ಚನ್ನರಾಯಪಟ್ಟಣ: ತಾಲೂಕಿನ ಕಸಬಾ ಹೋಬಳಿ ಶೆಟ್ಟಿಹಳ್ಳಿ ಗ್ರಾಮದ ಅಧಿದೇವತೆ ಶೆಟ್ಟಾಳಮ್ಮನವರ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಸಮಾರಂಭ ಅದ್ದೂರಿಯಾಗಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.
ಗ್ರಾಮದ ಸುತ್ತ ಮುತ್ತಲಿನ ಸುಮಾರು 7 ಗ್ರಾಮದಿಂದ ಆಗಮಿಸಿದ್ದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ದಿಂಡಗೂರಿನಲ್ಲಿರುವ ಉತ್ಸವ ಮೂರ್ತಿ ಶೆಟ್ಟಾಳಮ್ಮ ಹಾಗೂ ಸಂತ್ಯಮ್ಮ ದೇವತೆಯ ಉತ್ಸವ ಮೂರ್ತಿಯನ್ನು ಗ್ರಾಮದ ಮುಖ್ಯಸ್ಥರು ಹಾಗೂ ಯುವಕರು ಉತ್ಸವದ ಮೂಲಕ ಶೆಟ್ಟಿಹಳ್ಳಿ ಗ್ರಾಮಕ್ಕೆ ಕರೆತಂದರು.
ಬಾಳೆಯ ಕಂದಿನ ಅಲಂಕಾರ: ಕುರುಬರ ಕಾಳೇನಹಳ್ಳಿ ಗ್ರಾಮಸ್ಥರು ಮಾವಿನ ಹಾಗೂ ಬಾಳೆಯ ಕಂದಿನಿಂದ ಅಲಂಕೃತವಾದ ಎತ್ತಿನ ಬಂಡಿ ಎಳೆದರೆ ಉಪವಾಸವಿದ್ದ ಮಳೆಯರು ಬಾಯಿಗೆ ಬೀಗ ಹಾಕಿಸಿಕೊಂಡು ಬಂಡಿಯ ಹಿಂದೆ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದರು. ಈ ವೇಳೆ ಕೋಲಾಟ, ವೀರಗಾಸೆ ಕುಣಿತ ನಡೆಯಿತು.
ಗ್ರಾಮಸ್ಥರ ಭಾಗಿ: ಜೋಗಿಪುರ, ನಂದಿಪುರ, ಅರಳಾಪುರ, ಕುರುಬರ ಕಾಳೇನಹಳ್ಳಿ, ಚಿಕ್ಕೇನಹಳ್ಳಿ, ಹಾಗೂ ದಿಂಡಗೂರಿನ ಗ್ರಾಮಸ್ಥರೆಲ್ಲಾ ಒಟ್ಟಾಗಿ ಜಾತ್ರಾ ಮಹೋತ್ಸವ ಆಚರಿಸಿದರು. ಬೆಳಗ್ಗೆ ದೇವಸ್ಥಾನದ ಅರ್ಚಕರು ಉತ್ಸವ ಮೂರ್ತಿಗೆ ಸಂಪ್ರೋಕ್ಷಿಣೆ, ಪುಣ್ಯಸ್ನಾನ ಹಾಗೂ ವಿಶೇಷ ಅಲಂಕಾರ ಮಾಡಿ ಶೆಟ್ಟಾಳಮ್ಮ ದೇವರ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿದರು. ಗೊನೆ ಸಮೇತವಾಗಿ ನೆಟ್ಟಿದ್ದ ಬಾಳೆಕಂದನ್ನು ಸೋಮನ ವೇಷಾಧಾರಿ ಕಡಿದು ರಥೋತ್ಸವಕ್ಕೆ ಚಾಲನೆ ನೀಡಿದರು.
ದೇವರ ಮೆರವಣಿಗೆ: ಮರುದಿವಸ ಬೆಳಗ್ಗೆ 8 ಗಂಟೆಗೆ ಶೆಟ್ಟಾಳಮ್ಮದೇ ಹಾಗೂ ಸಂತ್ಯಮ್ಮ ದೇವಿಯ ವಿಗ್ರಹವನ್ನು ಬೆಳ್ಳಿ ರಥದಲ್ಲಿ ಪ್ರತಿಷ್ಠಾಪಿಸಿ ನಾಸಿಕ್ ಡೋಲ್ ಮತ್ತು ಮಂಗಳ ವಾದ್ಯಗಳೊಂದಿಗೆ ಊರಿನ ಪ್ರಮುಖ ಬೀದಿಯಲ್ಲಿ ಭಕ್ತರು ಮೆರವಣಿಗೆ ಮಾಡಿದರು. ರಥೋತ್ಸವ ಆಚರಣೆಯಾದ ಸಂಜೆ ಗ್ರಾಮಕ್ಕೆ ಉತ್ಸವ ಮೂರ್ತಿತಂದು ರಾತ್ರಿಪೂರ್ತಿ ಮೆರವಣಿಗೆ ಮಾಡಿದರು.
ಜಾತ್ರಾ ಮಹೋತ್ಸವದಲ್ಲಿ ಸಂಸದೀಯ ಕಾರ್ಯದರ್ಶಿ ಎಂ.ಎ.ಗೋಪಾಲಸ್ವಾಮಿ, ಶಾಸಕ ಸಿ.ಎನ್.ಬಾಲಕೃಷ್ಣ, ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಎನ್.ಪುಟ್ಟಸ್ವಾಮಿಗೌಡ ಹಾಗೂ ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.