ಹುಣಸೂರು: ತಾಲೂಕಿನ ಹೊಸಕೋಟೆ (ತಟ್ಟೆಕೆರೆ ಗೇಟ್)ಯಲ್ಲಿ ಶ್ರೀರಾಮ ನವಮಿಯಂದು ಪುಟ್ಟ ಕಂದಮ್ಮಗಳನ್ನು ರಥದ ಕೆಳಗೆ ಮಲಗಿಸಿ ತೇರು ಎಳೆಯುವ, ಉತ್ಸವ ಮೂರ್ತಿಯನ್ನು ಉಯ್ನಾಲೆಯಲ್ಲಿಟ್ಟು ಪೂಜೆ ಸಲ್ಲಿಸಿ ಉಯ್ನಾಲೆಯಾಡಿಸುವ ಹಾಗೂ ಹೆಂಗಸರು – ಮಕ್ಕಳು ಸೇರಿದಂತೆ ಎಲ್ಲರು ಸೇರಿ ರಥ ಎಳೆದು ಪುನೀತರಾಗುವ ವಿಶಿಷ್ಟ, ವಿಜೃಂಭಣೆಯ ಶ್ರೀ ಆಂಜನೇಯ ಸ್ವಾಮಿ ರಥೋತ್ಸವದಲ್ಲಿ ಜನರು ಉತ್ಸುಕತೆಯಿಂದ ಭಾಗವಹಿಸಿದ್ದರು.
ಬೆಳಗ್ಗೆಯಿಂದಲೇ ಪೂಜಾ ವಿಧಿವಿಧಾನ ಆರಂಭಗೊಂಡು 10 ಗಂಟಗೆ ಬಣ್ಣಬಣ್ಣದ ಬಾವುಟ – ಹೂವಿನಿಂದ ಅಲಂಕೃತಗೊಂಡಿದ್ದ ರಥವನ್ನು ಹೆಂಗಸರು, ಮಕ್ಕಳೆನ್ನದೆ ಎಲ್ಲರೂ ಭಕ್ತಿಭಾವದಿಂದ ಎಳೆದರು. ಹುಣಸೂರು – ಹನಗೋಡು ಮುಖ್ಯರಸ್ತೆಯ ಹೊಸಕೋಟೆ ಕೆರೆಯವರೆಗೆ ಎಳೆದು ಮತ್ತೆ ಹಿಮ್ಮುಖವಾಗಿ ಎಳೆತಂದು ಮುಖ್ಯರಸ್ತೆ ಬದಿಯಲ್ಲಿ ನಿಲ್ಲಿಸಿದರು. ಸಂಜೆ ರಥವನ್ನು ಮತ್ತೆ ದೇವಸ್ಥಾನದ ಆವರಣಕ್ಕೆ ಎಳೆದು ತರಲಾಯಿತು.
ಉತ್ಸವ ಮೂರ್ತಿಗೆ ಉಯ್ನಾಲೆ: ಶ್ರೀರಾಮ, ಸೀತಾ, ಲಕ್ಷಣ, ಆಂಜನೇಯ ಉತ್ಸವ ಮೂರ್ತಿಯನ್ನು ರಥಕ್ಕೇರಿಸುವ ಮುನ್ನಾ ದೇವಾಲಯದಿಂದ ಮೆರವಣಿಗೆಯಲ್ಲಿ ತಂದು ಮಹಿಳೆಯರು ಪೂಜೆ ಸಲ್ಲಿಸಿ ನಂತರ ಉಯ್ನಾಲೆಯಾಡಿಸಿದರು. ನಂತರ ಉತ್ಸವ ಮೂರ್ತಿಯನ್ನು ರಥದ ಸುತ್ತ ಪ್ರದಕ್ಷಿಣೆ ಹಾಕಿಸಿ ರಥದ ಮೇಲಕ್ಕೇರಿಸಿದರು.
ತೇರಿನ ಕೆಳಗೆ ಕೈಗೂಸುಗಳು: ಸಂಪ್ರ ದಾಯದಂತೆ ರಥೋತ್ಸವಕ್ಕೂ ಮುನ್ನಾ 10ಕ್ಕೂ ಹೆಚ್ಚು ಮಕ್ಕಳನ್ನು ರಥದ ಕೆಳೆಗೆ ಮಲಗಿಸಿ ಹರಕೆ ತೀರಿಸಿದರು. ಹರಕೆ ಹೊತ್ತ 6 ತಿಂಗಳಿಂದ 3 ವರ್ಷದ ಪುಟ್ಟ ಮಕ್ಕಳನ್ನು ದೊಡ್ಡವರ ರಕ್ಷಣೆಯೊಂದಿಗೆ ರಥದ ಕೆಳಗೆ ಸಾಲಾಗಿ ಮಲಗಿಸಿ ನಂತರ ರಥವನ್ನು ಭಕ್ತಿ ಭಾವದಿಂದ ಎಳೆದರು.
ಅನ್ನದಾನ: ಜಾತ್ರೆಗೆ ಸುತ್ತಮುತ್ತಲ ಗ್ರಾಮಸ್ಥರು ಹಾಗೂ ದೂರದ ಊರುಗಳಿಂದ ಬರುವ ಸುಮಾರು 5 ಸಾವಿರಕ್ಕೂ ಹೆಚ್ಚು ಭಕ್ತಾದಿಗಳಿಗೆ ದೇವಸ್ಥಾನ ಸಮಿತಿಯಿಂದ ಊಟ ವ್ಯವಸ್ಥೆ ಕಲ್ಪಿಸಲಾಗಿತ್ತು. ಹರಕೆ ಹೊತ್ತವರು ಹಾಗೂ ಭಕ್ತರು ಊಟದ ವ್ಯವಸ್ಥೆಗಾಗಿ ಅಕ್ಕಿ, ತರಕಾರಿ ನೀಡುವ ಮೂಲಕ ನೆರವಾದರು. ರಥೋತ್ಸವ ನಂತರ ಕೋಸಂಬರಿ, ಪಾನಕ ವಿತರಿಸಲಾಯಿತು. ಎಸ್‌ಐ ಪುಟ್ಟಸ್ವಾಮಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಇಂದು ತೆಪ್ಪೋತ್ಸವ: ಗುರುವಾರ ಸಂಜೆ 4 ಗಂಟೆಗೆ ತಟ್ಟೆಕೆರೆ ಗೇಟ್ ಹೊಸಕೋಟೆ ಕೆರೆಯಲ್ಲಿ ತೆಪ್ಪೋತ್ಸವ ನಂತರ ಹೊಸಕೋಟೆ ಗ್ರಾಮದಲ್ಲಿ ದೇವರ ಉತ್ಸವ ನಡೆಯಲಿದೆ.