆಗೊಂದಿ ಶ್ರೀರಂಗನಾಥ ಸ್ವಾಮಿ ದೇವಾಲಯಗಳ ಸಮಿತಿ ಅಧ್ಯಕ್ಷರಾಗಿದ್ದ ರಾಜವಂಶಸ್ಥರನ್ನು ತೆಗೆದು ಹಾಕಿ ಧಾರ್ಮಿಕದತ್ತಿ ಇಲಾಖೆ ನಿಯಮಗಳ ನೆಪದಲ್ಲಿ ಕಾರ್ಯನಿರ್ವಾಹಕರು ಮತ್ತು ಆಡಳಿತಾ ಧಿಕಾರಿಗಳನ್ನು ನೇಮಿಸಿದ್ದಕ್ಕೆ ಆನೆಗೊಂದಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶನಿವಾರ ಶ್ರೀರಂಗನಾಥ ದೇವಾಲಯದಲ್ಲಿ ಸಭೆ ನಡೆಸಿ ಕೂಡಲೇ ಜಿಲ್ಲಾಧಿಕಾರಿಗಳು ಆದೇಶ ಹಿಂಪಡೆದು ಮೊದಲಿನಂತೆ ಸಮಿತಿಗೆ ರಾಜವಂಶಸ್ಥರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು. ಇಲ್ಲದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ, ಶ್ರೀರಂಗನಾಥಸ್ವಾಮಿ ಜಾತ್ರೆಯನ್ನು ಬಹಿಷ್ಕಾರ ಮಾಡಲು ನಿರ್ಧರಿಸಿದ್ದಾರೆ.

ಶಾಸಕರ ಭೇಟಿ: ಶಾಸಕ ಪರಣ್ಣ ಮುನವಳ್ಳಿ ಅವರನ್ನು ಆನೆಗೊಂದಿ ರಾಜವಂಶಸ್ಥರು ಹಾಗೂ ಸ್ಥಳೀಯರು ಭೇಟಿಯಾಗಿ ಪಂಪಾ ಸರೋವರ ಹಾಗೂ ಆನೆಗೊಂದಿ ಶ್ರೀರಂಗನಾಥ ಸ್ವಾಮಿ ದೇವಾಲಯಗಳ ಸಮಿತಿಯಿಂದ ರಾಜವಂಶಸ್ಥರನ್ನು ತೆಗದು ಹಾಕಿರುವುದು ರಾಜವಂಶಸ್ಥರಿಗೆ ಅವಮಾನ ಮಾಡಿದಂತೆ. ಕೂಡಲೇ ಸರಕಾರದ ಮಟ್ಟದಲ್ಲಿ ಮಾತನಾಡುವಂತೆ ಮನವಿ ಮಾಡಿದರು.

Advertisement

ಪಂಪಾಸರೋವರ ಹಾಗೂ ಶ್ರೀರಂಗನಾಥ ಸ್ವಾಮಿ ದೇವಾಲಯಗಳು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ ಜಿಲ್ಲಾ ಧಿಕಾರಿಗಳು ಕೇಳಿದ ಮಾಹಿತಿಯಂತೆ ವರದಿ ನೀಡಲಾಗಿದೆ. ರಾಜವಂಶಸ್ಥರನ್ನು ಸಮಿತಿಯಿಂದ ತೆಗೆದು ಹಾಕುವಂತೆ ವರದಿ ನೀಡಿಲ್ಲ. ಸರಕಾರದ ನಿಯಮಗಳಂತೆ ಇದುವರೆಗೂ ಇದ್ದ ಸ್ಥಿತಿ ಕುರಿತು ಜಿಲ್ಲಾ ಧಿಕಾರಿಗಳಿಗೆ ಮಾಹಿತಿ ರವಾನೆ ಮಾಡಲಾಗಿದೆ. ಶೀಘ್ರವೇ ಜಿಲ್ಲಾಧಿಕಾರಿಗಳ ಆದೇಶದಂತೆ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರನ್ನು ಕಾರ್ಯನಿರ್ವಾಹಕ ಹಾಗೂ ಆಡಳಿತಾಧಿಕಾರಿಯಾಗಲಿದ್ದಾರೆ.
ವೀರೇಶ ಬಿರಾದಾರ್‌,
ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next